About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Tuesday, January 31, 2012

ನಮ್ಮನೆಯ ನಲ್ಲಿ

ಒಂದು ಸಂಶಯದೊಂದಿಗೆ
ನಲ್ಲಿ ತಿರುಪುತ್ತಿದ್ದೇನೆ..
ಮೊನ್ನೆ ಸಂಶಯವಿಲ್ಲದೇ ತಿರುಗಿಸಿದ್ದಕ್ಕೆ
ಮೂಳೆ ಮುರಿಸಿಕೊಂಡು ಮೂಲೆ ಗುಂಪಾಗಿತ್ತು
ಹಳೇ ನಲ್ಲಿ..!

ಈ ನಲ್ಲಿಯ ಬಾಳೇ ವಿಚಿತ್ರ..
ಮಾತಿಲ್ಲ,ಕಥೆಯಿಲ್ಲ,ಕಿವಿಯಿಲ್ಲ,ಕವಿಯಲ್ಲ.
ನಲ್ಲನಿಲ್ಲದ ನಲ್ಲಿಗೆ
ನಲ್ಲೆಯೂ ಇಲ್ಲ..
ತಿರುಪಿದಾಗ ಛಿಲ್ಲನೆ ಚೆಲ್ಲುವುದರಲ್ಲಿ ಕಮ್ಮಿಯಿಲ್ಲ.

ನಲ್ಲಿಯೊಂದು ಹಾದರಗಿತ್ತಿ..
ಗೊತ್ತಿದ್ದವನಿಗೂ ಸೈ,ಅಪರಿಚಿತನಿಗೂ ಸೈ..
ತಡವಿ,ಹಿಂಸಿಸಿ,ತಿರುಚಿ ಉಪಯೋಗಿಸಿದಷ್ಟೂ
ತಣಿಯುವವರು
ಲಿಂಗಬೇಧವಿಲ್ಲದ ಗಿರಾಕಿಗಳು..

ಮನೆಯ ಮುಂಜಿ,ಮದುವೆಯ ಮುಂಜಾವುಗಳಿಗೆ
ಪಕ್ಕದ ಬೀದಿ ಮಲ್ಲಿಯಿಲ್ಲದಿದ್ದರೂ
ಈ ನಲ್ಲಿ ಬೇಕೇ ಬೇಕು..
ಆದರೂ..
"ಬಾ ನಲ್ಲಿ ಮಧುಚಂದ್ರಕೆ.." ಎಂಬ ಹಾಡು
ಇಲ್ಲಿಯತನಕ ಬಂದಿಲ್ಲ..!

ನಲ್ಲಿ ತಿರುಪುವಾಗ ಇಷ್ಟೆಲ್ಲಾ ನೆನಪಾಗಿದ್ದಕ್ಕೆ
ಸಿಕ್ಕಿದ್ದು..
ಖಾಲಿಯಾದ ಟ್ಯಾಂಕು..
ಮತ್ತು ಕಾರ್ಪೊರೇಷನ್ ಕೂಗು ;
ಮುಂದಿನ ಮೂರು ದಿನ ನಗರದಲ್ಲಿ ನೀರಿರುವುದಿಲ್ಲ..!!

Sunday, January 29, 2012

ಓ ನನ್ನಮ್ಮನ ಸ್ಲಿಮ್ ಸೊಸೆಯೇ..

ಓ ನನ್ನಮ್ಮನ ಸ್ಲಿಮ್ ಸೊಸೆಯೇ..
ತಪ್ಪಿಯೂ ನಿನ್ನ ಸೊಂಟಕ್ಕೆ Tyre ಬರಿಸಿಕೊಳ್ಳದಿರು..!

ಬಹುಷಃ ಅಮ್ಮ ಯೋಗ ಮಾಡಲು ಕಲಿತಿದ್ದು
ನಿನ್ನ ಸಿಂಹಿಣಿ ನಡು ನೋಡಿಯೇ ಇರಬೆಕು..
ನಾನೊಮ್ಮೆ ಕದ್ದು ನೋಡಿದ್ದೆ.. ನನ್ನಮ್ಮ
ನಿನ್ನ ಸೊಂಟ ಕದ್ದು ನೋಡುವುದನ್ನ..!

ಅವತ್ತಿನಿಂದಲೇ ಇರಬೇಕು..
ಅಮ್ಮನ ಸೊಂಟ ಇಳಿದಿದ್ದರೂ
ನಿನ್ನ ಕಟಿಯೆಡೆಗಿನ ಕಳ್ಳನೋಟ,
ವ್ಯಾಯಾಮದೆಡೆಗಿನ ಸಾಧಕ ನೋಟ
ಏರುತ್ತಲೇ ಹೋಗಿದ್ದು..!

ಇತ್ತ ನಂಗೂ,ಅಪ್ಪನಿಗೂ ಅಲ್ಲಲ್ಲೇ ಮುಸಿನಗು..
ಏಕೆಂದರೆ..
ತೆಳು ಸೊಂಟದಾಸೆಯಿಂದ ಮನೆಕೆಲಸವನ್ನೆಲ್ಲಾ
ನಿನಗೆ ಹಚ್ಚದೇ ತಾನೊಬ್ಬಳೇ
ಮಾಡಿ ಮುಗಿಸುತ್ತೇನೆಂಬ ಹಠ ಅಮ್ಮನದು..!

ಹೀಗೇ ದಿನವಿಡೀ ದುಡಿದು,
ಯೋಗ,ಅಭ್ಯಂಜನಾದಿಗಳನ್ನು ಬಿಡುವಿರದೇ
ಕಡಿದು ಗುಡ್ಡೆ ಹಾಕಿದ್ದಕ್ಕೆ..
ಅಮ್ಮನಿಗೆ ಸಿಕ್ಕ ಫಲ..
ಸೊಂಟ ಒಂದು Round ಕಮ್ಮಿಯಾಗಿದ್ದು..!
ನನ್ನಪ್ಪನ ಮುದ್ದು ಡುಮ್ಮಿ ಕೊನೆಗೂ ಸುಮ್ಮನಾಗಿದ್ದು..!

ಆದರೆ.. ಪಟ್ಟ ಅನಾವಶ್ಯಕ ಕಷ್ಟಕ್ಕೆ
ಜ್ವರ,ಬಳಲಿಕೆಯಿಂದ ನರಳಿ,
ಹಾಸಿಗೆ ಹಿಡಿದಾಕೆ Recover
ಆದ ತಕ್ಷಣ.. ಕಾಫಿ ಮಾಡುವಾಗ
ನನ್ನೊಬ್ಬನನ್ನೇ ಅಂತ್ಯಾಕ್ಷರಿಗೆ ಕರೆದು ಮೊದಲು
ಶುರು ಮಾಡಿದ ಹಾಡು..

ಸೊಂಟದ ವಿಷ್ಯ.. ಬ್ಯಾಡವೋ ವಿಶ್ವ..!!

Friday, January 27, 2012

ಜಾತ್ಯಾತೀತ

ಇಲ್ಲೊಬ್ಬ ಮನುಷ್ಯನಿದ್ದಾನೆ..
ಹುಟ್ಟಿದಾಗ ಎಲ್ಲರಂತೆ ಮಗು..
ಜನಿಸಿದ್ದು ನಕ್ಷತ್ರದಲ್ಲೋ,ಉಲ್ಕೆಯಲ್ಲೋ,
ಉಪಗ್ರಹದಲ್ಲೋ.. ಮಗುವಿದ್ದಾಗ
ಗೊತ್ತಿರಲಿಲ್ಲ ಅವನಿಗೆ..

ಹೀಗೇ ದೊಡ್ಡವನಾಗುತ್ತಾ
ಕೈ ಕಾಲು ಕೆಸರು ಮಾಡಿಸಿ..
ಕೊನೆಗೊಂದಿನ ಹೆಣ್ಣು ಬಸಿರಾಗುವ ಬಗ್ಗೆಯೂ ತಿಳಿಸಿ
ಬೆಳೆಸಿಬಿಟ್ಟಿತು ಸಮಾಜ..!

ಆದರೆ

ಹೆತ್ತ ತಾಯಿಯಲ್ಲಿ,
ಮುತ್ತಿಕ್ಕಿದ ಗೆಳತಿಯಲ್ಲಿ
ಒಂದೇ ಪ್ರೀತಿ ತೋರಿಸಿದ ಸಮಾಜ..
ಒಂದೇ ಜಾತಿ ತೋರಿಸಲಿಲ್ಲ.

ತನ್ನಪ್ಪನಾಕೆಯನ್ನು ಒಪ್ಪಿಕೊಂಡ ಜಾತಿ
ತನ್ನಾಕೆಯನ್ನು ಒಪ್ಪಲಿಲ್ಲ..
ಕಿಡಿ ಕಾಡ್ಗಿಚ್ಚಾಗಿದ್ದು ಆಗಲೇ..
ಬೆಳಗ್ಗೆ ಸಂಧ್ಯಾವಂದನೆ ಮಾಡಿ
ಸಂಜೆ ಕುರಿ ಕಾಯಲು ತೊಡಗಿದನಾತ..!

ಪರಶಿವನ ಪತ್ನಿಗೆ ಪರ್ವೀನಾ
ಎಂದು ಹೆಸರಿಟ್ಟ..!
ಕತ್ತಿನ ಶಿಲುಬೆ ಒಂದಿನವೂ ಚುಚ್ಚಲಿಲ್ಲ..
ಒಂದು ರಾಹುಕಾಲದಲ್ಲಿ
ತನ್ನಮ್ಮನಿಗೆ ತನ್ನಾಕೆಯನ್ನು ಪರಿಚಯಿಸಿ,
ಜಾತಿ ಬಿಡದೇ,
ಜನತಾದಳಕ್ಕೂ ಸೇರದೇ..
ಜಾತ್ಯಾತೀತನಾದ..!

ಇಲ್ಲಿ ಅದೇ ಮನುಷ್ಯನಿದ್ದಾನೆ..
ಬಹುಷಃ ಅದು ನಾನೇ ಆಗಿದ್ದೇನೆ..!

Tuesday, January 24, 2012

ಇದರೆದುರ್ಯಾವ ಮಾತು..!?

ಇಪ್ಪತ್ತೆರಡು ವರ್ಷಕ್ಕೇ
ನೆನಪುಗಳ ಮೆಲುಕು ಮೆಲ್ಲುವ
ಮನಸಿನ ಚಟಕ್ಕೆ..
ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?

ಅಷ್ಟಕ್ಕೂ ಇಷ್ಟು ಪರ್ವಗಳಲ್ಲಿ ಆಗಿದ್ದಾದರೂ ಏನು?
ಮೈ ನೆಂದಿದ್ದು,ಬೆವರಿದ್ದು,
ಶಾಲೆಗೆ ಹೋಗದಿರಲು ಭಗೀರಥ ಪ್ರಯತ್ನ ಮಾಡಿದ್ದು..
ಕಂತ್ರಿ ನಾಯಿ ಸಾಕಿದ್ದು..
ಮತ್ತು ಮೀಸೆ ಮೂಡುವ ಮುನ್ನವೇ ಪೆನ್ನಿನಲ್ಲಿ ಚಿಗುರಿಸಿಕೊಂಡಿದ್ದು..!

ಕಣ್ಣ ಮುಂದೆ ಠುಸ್ಸೆಂದ ಪಟಾಕಿ
ಕಾಲ ಬಳಿ ಢಂ ಎಂದಿತ್ತು..!
ಅವತ್ತು ಅಪ್ಪ ಕೊಟ್ಟ ಹೊಡೆತ ಕೊನೆಯದೆಂದು
ಮೊದಲೇ ತಿಳಿದಿದ್ದರೆ..
ಮನೆಯಲ್ಲಿ ಹಟ ಮಾಡಿ ಪಾಯಸ ಮಾಡಿಸುತ್ತಿದ್ದೆ..!!

ಒಡೆದ ಕಾಲಿಗೆ ಮುಲಾಮು ಮೆತ್ತಿದ್ದೆ,
ಗಡ್ಡ ಬಂದಾಗೆ ಕೇಕೆ ಹಾಕಿದ್ದೆ..!
ಮರುದಿನದ ಬಿಸಿಲಿಗೆ ತಲೆಯಲ್ಲೊಂದು
ಬೆಳ್ಳಿಕೇಶ ಕೋರೈಸಿದಾಗ ಕಣ್ಣಲ್ಲಿ ರಕ್ತ ಸುರಿಸಿದ್ದೆ..!
ವಂಶಪಾರಂಪರ್ಯವೋ,ಸೋಪಿನ ಕೆಮಿಕಲ್ಲೋ..ಏನಾದರೂ
ಆಗ ನಂಗಿನ್ನೂ ಹದಿನೈದು..
ಮೇಲಾಗಿ
ಎದುರುಮನೆ ಜೀಜಿಂಬೆ, ಹುಡುಗಿಯಾಗಿ ಎದುರು ಕಾಣೋ ವಯಸ್ಸು..!!

ಅಲ್ಲಿಂದಿಲ್ಲಿಗೆ ಬದುಕು
ಸೂರ್ಯನ ಏಳು ಕುದುರೆಗಳ ಓಟ..
ಏಳು ವಸಂತಗಳ ಆಟ,ತಾಕಲಾಟ,ಪೀಕಲಾಟ,ದೊಂಬರಾಟ..
ಗೊಬ್ಬರ ಒಂದು ಬಿಟ್ಟು
ಸುಖ,ನೋವು,ಮಳೆ,ಉಲ್ಲಾಸ,
ಹುಡುಗಿ ಬಿಟ್ಟು ಹೋದ ಗಾಯ..
ಅಷ್ಟನ್ನೂ ಹಸಿ ಹಸಿಯಾಗಿ ತಿಂದು ಕೂತಿದೆ ಮನಸು..

ಮತ್ತದೇ ಪ್ರಶ್ನೆ..

ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?

Saturday, January 21, 2012

ನೀಲಿ ನಿರೀಕ್ಷೆ

ನಾ ಕೊಟ್ಟ ನೀಲಿ ಸೀರೆಗೆ
ಸೆಂಟು ತಾಗಿಸಬೇಡ..
ನಿನ್ನ ಮೈಗಂಧವೇ ಚಂದ..
ಆ ಘಮಕ್ಕೆ ಪಲ್ಲು ಜಾರೀತು ಜೋಕೆ..!

ಅದೆಷ್ಟು ಒಪ್ಪವಾಗಿ ನೇಯುತ್ತೀಯ ನೆರಿಗೆಯನ್ನ..
ನಾಜೂಕು ರಾಣಿ..
ನನ್ನ ಇಸ್ತ್ರಿ ಮಾಡಿದ ಪ್ಯಾಂಟೂ ಅದರ ಮುಂದೆ
ಮಾಸಲು ಗೋಣಿ..!

ನಾನೇ ಹೊಲಿಸಿದ ಬ್ಲೌಸು
ನಿಂಗೆ ಸರಿಯಾಗುತ್ತೋ ಇಲ್ಲವೋ
ಎಂಬ ಅನುಮಾನ..
ಕನಸಲ್ಲೂ ಕದ್ದು ನೋಡಲಿಲ್ಲವಲ್ಲ
ನಿನ್ನೆದೆಯನ್ನ..!
ಕಾಮವಿಲ್ಲದ ಪ್ರೀತಿ
ಕಾವಿ ತೊಟ್ಟ ಯೋಗಿಯಷ್ಟೇ ಪವಿತ್ರ ಹುಡುಗೀ..!!

ಆದರೆ..

ಯೋಗಿಗೂ ಹಸಿವೆಯಾದಾಗ
ಹಣ್ಣು ತಿನ್ನುವ ಹಂಬಲವಿರುತ್ತದೆ..
ಸಂಬಂಧವೇ ಇಲ್ಲದ ಈ ನೆಪದಲ್ಲಾದರೂ
ಒಮ್ಮೆ ಸೀರೆಯುಡಿಸುವುದ ಕಲಿಸೇ ಹುಡುಗೀ..
ದೇವರಾಣೆ ಕಣ್ಮುಚ್ಚಿಕೊಳ್ಳುತ್ತೇನೆ..!

ನಿರೀಕ್ಷೆಯಲ್ಲಿ...

Thursday, January 19, 2012

ಮರಳ ಗಾಳ

ದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು..
ಸಂಸಾರಕ್ಕೆ ದೇವರಂತೆ,
ಮತ್ಸ್ಯಕುಲಕ್ಕೆ ದೆವ್ವದಂತೆ..
ಬೇರೆ ಬೇರೆ ಪಾತ್ರಗಳಿಗೆ ರಂಗವಿಲ್ಲದೇ,
ಮುಖವಾಡವಿಲ್ಲದೇ ಬಣ್ಣ ಹಚ್ಚುವ ಬೆವರ ಪುತ್ರರವರು..

ಸಾಗರವೆಂದರೆ ಸೋಜಿಗವಲ್ಲ ಅವರಿಗೆ..
ಬರೀ ನೀಲಿ,ಸೂರ್ಯನಿದ್ದರೆ ಕೊಂಚ ಕಿತ್ತಳೆ.
ಹಾಯಿಗಳ ಬಾಯಿಗೆ ಗಾಳಿಯ ಬೆಣ್ಣೆ ಮೆತ್ತಿಸುತ್ತಾ
ದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು.

ಅಲೆಯಲ್ಲಾದರೂ ಹಾಕಿಸು
ಸುಳಿಯಲ್ಲಾದರೂ ಹಾಕಿಸು
ಮೀನು ಬೀಳುವ ಹಾಗೆ ಬಲೆ ಹಾಕಿಸು ರಾಘವೇಂದ್ರಾ..
ಎಂದು ದೇವರ ಬೇಡಿ,ಮರಳ ಗೋಪೀಚಂದನವ ತೀಡಿ
ಪ್ರತಿದಿನವೂ ಮೀನು ಹಿಡಿಯಲು ಹೋಗುತ್ತಾರೆ ಅವರು.

ಅದೊಂದು ದಿನ ಬಂದ ಡೊಡ್ಡಲೆಯ ಸುನಾಮಿ
ಬೇನಾಮಿ ಆಸ್ತಿಯಿಲ್ಲದ ಜನರ
ಗುಳೆ ಹೋಗಲೂ ಆಗದಂತೆ ನುಂಗಿಬಿಟ್ಟಿತು..
ಸಾಗರದಂಚು ಸ್ಮಶಾನವಾಯಿತು.
ದೇಹಗಳು ಕಡಲಮ್ಮನಿಗೆ ಹಾರವಾದವು..

ಸತ್ತವರಿಗೆ ಚಟ್ಟ ಕಟ್ಟುವವರೂ ಸತ್ತಪರಿ ಕಂಡು
ಮಮ್ಮಲ ಮರುಗಿತ್ತು ಮೊದಲಲ್ಲಿದ್ದ ಇಂದ್ರಪುರಿ..

ಅಳಿದುಳಿದವರು ಗಳಿಸಿದ್ದು ಕಳೆದು,
ರಾತ್ರಿ ಹಗಲಾಗಿ,
ಹಗಲು ರಾತ್ರಿಯಾದಂತೆ
ಮತ್ತೆ ಹಗಲಾದಾಗ
ಹೊಟ್ಟೆಗೊಂದಷ್ಟು ಹಿಟ್ಟಿಗೆ
ಅಂದೂ ಮೀನು ಹಿಡಿಯಲು ಹೋದರು ಅವರು..
ಅನಿವಾರ್ಯತೆಯ ಹುಟ್ಟು ಹಾಕುತ್ತಾ..

ನೀನಿರಬೇಕಿತ್ತು ಇಲ್ಲಿ..

ನೀನಿರಬೇಕಿತ್ತು ಇಲ್ಲಿ..
ಇಲ್ಲೇ ಹತ್ತಿರದಲ್ಲಿ..
ಅಪ್ಪಿ ಕುಳಿತ ಬಿರುಸಿಗೆ ಮಧ್ಯ ಸುಳಿದ ಸೊಳ್ಳೆಯೊಂದು
ಕೊನೆಯುಸಿರೆಳೆಯಲೂ ಗಾಳಿಯಿಲ್ಲದಷ್ಟು ಹತ್ತಿರ..!

ಅವತ್ತೊಂದಷ್ಟು ದಿನ..
ಅದೇ ನಮ್ಮ ಕಣ್ಣುಸನ್ನೆಗಳು ಕೊನೆಗೊಂಡ ದಿನ..
ನಾನು ಸ್ನಾನ ಮಾಡಿದ್ದರೂ ಅದೆಷ್ಟು ದೂರವಿದ್ದೆ ನೀನು..
ನೀನೇ ನಿಜವಾದ ಕೊಳಕಿ ಅನ್ನಿಸಿಬಿಟ್ಟಿತ್ತು..!

ಎತ್ತರೆತ್ತರದ ಮೇರುಪರ್ವತ ಹತ್ತಿ
ಮೇರೆ ಮೀರಬೇಕಿತ್ತು ನಾವು..
ಪುಟ್ಟ ಪಾದದ ಹಂಸ ನೀನು..
ಹತ್ತಿಯ ಹಾಗೆ ಹೊತ್ತೊಯ್ಯುತ್ತಿದ್ದೆ ನಿನ್ನ.
ತುದಿ ತಲುಪುವ ತನಕ ರೆಪ್ಪೆ ತೆರೆಯಬಾರದಿತ್ತು ನೀನು..

ಹಬ್ಬದ ಹೋಳಿಗೆಯೂ ನಿನ್ನ ಮುಂದೆ
ಸಪ್ಪೆ ಸಪ್ಪೆಯಾಗಿತ್ತು.
ನೀನು ಹುಬ್ಬು ಗಂಟಿಕ್ಕಿದರೂ ಅದೊಂದು
ಪ್ರಣತಿಯಲ್ಲಿನ ಬತ್ತಿಯ ಹಾಗೆ.
ದೀಪದ ಚೆಲುವಿಗೆ ನಿನ್ನ ಬಟ್ಟಲು ಕಂಗಳೇ ಉಪಮೆಯಾಗಿತ್ತು.

ಇಂಥ ನೀನು..
ನೀನಿರಬೇಕಿತ್ತು ಇಲ್ಲಿ..
ಇಲ್ಲೇ ಹತ್ತಿರದಲ್ಲಿ.
ನನಗಿಂತ ಮೊದಲು ಚಿತೆಯೇರಲು
ಯಾರಪ್ಪನ ಅಪ್ಪಣೆ ಪಡೆದೆ?
ನನ್ನಪ್ಪುಗೆಯಲ್ಲಿ ತಪ್ಪಿದ್ದಿತಾ??

ಕೊನೆಯದಾಗಿ ನೀನಂದು
ಅರ್ಧ ಹಚ್ಚಿದ್ದ ಕಪ್ಪು ಕಾಡಿಗೆಯೊಂದೇ
ನನ್ನ ನೂರು ಜನ್ಮದ ಆಸ್ತಿಯಾಗಿಹೋದ ದುರಂತ
ಭೂಮಿಯಲ್ಲಿ ಮತ್ತೆಂದೂ ಮರುಕಳಿಸದಿರಲಿ... :(

Wednesday, January 18, 2012

ವೃಕ್ಷ ಚರಿತ್ರ

ಮಳೆಹನಿಯೊಂದು ಫಕ್ಕನೆ
ಮಣ್ಣು ಚುಂಬಿಸಿತು..
ಒಳಗಿದ್ದ ಬೀಜ ಮಲಗಿದಲ್ಲೇ
ಮಗ್ಗಲು ಬದಲಿಸಿತು..

ಮರುದಿನದ ಬಿಸಿಲು ಹೊತ್ತು ತಂದಿದ್ದು
ಬೀಜದ ಮಗುವಿನಂಥ ಕುಡಿ..
ನಾಯಿ ಕೆರೆಯಲಿಲ್ಲ,
ಬೆಕ್ಕು ತೋಡಲಿಲ್ಲ..
ಗದ್ದೆಯ ಗಂಡಾಳಿನ ಕಾಲು ಅದೃಷ್ಟಕ್ಕೆ
ಪಕ್ಕದಲ್ಲೇ ಹಾದು ಹೋಯಿತು..

ಕುಡಿ ಗಿಡವಾಯಿತು..
ಸಿಕ್ಕಿದ್ದು ಹಕ್ಕಿ,ಜಾನುವಾರುಗಳ ಒಡಲ ವಾರಾನ್ನ..
ಬೆಳೆಯಿತು..
ಬೆಳೆದು ಯೌವ್ವನ ತಲುಪಿತು;
ಅಂದುಕೊಂಡಂತೆ ಬದುಕು ಸಾಗುತ್ತಿಲ್ಲವಲ್ಲಾ ಎಂಬ ಚಿಂತೆಯೊಂದಿಗೆ.

ಗಿಡದ ಹೆಸರು ಮರವಾಗಿ ಬದಲಾಯಿತು..
ಅನ್ನ ನೀಡಿದ್ದ ಹಕ್ಕಿಗಳಿಗೆ ಗೂಡು ನೀಡಿತು..
ಜಾನುವಾರುಗಳಿಗೆ ಅನ್ನವಾಯಿತು..
ಆದರೂ ಮತ್ತದೇ ಚಿಂತೆ.

ಅದೊಂದು ದಿನ ಆತ ಬಂದ..
ಆ ಮರದ ನೆರಳಿಗೆ ಮುಖ ಒಡ್ಡಿದ..
ಆಹಾ.. ಮನಸಿಗೆ ಎಂಥಾ ಶಾಂತಿ..
ಒಹ್ ಶಾಂತಿ..!! ಅದೇ..
ಅದೊಂದನ್ನೇ ಆತ ಜಗತ್ತಿಗೆ ಪರಿಚಯಿಸಿದ..
ಅವನು ಬುದ್ಧ..!

ಪರಿಣಾಮ..

ಮರದ ಹೆಸರು ಬೋಧಿಯಾಗಿ ಬದಲಾಯಿತು..
ಶಾಶ್ವತ ಶಾಂತಿಯ ಹರಿಕಾರನಾಯಿತು..
ಅಂದುಕೊಳ್ಳದ ರೀತಿಯಲ್ಲಿ ಬದುಕು ಬದಲಾಗಿಹೋಯಿತಲ್ಲಾ
ಎಂದುಕೊಳ್ಳುವಷ್ಟರಲ್ಲಿ..

ಫಕ್ಕನೆ ಮತ್ತೆಲ್ಲೋ ಹನಿಯೊಂದು
ಮಣ್ಣು ಚುಂಬಿಸಿತು..
ಭೂಮಿಯ ಅದೃಷ್ಟ ಕೈಕೊಟ್ಟ ಘಳಿಗೆ ಅದು..
ಮತ್ತೊಬ್ಬ ಬುದ್ಧ ಹುಟ್ಟಿಬರಲೇ ಇಲ್ಲ..
ಹುಟ್ಟಿಬರಲೇ ಇಲ್ಲ..

Monday, January 16, 2012

ಬದುಕಿನ ಚಿತ್ತು-ಕಾಟುಗಳು

ಕಾಮನಬಿಲ್ಲಿನ ಮನದೊಳಗೆ
ಕಪ್ಪು ಬಿಳುಪು ನೆನಪುಗಳು..
ಕಲ್ಪವೃಕ್ಷದ ಕಣ್ಣೊಳಗೆ
ಯಾರಿಗೂ ಹೇಳದ ಬಯಕೆಗಳು..

ಕಡಲಿನ ಕಪ್ಪೆಯ ಚಿಪ್ಪೊಳಗೆ
ಮೂಡದೆ ಮಡಿದ ಮುತ್ತುಗಳು..
ಕಾಲನ ಕಾಲಿಗೆ ಬಿದ್ದರು ಕೂಡಾ
ಉಳಿಯದೆ ತೀರಿದ ಜೀವಗಳು..

ಮಂದ್ರ ಷಡ್ಜದ ಹಂಗೊಳಗೆ
ಬಂಧನಗೊಂಡ ರಾಗಗಳು..
ಲಂಕೆಯಂಥ ನರಕದ ನಡುವೆಯೂ
ದ್ವಾರಕೆಯಂಥ ಜಾಗಗಳು..

ಕಾಡಿನ ಕೊನೆಯ ಮರದಲಿ ಅಡಗಿದ
ಆಡು ಮುಟ್ಟದ ಸೊಪ್ಪುಗಳು..
ಮರೆತೇನೆಂದರೂ ಮರೆಯಲಿ ಹೇಗೆ 
ನನ್ನನು ಆಳಿದ ತಪ್ಪುಗಳು..

ಹುಟ್ಟುಕುರುಡನ ಕಣ್ಣುಗಳಲ್ಲಿ
ಸಾವಿರ ಬಣ್ಣದ ಚಿತ್ರಗಳು..
ನಮ್ಮದೇ ಬದುಕಿನ ತೀರಗಳಲ್ಲಿ
ಮಹಾಭಾರತದ ಪಾತ್ರಗಳು..

ಹಿಡಿಯಲು ಸಿಗದೇ ಬೇಡವೆಂದರೂ
ಮುಗಿದ ಬಾಲ್ಯದ ಪರ್ವಗಳು..
ಬರೆಯಲು ಹೋದರೆ ಮುಗಿಯದೆ ಹೋಗುವ
ಇಂತಹ ನೂರು ಭಾವಗಳು..

ಬತ್ತಿಯಿಲ್ಲದ ಪ್ರಣತಿ ನಾನು

ಮುಂದುವರೆದಿದೆ ನಡಿಗೆ..
ಜಾರುವ ಗೂಡಿನೆಡೆಗೋ,
ಹಾರುವ ಮಾಡಿನೆಡೆಗೋ..
ಬೇಡವಾಗಿದೆ ಜಿಜ್ನಾಸೆ..

ಒಂದೊಂದು ಸಂತಸದ ಕಾರ್ಡುಗಳಿಗೂ
ನೂರು ಬೇಸರಗಳ ಸ್ಟಾಂಪು.
ಜೀವನದ ಟಪಾಲು
ಪಾಲು ಮಾಡದೇ ಪಾಲ್ಗೊಳ್ಳುತ್ತಿದೆ..
ತುಂಬಿಕೊಂಡು ಖಾಲಿಯಾಗುತ್ತಾ..

ಕವಡೆ ಕೊಳ್ಳಲು ಕಾಸಿಲ್ಲದಿದ್ದರೂ
ಕೈಗಳು ಖಾಲಿಯಾಗಿಲ್ಲ..
ರೇಖೆಗಳಿನ್ನೂ ಇವೆ :
ಭವಿಷ್ಯದ ದಾರಿಗಳಂತೆ..!

ದೇವರಿಗಾಗಿನ ಬದುಕು
ದೇವರದ್ದೇ ಇಲ್ಲವೇ?
ಪಕಳೆಯಿಲ್ಲದ ಪಾರಿಜಾತ ನಾನು..
ದಾರಿಯಿಲ್ಲ
ನನ್ನ ಬದುಕು ನನ್ನದೇ..

ಖಾಯಿಲೆ ಕಣ್ಣಿನ ಮನಸಿಗೆ
ಹಾಸಿಕೊಳ್ಳಲು ಚಾದರವೂ ಇಲ್ಲ..
ಹಾದರವೆಲ್ಲಿಯ ಮಾತು?!
ಅಜೀರ್ಣದ ಅನುಭೂತಿ
ಕನಸುಗಳಲ್ಲೂ ತೇಗುತ್ತಿದೆ..

ಜೇಬಿನಲ್ಲಿನ ಚಡಪಡಿಕೆಗಳಿಗೆ
ಬ್ಯಾಗಲ್ಲ.. ಬ್ಯಾಂಕೂ ಸಣ್ಣದೇ..
ಗಾಡಿಯವನ ದೋಸೆಯಂತೆ ತೂತಾಗಬೇಕಿದೆ ಜೇಬು..
ಬೆಲೆ ಬರಬೇಕಿದೆ ಬದುಕಿನ ಸ್ಟಾಂಪಿಲ್ಲದ ಕಾರ್ಡುಗಳಿಗೆ..
ಮುಂದುವರೆಯಬೇಕಿದೆ ನಡಿಗೆ..
ಹಾರುವ ಮಾಡಿನೆಡೆಗೆ..

ಸುಕ್ಕುಗಟ್ಟಿದ ಭಾವಗಳು

ತಿಂಗಳುಗಳಿಂದ ನೀರು ಮುಟ್ಟಿಸದ
ಪ್ಯಾಂಟಿನ ತೊಡೆಯಲ್ಲಿ ಸಣ್ಣದೊಂದು ತೂತು ಬಿದ್ದಿದೆ..
ಸ್ನಾನದ ಟವೆಲ್ಲೂ ಮಣ್ಣಾಗಿದೆ,
ಅದಕ್ಕೂ ನೀರಡಿಕೆ ಪಾಪ..!

ಯಾವತ್ತೋ ಕುಡಿದು ತೇಗಿದ ಮೇಲೆ
ಸ್ಪ್ರೈಟ್ ಬಾಟಲಿಯೇನು ನಾಯಿ ಮುಟ್ಟಿದ ಮಡಕೆಯಾಗಿಲ್ಲ..
ಬಳಕೆಯಾಗುತ್ತಿದೆ ಇಂದಿಗೂ,
ತನ್ನ ಬಣ್ಣಗೆಟ್ಟ ದೇಹದೊಳಗೆ ಬೋರು ನೀರು ತುಂಬಿಸಿಕೊಂಡು..

ಕಾಲಚಕ್ರದ ಪಥದಲ್ಲಿ ಅಂಡೂರಿಕೊಂಡು
ಕೂತಿದ್ದು ಮಾಸಲು ಗೋಡೆಯ ಕ್ಯಾಲೆಂಡರು..
ಡೇಟು ತಿರುಗಿಸಿ ತಿಂಗಳುಗಳು ಸೋರಿವೆ..
ಅದರ ಪಾಲಿಗಿನ್ನೂ ಯುಗಾದಿ ಜಾರಿಯಲ್ಲಿದೆ..!

ಕಳೆದ ರಾತ್ರಿಯ ಮದಿರೆಯ ಗುಂಗಿಗೆ
ಬೆಳಗ್ಗೆ ತಲೆಕೆಟ್ಟು ಕುಡಿದ ಅರ್ಧ ಲೀಟರ್
ನಂದಿನಿ ಮೊಸರಿನ ಪ್ಯಾಕೆಟ್ಟು
ಹಾಗೇ ಬಿದ್ದಿದೆ,ಮುತ್ತಿದಿರುವೆಗಳ ಮಧ್ಯೆ..

ಅಲ್ಲೆಲ್ಲೋ ಮುರುಟಿದ ಗಂಧವತಿ ಸಾಕ್ಸಿನ ಮಧ್ಯೆ
ಸೊಂಟ ಮುರಿದು ಬಿದ್ದ ಪೊರಕೆಯಲ್ಲಿರುವ
ಕಸ ತೆಗೆಯಲು ಹೊಸ ಮಂಕಿ ಬ್ರಾಂಡ್ ಬೇಕು..
ಆ ಮಟ್ಟಿನ ಶುಭ್ರತೆ ಇಲ್ಲಿ..,ಇಲ್ಲ..!

ಚೊಂಬಿಗೇನಾದರೂ ಮೂಗಿದ್ದಿದ್ದರೆ
ಉಸಿರು ಕಟ್ಟಿ ಸಾಯುತ್ತಿತ್ತು..
ನನ್ನ ಚಂದದ(!?) ಬಚ್ಚಲ ಕುರುಕ್ಷೇತ್ರದಲ್ಲಿ
ಬೆದರಿದ ಪಾಂಚಾಲಿಯಾಗಿದೆ ಅದು..!

ಇದ್ದ ಕೆಲಸ ಬಿಟ್ಟಾಯಿತು,
ನಲ್ಲಿ,ಬುದ್ಧ,ಚಪ್ಪಲಿಗಳು ಕವನಗಳಾದವು..
ಏಗ್ದಾಗೆಲ್ಲಾ ಐತೆ.. ಏಗಲು ಮೂಡು ಬರುವ ತನಕದ
ಬೇಜಾರು ಗೀತೆಗೆ ಭಾನ್ಸುರಿ ನುಡಿಸುತ್ತಿವೆ
ಈ "ನನ್ನ ರೂಮಿನ ಪಾತ್ರಗಳು"..
ಪಕ್ಕದಲ್ಲೊಂದು ಪವಿತ್ರ ಪುಸ್ತಕ "ಮಲೆನಾಡಿನ ಚಿತ್ರಗಳು"..

ಒಂದೇ ಒಂದು ಮುತ್ತಿನ ಕಥೆ

ಕಷ್ಟಪಡಬೇಕು ಕಾಂಚನಾ..!
ಮುತ್ತೆಂಬುದು ಸಿನಿಕರ ಸ್ವತ್ತಲ್ಲ..
ಧನಿಕರ ಗತ್ತಲ್ಲ..
ಕತ್ತಲಿಗೆ ಮಾತ್ರ ಒದಗುವ ಗುಟ್ಟಲ್ಲ..
ತುಟಿಯೆಡೆಗೆ ಬಾಗಲೂ ಕಷ್ಟಪಡಬೇಕು ಕಾಂಚನಾ..!

ಇವೆಲ್ಲಾ ಗೊತ್ತಿರಬೇಕು ಕಾಂಚನಾ :
ಫ್ರೆಂಚರು,ಸವಿಜೇನು,ದಂತಭಗ್ನತೆ..
'ಅನುಭವ'ದ ಮುಂದೆ ಓದು,ದೇಶಸುತ್ತು
ಮುಂತಾದವು ಮಕಾಡೆ..!
ನಿಂಗಿವೆಲ್ಲಾ ಗೊತ್ತಿರಬೇಕು ಕಾಂಚನಾ..

ಆದ್ರೆ ನೀನ್ಯಾಕೆ ಹೀಗೆ ಕಾಂಚನಾ?
'ಮಧು'ವೆಂದರೆ ಬರಿ ಹೆಸರಲ್ಲ,
ದುಂಬಿಯೆಂದರೆ ಬರಿ ಹುಳುವಲ್ಲ..
ವಿವರಿಸಲು ನನಗೆ ಟೈಮಿಲ್ಲ..
ಆ ಕಿವಿಯಲ್ಲಿ ಹೇಳುವ ಮುಗ್ಧ ಮನ್ಮಥ ನಾನು..
ಈ ಕಿವಿಯಲ್ಲಿ ಬಿಡುವ ಸೋಂಬೇರಿ ಸುಂದರಿ ನೀನು..!
ನೀನ್ಯಾಕೆ ಹೀಗೆ ಕಾಂಚನಾ?

ಒಮ್ಮೆ ಹೀಗೆ ಮಾಡು ಕಾಂಚನಾ..
ತುಟಿಯಲ್ಲಿ ಕಾಮ ಕಂಡರೆ ಶಪಿಸಿಬಿಡು
ತುಟಿ ಒಡೆದಿದ್ದರೆ ಕ್ಷಮಿಸಿಬಿಡು..!
ಚಪ್ಪಲಿಯೇಟು ಚಪ್ಪಲಿಯಲ್ಲೇ ಸವೆಯಲಿ..
ಅಪ್ಪುಗೆಯ ಸವಿ ಮುಂದಿನ ಕವನಕ್ಕಿರಲಿ..!
ಜಾತ್ರೆ,ಜೋಗ,ಜಾನುವಾರುಗಳಿರಲಿ..
ನೀನೇ ನನ್ನಪ್ಪಿ ಮುತ್ತಿಟ್ಟುಬಿಡು..
ಜನಿವಾರದಾಣೆ ಜಿತೇಂದ್ರಿಯನಾಗುತ್ತೇನೆ..!!

ಬಿಟ್ಟು ಹೋಗದ ಮುನಿಸು

ದೀಪದಾ ಮಡಿಲಿನಲಿ
ತುಂಬಿ ಹರಿದ ಇರುಳು ಇದು..
ಬತ್ತಿಯ ಜೊತೆಯ ಸಲ್ಲಾಪ ಮರೆತು
ಬೆಳಕೊಮ್ಮೆ ಇಣುಕಬಾರದೇ ಇಲ್ಲಿ?

ಜಾತ್ರೆಯಾಗಿದೆ ಮನಸು
ಬೆಂಡು ಬತ್ತಾಸುಗಳ ಕಹಿಯೊಂದಿಗೆ..
ಒಡೆದ ಆಟಿಕೆಯಂಥ ಧಮನಿಯನ್ನು
ನಿನ್ನೊಲವೊಮ್ಮೆ ಜೋಡಿಸಲಾಗದೇ ಇಲ್ಲಿ?

ಕೂಗಿ ಹೇಳುವ ಬಯಕೆ..
ಮುನ್ನುಡಿಯಾಗು ನನ್ನ ಶೀರ್ಷಿಕೆಗಾದರೂ..
ಕೊನೆಯ ಪುಟದ ನನ್ನ ಕೊನೆಯಕ್ಷರಕ್ಕೆ
ಶಾಯಿಯೂ ಆಗಲಿಲ್ಲವಲ್ಲ ನೀ ಇಲ್ಲಿ..

ಗೋರಿಯೂ ಕೊನೆಯೇ.. ಭಸ್ಮವೂ ಕೊನೆಯೇ..
ಲೀನವಾಗುವಾಗ ಪ್ರಾಣ ತರಬಲ್ಲದೇ ಪ್ರೀತಿ?
ಅಂತೂ..
ನನ್ನಂತಿಮಕ್ಕೂ ಅರ್ಥ ಸತ್ತಿತು ಇಲ್ಲಿ..
ನಿನ್ನ ಕೊಂಚ ಪ್ರೀತಿಯೂ ಇಲ್ಲದ ಇಲ್ಲಿ..

ನನ್ನವಳ ನನ್ನವರು ನಾನಾದಾಗ..!

ನೀನೊಮ್ಮೆ ಸಿಕ್ಕಿಬಿಡು ತಾಳಿಕಟ್ಟಲು..
ಕಾಫಿ ಬಟ್ಟಲಿನಿಂದ ಮಗುವಿನ ಉಚ್ಚೆಯ
ತೊಟ್ಟಿಲ ತನಕ
ಎಲ್ಲವನ್ನೂ ತೊಳೆಯುತ್ತೇನೆ..!

ನನ್ನಪ್ಪನೂ ಹೀಗೇ ಹೇಳಿರಬೇಕು
ನನ್ನಮ್ಮನಿಗೆ..
ಈಗಲೂ ಕಾಫಿ ಬಟ್ಟಲ ಕೆಲಸ ನನ್ನಪ್ಪನದೇ..
ಬಚ್ಚಲೂ ಸೇರಿ..!

ಹಬ್ಬ ಪಾರ್ಟಿಗಳ ನಿನ್ನುದ್ದ ಬೆರಳಿಗೆ
ಗೋರಂಟಿ ಗೀರನ್ನು ಹಚ್ಚೆಯಂತೆ ಹಚ್ಚುತ್ತೇನೆ..
ವಕ್ರವಾದರೆ ಚೀರಬೇಡ..
ನಿನ್ನಂದದ ಮುಂಗುರುಳೂ ವಕ್ರವೇ..

ಹುಡುಗಿಯ ಮೊಬೈಲಿನಿಂದ
ಎಂದೋ ಒಂದೊಂದು ಮೆಸೇಜು ಬಂದರೆ
ರಾತ್ರಿ ಊಟ ಹಾಕದೇ ಇರಬೇಡ..
ಪಕ್ಕದ ಮನೆಯವನ ಪರಸ್ತ್ರೀ ನೀನು..
ನಿನ್ನ ಬಿಟ್ಟು ನಂಗೆಲ್ಲರೂ ತಂಗಿಯರೇ..!!

ಹಾಗೆಂದು..
ತವರಿಗೆ ಬಾ ತಂಗಿ ಎಂದಾಗ
ಊಟ ಬಿಟ್ಟು ಓಡಬೇಡ..
ಹಸಿದ ನಿನ್ನ ಮುಖ ನೋಡಿ
ವರದಕ್ಷಿಣೆ ಕಿರುಕುಳ ಎಂದುಕೊಂಡಾರು ನಿಮ್ಮಮ್ಮ..!

ಇವೆಲ್ಲ ಸಾಕು..
ನಂಗೊಂದು ಮಗು ಬೇಕು..!!
..........
(ಮಾತು ಮುಗಿದ ಸಮಯ..!).

ಹಾಯ್ಕುಗಳು :

* ರಾತ್ರಿ ಆ ಅಣೆಕಟ್ಟಿನ ಕಂಬದ ಬಿರಿದ ಗೀರು ದೊಡ್ಡದಾಗಿತ್ತು..
  ಮರುದಿನದ ಬಿಸಿಲನ್ನು ಸ್ವಾಗತಿಸಿದ್ದು ಅರ್ಧ ಮುಳುಗಿದ ಮಗು..!

* ಅಪಘಾತದಲ್ಲಿ ಕಾಲು ಹೋದ ನಂತರ ಸಿಕ್ಕಿದ ಮರಗಾಲನ್ನು
  ಸೊಲ್ಲಿಲ್ಲದೇ ತೊಟ್ಟುಕೊಂಡನಂತೆ ಅಪ್ಪಿಕೋ ಚಳುವಳಿ ಅಧ್ಯಕ್ಷ..!

* ಗಾಂಧೀಜಿಯ ಊಹೆ ನಿಜವಾಗಿತ್ತು.. ತನ್ನ ಕೊಂದವನು ನಾಥೂರಾಮನೆಂದು..
  "ಹೇ ರಾಮ್" ಎನ್ನುತ್ತಾ ಪ್ರಾಣ ಬಿಟ್ಟರು..!

* ನೀನೊಂದು ಬಾಯಿಗೆ ಸಂಬಂಧಿಸಿದ ರೋಗವಿರಬೇಕು..
  ಎಲ್ಲರ ಬಾಯಲ್ಲೂ ನಿನ್ನ ಹೆಸರೇ..!

* ಡಾವಿಂಚಿ ಗೆ Calcium ಕಡಿಮೆ ಇತ್ತೇನೋ..
  ಮೋನಾಲಿಸಾ ಗೆ ಹಲ್ಲುಗಳೇ ಇಲ್ಲ ಪಾಪ..!

ತೆರೆಮರೆಯ Talent ಗಳ ಭಕ್ತಿಗೀತೆ..!

ಕಿಟಕಿಯಾಚೆಯ ಕೋಗಿಲೆಗೇನು ಗೊತ್ತು
"ಈ ಸುಂದರ ಬೆಳದಿಂಗಳ" ಹಾಡು..?
ಕಲ್ಯಾಣರೊಮ್ಮೆ ಅಂದಿದ್ದ ನೆನಪು..
ಅಮೃತವೆಂದರೆ ಹಾಲು..
"ಅಮೃತ ವರ್ಷಿಣಿ" ಯೆಂದರೆ ಬಾಲು..!

ಜಯಂತ,ಸೂರಿ,ಯೋಗರಾಜರಿದ್ದರೂ
ಇನ್ಯಾರೋ ಬೇಕು ಕಾಲಕ್ಕೆ.. ಕಾಲ ಕಾಲಕ್ಕೆ.
ಗೀತಬ್ರಹ್ಮ,ಕಲಾಕುಸುಮ,ಸಾಹಿತ್ಯ ಸಿದ್ಧರಿದ್ದಲ್ಲಿ
ಮತ್ಯಾರೋ ಬಿದ್ದರು..
ಎತ್ತುವವರಿಲ್ಲದೇ ಅತ್ತರು..

ರಾಷ್ಟ್ರಭಾಷೆ ಕರುನಾಡಲ್ಲೂ ಸದ್ದು ಮಾಡಿತು..
ಬಂದವರಿಬ್ಬರೇ ಸುದ್ದಿ ಮಾಡಿದರು..
ಮುದ್ದು ಹಾಡುಗಳ ಒಡೆಯರಾಗಬೇಕಾದವರು
ಬಂದಿಬ್ಬರ ಗದ್ದಲದಲ್ಲಿ ಗೆದ್ದಲು ಹಿಡಿದರು..
ಕೊನೆಗವರ ಜಾಗ ಕಾಸರಗೋಡಿನ "ಮೌನ ಮಾತಾದಾಗ".

ರಸಿಕರೆಲ್ಲಾ ಕವಿಗಳು ಹೇಗಾದಾರು?
ಮತ್ತಿನಲ್ಲಿ ಗೀಚಿದ್ದೆಲ್ಲಾ ಕಾವ್ಯ ಹೇಗಾದೀತು?
ಯಾರೇನೇ ಅಂದರೂ..
ಕಿಟಕಿಯಾಚೆಯ ನಮ್ಮೀ ಕೋಗಿಲೆಗೆ ಗೊತ್ತು
ಹಳೆಪಾತ್ರೆ,ಪೌಡೆರ್ ಅತ್ತರಿನ ಭಾವರಹಿತ ಹಾಡು...

Sunday, January 15, 2012

'ಶೇಷ'ಕವನ

ಬಹುಷಃ ಇವೆಲ್ಲಾ ನಾವು,ನೀವು ಎಲ್ಲೋ ಒಂದು ಸಾರಿ ದಾಟಿ ಬಂದಿರುವಂಥದ್ದೇ.. ವಿಶೇಷವಿಲ್ಲದ, ಹೆಕ್ಕಬಹುದಾದ ನೆನಪುಗಳ 'ಶೇಷ'ಕವನ ಎನ್ನಬಹುದು ಇದನ್ನ....

ಓತಿಕ್ಯಾತಕ್ Torture ಕೊಟ್ಟೆ..
ಸಗಣಿ ಮುದ್ದೇಲ್ ಪಟಾಕಿ ಇಟ್ಟೆ..
ನೀರಲ್ ಬೋಂಡ ಬೇಯ್ಸಕ್ ಹೋದೆ..
ಹೇನು,ಜೇನು ಒಂದೇ ಅನ್ಕಂಡೆ..!

ಬಾಟ್ಲಿ ಕ್ಯಾಪಲ್ ಗಾಡಿ ಮಾಡ್ದೆ..
ವಾಸ್ನೆ ಸಾಕ್ಸಿಗ್ ಸೆಂಟ್ ಹೊಡ್ಕಂಡೆ..
ಹಲ್ಲಿ ಬಾಲ Cut Cut ಮಾಡ್ದೆ..
ನಲ್ಲಿ ನೀರು ಬಿಟ್ಟು ಓಡಿದ್ದೆ..

ಬುಕ್ಕಿನ್ ರಟ್ಟಲ್ ಕ್ರಿಕೆಟ್ ಆಡ್ದೆ..
ತಿಪ್ಪೆ ನಾಯಿಗ್ ಕಲ್ಲಲ್ ಹೊಡ್ದೆ..
ಸುರು ಸುರು ಕಡ್ಡಿ ಮರಕ್ಕೆ ಎಸ್ದೆ..
ರಾಮನ ವೇಷ್ದಲ್ ಹುಡುಗೀರ್ಗ್ ಕಣ್ ಹೊಡ್ದೆ..!

ತಪ್ಪಿ ಲೇಡೀಸ್ ಟಾಯ್ಲೆಟ್ಗೋದೆ..
ತಿರುಗೋ ಫ್ಯಾನಿಗ್ ಕೈ ಹಾಕ್ ನಿಲ್ಸ್ದೆ..
Friends ಹೇಳ್ಕೊಟ್ಟಿದ್ಕ್ ಅಪ್ಪಂಗ್ ಬೈದೆ..
ಕೋಲು,ವೈರು,ಬೆಲ್ಟಲ್ ಒದೆ ತಿಂದೆ..!

ಅಲ್ಲಿಗೆ ಬಾಲ್ಯ ಮುಗ್ದೇ ಹೋಯ್ತು..
ಕೆಲ್ಸ,ಹೆಂಡ್ತಿ, ಮಗುವೂ ಆಯ್ತು..
ಮಗನೂ ಹಂಗೇ ಮಾಡ್ತಿರ್ತಾನೆ..
ಹಳೆಯ ನೆನಪಿನ್ ವಾರಸ್ದಾರ ಹುಟ್ಟೇ ಬಿಟ್ನಲ್ಲ..!

Thursday, January 12, 2012

ವಿಶ್ವಕ್ಕೆ ಸ್ವಾಗತ..!!