ಕವನ,ಕವಿತೆ ಬರೀಬೇಕಂತ ಅನ್ಕೊಂಡಿದೀಯ..ಆಯ್ತು.ಆದ್ರೆ ಒಂದ್ ವಿಷ್ಯ ತಿಳ್ಕೋ ಈ ಬರಹಗಳ ಜಗತ್ತಿಗೆ ಮೊದಲು ಕಾಲಿಡ್ತಾ ಇಡ್ತಾ ಏಕ್ ದಂ ಒಂದೇ ಉಸುರಿಗೆ ನಿನ್ನ ಕಲ್ಪನೆಗಳನ್ನೆಲ್ಲ ಕೆತ್ತಿ ನಿಲ್ಲಿಸ್ತೀಯ ಅಂದ್ರೆ ಅದು ಆಗದ ಮಾತು.ಮೊದಲು ಕಲ್ಪನೆಗಳು ಶುದ್ಧವಾಗಿರಬೇಕು,ಚಪ್ಲಿ ಇಲ್ದೇ ದೇವಸ್ಥಾನಕ್ಕೆ ಹೋಗ್ಬೇಕು ಅಂತಾರಲ್ಲ ಹಾಗೆ.ಆಮೇಲೆ ವರ್ಣನೆಗಳಿಗೆ ನೀಟಾದ ರೂಪ ಕೊಡೋದನ್ನ ಕಲೀಬೇಕು,ಕಲೀಬೇಕಂದ್ರೆ ಲೈಬ್ರರಿಯ ಒಂದು ಸಾಲನ್ನಾದ್ರೂ ನುಂಗಿ ಜೀರ್ಣಿಸಿರಬೇಕು.
ನಿನ್ನ ಕವಿದಿಕ್ಕಿನ ರಸ್ತೆ ಬೇರೆ ಬೇರೆ ಆಯಾಮಗಳಲ್ಲಿ ಹಾದು ಹೋಗುತ್ತೆ,ಹೋಗಲೇಬೇಕು.ಮೊದಲ ಹಂತದಲ್ಲಿ ನಿನ್ನ ಪ್ರತಿಯೊಂದು ಮೊದಮೊದಲ ಕಿರುಗವಿತೆಗಳು ಪ್ರಾಸದ ಪಂಜರದಲ್ಲಿ ಸಿಕ್ಕಿಹಾಕ್ಕೊಳ್ತಾ ಇರ್ತವೆ.ಮುಂಚೆ ಏನು ಬರೆದರೂ ಕೊನೆಯಲ್ಲಿ ಮತ್ತದೇ ಪ್ರಾಸದಲ್ಲಿ ಕೊನೆ.ಅರ್ಥವಿಲ್ಲದ್ದನ್ನ ಸುಮ್ಸುಮ್ನೇ ಬರೆದು ಪ್ರಾಸ ಮಾತ್ರ ಸರಿಯಾಗಿರುವಂತೆ ನೋಡಿಕೊಳ್ತೀಯ ನೀನು..! ಹೀಗೇ ಒಂದಿಪ್ಪತ್ತೈದು ಕವನಗಳನ್ನ ಗೀಚಿದ ಮೇಲೆ ನಿಧಾನವಾಗಿ ಪ್ರಾಸದ ಅನಗತ್ಯತೆ ನಿನ್ನ ಗಮನಕ್ಕೆ ಬಂದು ಮುಂದಿನವುಗಳಲ್ಲಿ ಅದು ನಿಂಗೆ ಗೊತ್ತಿಲ್ದೇನೇ ಕಣ್ಮರೆಯಾಗಿರುತ್ತೆ.
ನಂತರದ ಆಯಾಮ ಬಹಳ ದಿನ ಇರುವಂಥದ್ದು:ಪ್ರೀತಿ,ಪ್ರೇಮಗಳ ಮೇಲಿನ ನಿನ್ನ ಪೆನ್ನಿನಾಟ. ಅವಳು,ಅವನು,ಮಲ್ಲಿಗೆ,ನೋಟ,ಜಡೆ,ಅದು ಇದು ಅಂತ ಎಂತೆಂಥಾ ಅದ್ಭುತಗಳನ್ನೇ ನೀನು ಹುಟ್ಟಿಸಿರ್ತೀಯ ಗೊತ್ತಾ..ನೀನು ಹಾಗೇ ಬರೀತಿದ್ರೆ ಪಾಟಿನಲ್ಲಿನ ಗುಲಾಬಿಗೆ ಬಾಡೋದೂ ಮರೆತುಹೋಗಿರುತ್ತೆ..! ಚಂದಮಾಮ,ಬಾಲಮಂಗಳದ ಬದಲು ಬೆಳಗೆರೆ ಬಂದಿರ್ತಾನೆ ನಿಮ್ಮನೆಗೆ.ಬೇರೆಯವರ ಕಮೆಂಟಿಗೆ,ಒಂದಿಷ್ಟು 'ಭೇಷ್'ಗೆ,ಹಾರೈಕೆಗೆ ಕಾಯೋಕೆ ಶುರುಹಚ್ಚಿಕೊಳ್ತೀಯ ನೀನು. ನಿನ್ನನ್ನ ನೀನು ಎಷ್ಟು ಬೇಗ ಈ ಆಯಾಮದಿಂದ ಹೊರದಬ್ಬುತ್ತೀಯೋ ಅಷ್ಟು ಬೇಗ ನೀನು ಅರ್ಧ ಮಾಗಿಬಿಟ್ಟೆ ಅಂತಲೇ ಅರ್ಥ.ಅದಕ್ಕಿರೋ ಒಂದೇ ದಾರಿ ಅಂದ್ರೆ ಮುಂದಿನ ಹಂತದ ಕಡೆಗಿನ ನಿನ್ನ ನೋಟ,ಓಟ.
ಮುಂದಿನದ್ದು ನೆನಪುಗಳ ಮಂಚ.ಹಿಂದೆಲ್ಲೋ ನಿನ್ನ ಬದುಕಲ್ಲಿ ಬಂದು ಹೋದ,ಕಂಡು ಬಿಟ್ಟ,ಛಕ್ಕನೆ ಅಲ್ಲೆಲ್ಲೋ ಮೂಡಿದ,ಆಡಿದ,ಒಡನಾಡಿದ ಸಂದರ್ಭಗಳನ್ನ ಕಟ್ಟಿಕೊಡೋಕೆ ಪ್ರಯತ್ನಿಸ್ತೀಯ.ಕಟ್ಟಿಕೊಡೋದರ ಯಶಸ್ಸಿಗೆ ಬೇಕಾದ ಪದ,ಪಾಂಡಿತ್ಯ,ಪಾತ್ರಗಳು ನಿನ್ನಲ್ಲಷ್ಟುಹೊತ್ತಿಗೆ ಕಾಲ್ಕೆಳಗಿರುತ್ತೆ.ಪ್ರಯತ್ನ ಒಳ್ಳೆಯದ್ದೇ.ಆದರೆ ಈ ಮಧ್ಯೆ ಬೇಡದ,ನೆನಪಿಸಿಕೊಳ್ಳಬಾರದೆನಿಸಿದ ಅದೆಷ್ಟೋ ನೆನಪುಗಳು ಉಮ್ಮಳಿಸಿಬರುವ ವಾಂತಿಯಂತೆ ಬಿಳಿಹಾಳೆಯ ಮೇಲೆ ಹರಡಿಕೊಂಡುಬಿಡುವ ಅಪಾಯ ಇರಬಹುದು.ಭಗ್ನಕವಿತೆಗಳ ಮುಷ್ಟಿಗೆ ಸಿಕ್ಕಿಬಿಡ್ತೀಯ ಆಮೇಲೆ. ಅರ್ಧದಲ್ಲೇ ಎದ್ದುಹೋದ ಹುಡುಗಿ ದಿಕ್ಕಿಗೆ ಮತ್ತೆ ತಿರುಗದೇ ಮುಂದಿನ ಹಂತ ನೋಡು,ಮುಕ್ಕಾಲು ಉದ್ಧಾರ ಆಗ್ತೀಯ.
ಹೀಗೆ ನಿಂಗೆ ಸಿಕ್ಕಿದ್ದು ಈ ಹಂತ:ನಾಲ್ಕನೇ ಆಯಾಮ.ಇದು ನಿನ್ನ ಕವಿತ್ವದ ಪಾಲಿನ ಬಹುಮುಖ್ಯ ಹಾಗೂ ಅಷ್ಟೇ ಸೂಕ್ಷ್ಮದ ಹಂತ.ಇಲ್ಲಿ ನೀನು ಓದೋಕೆ,ಬರೆಯೋಕೆ,ಜೀವಿಸೋಕೆ ಇಷ್ಟಪಡೋದು ನಿನ್ನ ಸುತ್ತಲಿನ ಸಮಾಜದ ಆಗುಹೋಗು,ಬೇಕುಬೇಡ,ಹುಳುಕುಬಳುಕು,ಕೀಟಲೆಕಾಮಗಳ ಮಧ್ಯೆ. ಇಲ್ಲಿ ಏನು ಬೇಕಾದರೂ ಬರೆಯೋ ಅವಕಾಶವಿದೆ ನಿಂಗೆ,ಹಕ್ಕಿಲ್ಲ..! ಸಮಾಜಮುಖಿ ವಿಷಯಗಳನ್ನ ಎಷ್ಟು ಸೂಕ್ಷ್ಮವಾಗಿ ಓದುಗನಿಗೆ ತಲುಪಿಸ್ತೀಯ ಅನ್ನೋದೊಂದು ಸವಾಲಾಗಿ ನಿಲ್ಲುತ್ತೆ ಇಲ್ಲಿ.ಒಂದು ವಿಷಯದ ಬಗ್ಗೆ ಒಂಚೂರು ತಾಳಮೇಳ ಮುಗ್ಗರಿಸಿಬಿಟ್ಟಿತೆಂದರೆ ಸಿಕ್ಕಿದವರು ಹರಿದು ಮುಗಿಸಿಬಿಡ್ತಾರೆ ನಿನ್ನ,ಬರಹಗಳನ್ನ.ಹಾಗಾಗಿ ಧರ್ಮ,ಜಾತಿ,ವ್ಯಕ್ತಿ,ಹೆಣ್ಣು ಇವುಗಳ ಬಗ್ಗೆ ನಿನ್ನ ನಡೆಗೆ ಸ್ವಲ್ಪ ಜಾಗ್ರತೆ ಕೊಡು.ಸಮಯ,ಸ್ವಾತಂತ್ರ್ಯ,ಹಕ್ಕು ದಕ್ಕಿದಾಗ ನೋವಾಗದಂತೆ ಮಗ್ಗಲು ಮುರಿ..! ಈ ಆಯಾಮದಲ್ಲಿ ನಿನಗೆ ಕಥೆ,ಕಾದಂಬರಿ ಬರೆಯುವುದೂ ಕರಗತವಾಗಿರುತ್ತೆ.ನಿನ್ನ ಹಲವು ಬರಹಗಳು ಪತ್ರಿಕೆಗಳಲ್ಲೂ ಬಂದು ನಿನ್ನದೇ ಆದ ಓದುಗ ಬಳಗವನ್ನ ಹುಟ್ಟಿಸಿಕೊಂಡಿದ್ದರೂ ಆಶ್ಚರ್ಯವಿಲ್ಲ.. ಈ ಹಂತದ ಜಂಭ,ಮೀಸೆಯೇರಿಸುವಿಕೆ,ಹುಂಬತನಗಳು ಬಹುತೇಕ ಕವಿಗಳಲ್ಲಿ ಮದುವೆ ಸೀಸನ್ ಬೇಧಿಯಷ್ಟೇ ಕಾಮನ್..! ಅದು ತಂತಾನೇ ನಿಲ್ಲೋಕೆ ಬಿಟ್ಬಿಡು.ಮುಂದಿನ ಆಯಾಮ ತಂತಾನೇ ಮುಂದೆ ನಿಂತಿರುತ್ತೆ..!
ಐದನೇಯದ್ದು:ಇಲ್ಲಿ ನೀನು ಬರೆಯೋ ಕಥೆ,ಕವಿತೆಗಳ ಅರ್ಥ ಅಷ್ಟು ಸುಲಭವಾಗಿ ಓದುಗನಿಗೆ ಗೊತ್ತಾಗೋದಿಲ್ಲ.ಒಂಥರಾ ಪಾರಮಾರ್ಥಿಕ ಚೌಕಟ್ಟು,ಮೈಕಟ್ಟು ಮೂಡಿರುತ್ತವೆ ಅವುಗಳಿಗೆ.ಕಣ್ಣಿಗೆ ಕಾಣದ ಒಂದು ಸಣ್ಣ ಧೂಳು,ನಿನ್ನಿಂದ,ಓದುತ್ತಿರುವವನಿಗೆ ಹತ್ತು ಸಾಲುಗಳ,ಭಾರದ ನಿರೂಪಣೆಯಾಗಿ ಗೋಚರವಾಗಿರುತ್ತದೆ..! ಅಥವಾ ಧೂಳಿನ ವಿಷಯ ಬಿಟ್ಟು ಅಲ್ಲಿ ಬೇರೆ ಇನ್ನೇನೋ ಕಂಡು ಚಪ್ಪಾಳೆ ತಟ್ಟಿರ್ತಾನೆ ಅವ..! ಆದರೆ ಇಲ್ಲಿ ನೀನು ಬರೆಯೋ ಕವನಗಳು ಅತ್ಯಂತ ಉಚ್ಛ ಮಟ್ಟದ್ದಾಗಿರುತ್ತವೆ ಅನ್ನೋದು ಸತ್ಯ.ನಿನ್ನೊಂದಷ್ಟು ಕವಿತೆಗಳು,ಜನ ಮಲ್ಕೊಳೋವಾಗ ಕೇಳಿ ಕಣ್ಮುಚ್ಚೋ ಸಿನಿಮಾ ಹಾಡುಗಳಾಗಿಯೂ ಬದಲಾಗಿರಬಹುದು..! ಈ ಹಂತ ದಾಟಿದೆಯೋ ಮುಂದಿನ ಹೆರಿಗೆ ಸಲೀಸು..!
ಕೊನೆಯ,ಆರನೆಯ ಆಯಾಮ: ಇದು ನೀರಿನ ಗುಳ್ಳೆ ಒಡೆದಷ್ಟು ಸುಲಭವಿರುತ್ತದೆ ನಿನಗೆ.ಇಲ್ಲಿ ನೀನು ಪ್ರಾಸ ಬಳಸುತ್ತೀಯೋ,'ಪ್ರೀತಿ' ತೋರಿಸ್ತೀಯೋ,ನೆನಪು ಹೆಕ್ಕಿ ಗೀಚ್ತೀಯೋ,'ಜಾತಿ'ಗೆ ಸೇರ್ತೀಯೋ,ಅದ್ವೈತವೋ,ವಿಶಿಷ್ಠಾದೈತವೋ ಎಲ್ಲಕ್ಕೂ ಅಶ್ವಿನಿ ಅಸ್ತು ಅಂತಾಳೆ.ಬರ್ದಿದ್ದೆಲ್ಲಾ ಹಾಡು,ಶಾಲೆಪದ್ಯ,ಸಾಹಿತ್ಯ ವೇದಿಕೆ-ಸಮ್ಮೇಳನಗಳ ಬ್ಯಾನರಿನಲ್ಲಿ ನಿನ್ನ ಕಾವ್ಯನಾಮ,ಅಷ್ಟಿಷ್ಟು ಬಿಳಿಕೂದಲು,ನಿನ್ನ ಬರಹಗಳ TRP ಹೆಚ್ಚಿಸೋ ಒಂದಷ್ಟು ಸಂವಾದ,ಟೀಕೆಗಳು.. ಅಬ್ಬಬ್ಬಾ.. ಇಲ್ಲಿ ಗ್ಯಾರಂಟಿ ನಿನ್ನ ಆತ್ಮಕಥೆ ಬರೆಯೋಕೆ ಶುರುಮಾಡಿರ್ತೀಯ ನೀನು..!
ಹೇಳೋಕೆ ಹೋದ್ರೆ ಇನ್ನೂ ಸಾಕಷ್ಟಿದೆ,ತಾಕತ್ತಿದೆ.ಆದರೆ ನೀನಿನ್ನೂ ಸಾಹಿತ್ಯದ ಅ ಆ ಇ ಈ ಕಲಿಯುತ್ತಿರೋ ಅಂಬೆಗಾಲ ಕೂಸು.. ನಾನಿಷ್ಟು ಹೇಳಿದರೂ,ಗೊತ್ತಾಯಿತೆಂದು ಒಂದೇ ಸಲ ನಾಲ್ಕು-ಐದನೇ ಆಯಾಮಗಳಿಗೆ ಹೋಗಿಬಿಡುತ್ತೇನೆ ಅಂದುಕೊಂಡರೆ ಅದು ಅಪ್ಪನ ಬೂಟು ಹಾಕಿದಂತೆಯೇ. ಪುಟ್ಟ ಪಾದಕ್ಕೆ ಪುಟ್ಟ ಚಪ್ಪಲಿಯೇ ಚಂದ ತಿಳ್ಕಾ.
ಹಿಂಗಂದು ಠಣ್ಣನೆ ಮಾಯವಾಗಿಹೋದರು ಕಡಲತೀರದ ಭಾರ್ಗವ..! ಕಣ್ಣುಜ್ಜಿ ಎದ್ದು ಹಾಳೆ,ಪೆನ್ನು ಕೈಗೆತ್ತಿಕೊಂಡೆ,ಬರೆದೆ..
"ಪಕ್ಕದ್ಮನೆ ಅಂಕಲ್ ಬಾಲು
ಮಮ್ಮಿ ಕೊಟ್ರು ಹಾಲು.."
ಓಹ್.. ನಂದಿನ್ನೂ ಮೊದಲ ಹಂತ..!!!
ನಿರಾಶನಾಗದೇ ನಂತರದ ಹತ್ತು ಸಾಲುಗಳ ಕೊನೆಯಲ್ಲೂ 'ಲು' ಬರೆದೆ..!