About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Wednesday, October 17, 2012

ಇದೇ ಬದುಕು ಬೇಕಿದೆ.

ಹೆಪ್ಪುಗಟ್ಟಿ ಅಂಡೂರಿ ಕುಂತಿದ್ದ
ಹತ್ತಾಸೆಗಳಿಗೆ
ಮತ್ತೆ ಹರಿವು ಸಿಕ್ಕಿದೆ..
ಕುಲಾವಿ ಹೊಲಿಯುವ ಕ್ಷಣಕ್ಕೆ ಕಾದಿರುವ
ಗಂಡು ಬಾಣಂತಿ ನಾನು..

ಪಣಕ್ಕಿಟ್ಟ ಒಂಭತ್ತು ಮಾಸಗಳು
ಬೇಡದ ನೈವೇದ್ಯವಾಗಲಿಲ್ಲ,
ನಾನೇ ಗೀಚಿ,ನಟಿಸಿ,ನಿರ್ದೇಶಿಸಿ,ನಡೆಸಿದ
ನಾಟಕಕ್ಕೆ
ನಾನೇ
ಪ್ರೇಕ್ಷಕ ಪ್ರಭುವೂ ಆಗಿದ್ದೆ..!

ಬೀಡಾಡಿ ಕುನ್ನಿಗಳಂತಿದ್ದ
ಕೆಲ ಕೆಟ್ಟಕನಸುಗಳು
ತುಂಡುಬಾಲ ಮುದುರಿ
ಇಂದು ತೆಪ್ಪಗಾಗಿವೆ.
ಸೋನೆಯಲ್ಲ ಇದು..
ದಪ್ಪ ಹನಿಗಳ ಕುಂಭದ್ರೋಣವೆಂದು
ಅವಕ್ಕೂ ಗೊತ್ತಾಗಿದೆ..

ಅದುರುವ ಆಸೆಗಳ ಬುನಾದಿಗೆ
ಎರಡಿಂಚು ಮರಳು ಜಾಸ್ತಿ ಬಿದ್ದಿದೆ.
ಆದರೂ..
ಭವಿತದ ಕಳಶ ಸ್ಥಾಪನೆಯ ಸೆಳೆತ
ಶೀಘ್ರಸ್ಖಲನವಾಗಬಾರದಲ್ಲ..!

ಹಾಗಾಗಿ..

ಬಿಕ್ಕಿದ್ದು,ಬಿಕ್ಕಲಿರುವುದ ಕೊಡವಿ
'ಇಂದು' ಮಾತ್ರ ನಂದೆಂದು
ಇವತ್ತಿನ ನನ್ನತನವನ್ನಪ್ಪಬೇಕಿದೆ
ಹರಿವಿನೊಂದಿಗೆ ನುಗ್ಗಬೇಕಿದೆ,
ಕ್ಷಣಗಳಲ್ಲಿ ಬದುಕಬೇಕಿದೆ,
ಇದೇ ಬದುಕು ಬೇಕಿದೆ.

ಮರೆತೆ..

ಗಾಂಧಿಬಜಾರಿನಿಂದ
ಕುಲಾವಿಗೊಂದು ಸೂಜಿ ತರಬೇಕಿದೆ..!

No comments:

Post a Comment