About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Tuesday, October 23, 2012

ನಿಲ್ಲದಿದು ಕಾಲ..

ಗಡಿಯಾರದ ಮಡಿಲಲ್ಲಿ
ಮುಳ್ಳಿಡುವ ಮುಂಚೆ
ಒಮ್ಮೆಯೂ ಯೋಚಿಸಿರಲಿಲ್ಲವೇ ಇಟ್ಟವನು? :
ತನ್ನ ತಾರುಣ್ಯದ ಕೊಲೆ
ಅಲ್ಲಿಂದಲೇ ಎಂದು?

ದೊಡ್ಡವನಾಗಬಾರದಿತ್ತು ನಾನು..
ಅಕ್ಕನ ಮರಳುಗೂಡು ಪಕ್ಕದಲ್ಲೇ ಇರುತ್ತಿತ್ತು,
ಮೂರೊತ್ತು ಸಂಧ್ಯಾವಂದನೆಯ
ಕಷ್ಟವಿರುತ್ತಿರಲಿಲ್ಲ,
ನನ್ನವೇ ಕಣ್ಣುಗಳಿಗೆ
ಕುಡಿತದ ಕೆಂಪಂಟುತ್ತಿರಲಿಲ್ಲ..

ಕಾಲಚಕ್ರ "ಚಕ್ರ"ವೇ ಯಾಕಾಗಬೇಕಿತ್ತು?
ತಿರುಗದ,ಓಡದ
ಚೌಕವಾಗಿದ್ದಿದ್ದರೆ
ಅದರಲ್ಯಾವ ಮೂಲೆಗುಂಪಾದರೂ
ನನಗಡ್ಡಿಯಿರುತ್ತಿರಲಿಲ್ಲ..

'ವೇಳೆ'ಯ ಬೇಳೆ ಬೇಯಬಾರದಾಗಿತ್ತು..
ಅಪ್ಪನಪ್ಪುಗೆಯಲ್ಲಿ ಮುಪ್ಪಿನ ಘಮವಿರುತ್ತಿರಲಿಲ್ಲ,
ಹೊತ್ತಿಗೆ ಸರಿಯಾಗಿ ಮಲಗಿರುತ್ತಿದ್ದೆ,
ಹತ್ತೊಂಭತ್ತರ ಮಗ್ಗಿಯ
ವೇದನೆಯಿರುತ್ತಿರಲಿಲ್ಲ.!,
ಅಜ್ಜಿಯ ಸುಖಾಸುಮ್ಮನೆಯ ಕೆಮ್ಮಿಗೆ
ತಲೆತಟ್ಟಲು ಅಜ್ಜನಿರುತ್ತಿದ್ದ..

ಸಮಯಕ್ಯಾರು ಅಂಟಿಸಿದ್ದು ಈ 24/7..?
'ಸುವರ್ಣ'ಕ್ಕೊಂದೇ ಸಾಕಿತ್ತು..!
ಕ್ಷಣಕ್ಷಣಕ್ಕೂ
ಕ್ಷಣಗಳುರುಳುವಿಕೆ,
ಮೊಗ್ಗುಗಳರಳುವಿಕೆ,
ಪಕ್ಕದ ಪಕಳೆ ಬಾಡುವಿಕೆ..
ಮೂಡಿ-ಮಡಿಯುವುದೊಂದು
ಚಟವೇ ಇವಕ್ಕೆ?

ಯಾರೆಷ್ಟು ಬೊಬ್ಬಿರಿದರೂ,
ಹಜಾರೆಯೇ ಲಂಚವಿಕ್ಕಿದರೂ
ನಿಲ್ಲದಿದು ಕಾಲ..!
ಮೋಹಿನೀ 'ನಾಳೆ'ಗಳ ಭರಕ್ಕೆ ಬರವುಂಟೇ?
ಭೂರಮೆಯ ರವಿಯಾಸೆ ಕೊನೆಗೊಳ್ಳದ್ದು,
ಆಸೆಗಳ ತುರಿಕೆ ತಡೆಯಿಲ್ಲದ್ದು,
ಹೊಟ್ಟೆಯ ಆಕಳಿಕೆಗೆ
ಅನ್ನದ ಚಿಟಿಕೆ,ಹೊಡೆದು ಮುಗಿಯದ್ದು..

ಎಲ್ಲಿಯತನಕ?
ಪಾಪ ತುಳುಕುವತನಕ?
ಮೊಲೆಹಾಲು ಬತ್ತುವತನಕ?
ಅತಿಯಾಸೆಗೆ ಕೈ ರೇಖೆಗಳು
ನೇರವಾಗುವತನಕ..?!
ಎಲ್ಲೆಮೀರಿ
ಎಲ್ಲ ಮುಗಿಯುವತನಕ?

ದೇವರೊಮ್ಮೆ ಕೊನೆಯ ರುಜು ಹಾಕಲೇಬೇಕು..
ಅಷ್ಟರೊಳಗೆ
ಸುಖಾಸುಮ್ಮನೆಯ ಕೆಮ್ಮಿಗೆ
ತಲೆತಟ್ಟಲು
ನನ್ನಜ್ಜಿಗೊಂದು ಮರಿಮಗಳು ಸಿಕ್ಕಿಬಿಡಬೇಕು..!!

2 comments:

  1. ದೇವರು ನನಂಗಟಿಸಿದ ಕೆಲ ನಿಮಿಷಗಳನ್ನು ನಿಮ್ಮ ಕವಿತೆ ಓದುವುದರಲ್ಲೇ ನಷ್ಟಗೊಳಿಸಿದವರು ನೀವು! ಪರಿಹಾರ ಕೊಡುವಿರೆ ವಿಶ್ವ? ಹೀಗೂ ಉಂಟೆನಬೇಡಿ!
    ಕೊನೆಗೂ ನನಗೂ ನನ್ನೊಳಗಿನ ಓದುಗನಿಗೂ ತೃಪ್ತಿ ಏಕಕಾಲಕ್ಕೆ, ಓದಿದ್ದು ಬೇರಾವುದನ್ನೂ ಅಲ್ಲ! ಕಾಲವನ್ನು! ಕೊನೆಯಾಗಿಬಿಡುವುದನ್ನು! ಹಿಡಿದಿಡಲಾಗದವನನ್ನು!

    ReplyDelete
  2. ಓದಿಸುತ್ತದೆ ಕವನ, ವಿಚಾರಗಳನ್ನು ಕೊಡುತ್ತದೆ ಕವನ. ವಾಚ್ಯವಾಗಿಸಬಾರದು ಕವನವನ್ನು ಎಂದುಕೊಳ್ಳುವ ನನ್ನಂತಹ ಓದುಗರಿಗೆ ಅತ್ಯಂತ ಖುಷಿಕೊಡುತ್ತದೆ ನಿನ್ನ ಕವನ. ಹೀಗೇ ಬರೆಯುತ್ತಿರು :) ಆಲ್ ದ ಬೆಸ್ಟು.

    ReplyDelete