About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Wednesday, April 18, 2012

ಇನ್ನಷ್ಟು ಹಾಯ್ಕುಗಳು:

ರಾತ್ರಿ ಮಲಗುವಾಗ ಕೊಟ್ಟಕೊನೆಯ ನೋಟದಲ್ಲಿ
ದೇವರನ್ನೇ ನೋಡಿ ಮಲಗಬೇಕೆಂದುಕೊಂಡರೂ
ದೇವರ ಫೋಟೋ ನೋಡಿಯಾದಮೇಲೆ
ಲೈಟ್ ಆಫ್ ಮಾಡುವ ಸ್ವಿಚ್ಚನ್ನು ಕಣ್ತುಂಬಿಕೊಂಡು ಮಲಗೋದು ಗಮನಿಸದ ಸತ್ಯವಷ್ಟೇ..!

ಸಕ್ಕತ್ ಫಿಗರೊಬ್ಬಳ ಪಕ್ಕ ಇದ್ದ
ಅವಳ ಗೆಳತಿ ಸಾಧಾರಣ ಸೌಂದರ್ಯವಂತೆಗೆ ಲೈನ್ ಹೊಡೆದೆ.
ಕೊನೆಗೂ 'ಕಲೆ'ಗೆ ಬೆಲೆ ಬಂತು..!

ಜೇಡ ಬೇಡಿದ್ದು ಇಬ್ಬನಿ.
ಬಂದಿದ್ದು ಬಿರುಮಳೆ.
ಪರಿಣಾಮ..
ಜೊಲ್ಲು ಬರಿದಾಗಿ ಮೂಡಿದ ಹೊಸಮನೆ..!

ನಿಧಿ ಆಸೆಯಿಂದ ಹೊಲ ಅಗೆದಿದ್ದಕ್ಕೆ
ಪಕ ಪಕ ಅಣಕಿಸಿದ ಎರೆಹುಳುವಿಗೆ
ಕಣ್ಣುಬೇನೆಯಾಗಿದ್ದು
ಚಿನ್ನದ ಬೆಳೆ ಬಂದಾಗ..!

ಧಗಧಗಿಸುತ್ತಿದ್ದ ಸುಸ್ತಿನ ಕಾಮಕ್ಕೆ
ಕೊನೆಗೂ ಸಿಕ್ಕಿದ್ದು
ನಿದ್ದೆಯೆಂಬ ಮಹಾ ಮೈಥುನ..!

ಉಗುರು ತೆಗೆಯಲು ಮರೆತ ಅವನ ಆ ಚಿಕ್ಕತಪ್ಪು..
ಗಿನ್ನಿಸ್ ಪುಸ್ತಕದ ಸಾಲಿನಲ್ಲಿ
ಅಳಿಸಿಹೋಗೇಬಿಟ್ಟಿತಲ್ಲ.. ವಾಹ್..!

ಚಿಗರೆಗೂ ಚುಕ್ಕಿ ಇದೆ,
ಚಿರತೆಗೂ ಚುಕ್ಕಿ ಇದೆ..
"ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು"
ಎಂಬ ಗಾದೆಯ ಅರ್ಥ ಇದೇ..!

Thursday, April 5, 2012

ತಾಂತ್ರಿಕ ಸ್ವಗತ

ಬೆಳ್ಳಂಬಿಳುಪಿನ ಹಿಮಾಲಯದೊಂದು
ಗೊತ್ತಿಲ್ಲದ ಗವಿಯೊಳಗಿದ್ದೇನೆ.
ಕೆಳಗೆ ಚರ್ಮ ತಾಟು
ಮುಂದೆ ತಾಳೀಸೌಟು.......

ಹೆಸರಿನರ್ಧಭಾಗ "ಬಾಬಾ"..!
ತಾಂತ್ರಿಕ ಪಥದ
ವಿಕಾಸವಾದವಾ..?!
ಗೊತ್ತಿಲ್ಲ.

ಜೀವದಾಯಿನಿ ಗಂಗೆ
ಹೆಣಗಳಿಗೆ ಜೀವ ಕೊಟ್ಟೇನೆಂದರೂ
ನಾನು ಬಿಟ್ಟೇನಾ?
ಅವು ನನ್ನ ಪಾಲಿನವು.
ಜಲದೊಳಗಿಂದ ಕಾಲೆಳೆತಂದು
ಭಸ್ಮ ತೀಡಿ ಶಿವನಪ್ಪಣೆಯ
ಶವಭಕ್ಷಣೆ ನಡೆಸಿದ್ದೆ..

ತಂತ್ರಾರಾಧಕರ ಪ್ರಕೃತೀ ಶಕ್ತಿ ಹೆಣ್ಣಿನ
ಭಾವಾರ್ದ್ರತೆಗಳಿಗೆ
ಕುಮ್ಮಕ್ಕು,ಕಿಮ್ಮತ್ತುಗಳಿಲ್ಲ ಇಲ್ಲಿ.
ತಂತ್ರಸಂಭೋಗದ ಹೆಣ್ಣುನಯನಗಳಲ್ಲಿ
ತುಂಬಿ ಒಣಗಿದ
ಉಪ್ಪನ್ನು ಗಮನಿಸಿದ್ದೇನೆ.
ಗಮನಿಸಿದ್ದೇನೆ ಅಷ್ಟೇ..

ಬಲಿಕೊಟ್ಟ ಕಾಡುಕೋಣಗಳ
ಕಿರುಚಿನಲ್ಲಿ ಕಾಳಿಯ ರೌದ್ರತೆಯ ಕಂಡಿದ್ದೇನೆ.
ಚಿತ್ತಾರ ಮಂಡಲದ ಸಮ್ಮೋಹಿನೀ ಬಣ್ಣಗಳು
ಸಮಾಧಿಸ್ಥಿತಿಗೊಯ್ದಿವೆ..
ಶವಗಳ ಜೊತೆಗಿನ ಮೌನ ಸಂವಾದಗಳು
ಅರಿಯದ ಜಗತ್ತುಗಳ ಪರಿಚಯಿಸಿವೆ.

ಇವತ್ತಿಗೆ ನನಗೆ ಇನ್ನೂರು ತುಂಬಿತು..!

ಕಳೆದೆರಡು ಶತಮಾನಗಳ ಸಾಧನೆ
ಮೈ ಕಸುವ ಕಳೆದಿಲ್ಲ,ಸುಕ್ಕು ತಂದಿಲ್ಲ.
ಗಾಳಿಯಲ್ಲೀಗಲೂ ತೇಲಿನಿಲ್ಲಬಲ್ಲೆ,
ಕೆಂಪುಗುಲಾಬಿಯ ಬಣ್ಣ ಬದಲಿಸಬಲ್ಲೆ,
ದೃಷ್ಠಿ ಮಾತ್ರಕ್ಕೆ ಜೀವದ ಬೂದಿ ಬಸಿಯಬಲ್ಲೆ..!

ಆದರೆ..

ಶತಮಾನಗಳ ಸುಭಿಕ್ಷ ಏಕಾಂತ ಸಾಕಾಗಿದೆ.
ಶಿಷ್ಯ ಶಿಷ್ಯರನ್ನಿಟ್ಟುಕೊಳ್ಳಲಾಗದು.
ಬಾಡದ ಬದುಕಿನಲ್ಲಿ ಘಮವೇ ಇಲ್ಲ.
ಭೋಲೇನಾಥನ ಸಂಗದಿಂದ ಕಡೆಯಲಾಗದ
ಕಾರ್ಗಲ್ಲಾಗಿಬಿಟ್ಟಿದ್ದೇನೆ.

ಒಂದಿನವೂ ಕಷ್ಟವೆನಿಸದ ಬದುಕು
ಕೈಗಿತ್ತಿದ್ದು ಸಾವಿರ,
ಕಾಡಿದ್ದು ನೂರು,
ಕಂಡಿದ್ದು ಹತ್ತು,
ದಕ್ಕಿದ್ದು ಒಂದೇ..
"ನೆಮ್ಮದಿರಹಿತ ಪ್ರಾಣ".

ಗೊತ್ತಿಲ್ಲದೀ ಗವಿಯಲ್ಲಿ
ಸಹಸ್ರಾರದ ಬ್ರಹ್ಮರಂಧ್ರ
ಅದೇ ಪ್ರಾಣಕ್ಕೆ ಕಾದು ಕುಳಿತಿದೆ..
ಮೋಕ್ಷದ ಮೋಹಕ ದಾರಿ
'ಇಚ್ಛಾಮರಣ'ಕ್ಕೆ, ಮುಂದಿರುವ
ತಾಳೀಸೌಟಿನ ಇನ್ನೊಂದು ಅರ್ಘ್ಯ ಸಾಕು...
ಇನ್ನೊಂದೇ ಅರ್ಘ್ಯ ಸಾಕು..
ಸಾಕು.

ಓಂ ಬಂ ಕ್ಲೀಂ ಹ್ರೀಂ ಚಾಮುಂಡಾಯೈ ವಿಚ್ಛೈ................

Monday, April 2, 2012

ಕಲಹಕಾಂಡ

ಪಾಂಡವರ ವಧುದಕ್ಷಿಣೆ
ಭರ್ಜರಿ ಬ್ರಾಂಡುಗಳ ಐದು ಮೊಬೈಲುಗಳು..!
ಒಂಟಿಹೆಣ್ಣು ದ್ರೌಪದಮ್ಮನಿಗೆ ಕೈಗಳೆರಡೇ..
ನುಣುನಡುವಿಗೇರಿಸಿದ
ಸಂಚಿಯೊಳಗಿಳಿಬಿಟ್ಟಳಾ ಸೆಲ್ಲುಗಳ..!

ಹಸ್ತಿನಾವತಿಯ ವಿಹಾರವಾಯುವಿನಲ್ಲಿ
ಬಿಸಿವಿರಹದ ಸುಡು ಸುಡು..
ಒಬ್ಬರಿಗೊಬ್ಬರಿಗೆ ತಿಳಿಯದಂತೆ ಸೇರಬೇಕಾಗಿದೆ..!!
ವಾಕಿಂಗಿನ ಪಾಂಚಾಲಿಯಲ್ಲಿದ್ದಷ್ಟೂ ಫೋನುಗಳಿಗೆ
ಲೊಚಲೊಚನೆ ಬಂದವೈದು ಮೆಸೇಜುಗಳು...!

ಪರಮ ಪತಿಯಂದಿರವ್ರತೆಯಲ್ಲವೇ ಈಕೆ..!
ಚರಮದ ಬೇಗೆಯಲ್ಲಿ ಮೊದಲೆತ್ತಿದ್ದು
ಭೋಪರಾಕ್ ಧರ್ಮಜನ ಮೆಸೇಜು..
"ಅಪ್ರಿಯವಾದರೂ ಸತ್ಯವನ್ನೇ ಹೇಳುತ್ತೇನೆ..
ನಿನ್ನ ಇವತ್ತಿನ ಕೇಶಾಲಂಕಾರ ಚೆನ್ನಾಗಿರಲಿಲ್ಲ ಮಡದೀ.."
ಯಪ್ಪಾ..
"ಸತ್ಯದುವಾಚಗಳಿಗೆ
ಈ ಟೈಮಲ್ಲಾದ್ರೂ ರಜಾ ಕೊಡ್ರೀ ಧರ್ಮಪ್ನೋರೇ.. :("
ಮರುತ್ತರಿಸಿದಳು ಲೇವಡಿಯಲ್ಲಿ ಲೇಡಿ..!

ಆಸೆಯಿಂದಾಮೇಲೆ ನೋಡಿದಳು ಬಲಭೀಮನದ್ದು..
"ನಿನ್ನ ಗಲ್ಲ ಒಂದು ಕೇಜಿ ರಸಗುಲ್ಲ..!"
ಥತ್ತೇರಿಕೆ..
"ಕೇಜಿಗಳ ರೊಮ್ಯಾನ್ಸು ಹಿಡಿಂಬೆಗೇ ಸರಿ..
ರಣತೊಡೆಯ ಪ್ರತಾಪೀ,ಪಾಪೀ ಬಿಟ್ಬುಡಪ್ಪಾ ನನ್ನ.."

ಪಾರ್ಥನ ಫೋನಲ್ಲಾದರೂ
ಪಾಪು ಕೊಡುವ ಸೂಚನೆ ಇದ್ದೀತಾ?!
ಇಣುಕಿದಳು ದ್ರೌಪದಿ..
"ನಿನ್ನ ಹುಬ್ಬು ಬಿಲ್ಲು,ನಿನ್ನ ನೋಟ ಬಾಣ..
ಒಟ್ಟಿಗೇ ಸೇರಿದರೆ ಬಿಲ್ಲು-ಬಾಣ..!!"
ಅಯ್ಯೋ ವಿಧಿಯೇ..
"ನಿನ್ನೇ ನಂಬಿದ್ದೆ ಕಣೋ..
ಪಾಪು ಹೋಗಲಿ,
ಟೀ ಸ್ಪೂನು ಪ್ರೀತಿಯೂ ಇಲ್ಲವಲ್ಲೋ ಇಲ್ಲಿ ಅರ್ಜೂ.. :("

ಉಳಿದವರು : ಊರಿಗೊಂದಿದ್ದ ಝೆರಾಕ್ಸ್ ಅಂಗಡಿ ಹುಡುಗರು..!
ಒಬ್ಬರದೊಬ್ಬರ ನಕಲುಗಳು..
ನಕುಲ-ಸಹದೇವ..
ಮಿಕ್ಕಿದೊಂಚೂರು ಆಶಾಕಿರಣಕ್ಕೆ ಕಣ್ಣಗಲಿಸಿ
ಒಮ್ಮೆಲೇ ಓದಿದಳಾ ನಾರಿ
ಟ್ವಿನ್ನುಗಳಿಬ್ಬರ ಸಂದೇಶಗಳ......
"ಗುಡ್ ನೈಟ್ " - "ಸ್ವೀಟ್ ಡ್ರೀಮ್ಸ್"..!!

ಪುತ್ರಿಪ್ರಾಪ್ತಿಯ ಸೊರಗಿದ ಕನಸಿನೊಂದಿಗೆ
ವೃಷಭರಾಶಿಯ ಕುಂಡಲಿ ಕುಮಾರ
ಕರ್ಣ ನೆನಪಾಗಿ
ಬೆಳ್ಳಂಬೆಳಗಿನ ದುರ್ಗಾಂಬಾ ಬಸ್ಸಿಗೆ
ಊರುಬಿಟ್ಟಳು ಮುಡಿಯದ ಹೂ ದ್ರೌಪದಿ..!

ಈ ಕಾರಣವಾಗಿ, ಮದುವೆಯಾದ ಒಂದು ಮಾಸದೊಳಗೇ ಡೈವೋರ್ಸಿನವರೆಗೆ ಹೋಗಿದ್ದ ದ್ರೌಪದೀ-ಪಾಂಡವರ ಈ "ಕಲಹಕಾಂಡ", ಮಹಾಭಾರತ ಕಾವ್ಯದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ..! ಬಹುಷಃ ಈ ಮೂಲಕ  ಪತ್ರಿಕಾ ಸ್ವಾತಂತ್ರ್ಯದ ಮೇಲೆ ಮನುಕುಲದ ಮೊದಲ ಹಲ್ಲೆಯಾಗಿದ್ದು ಪಾಂಡವರಿಂದ ವ್ಯಾಸರ ಮೇಲೆ ಎನ್ನಬಹುದು..!! :):)

Sunday, April 1, 2012

ಸರ್ವಚಟ ಪರಿತ್ಯಾಗಿಯಾಗಿ..!

ದೈನೇಸಿ ದಾರಿಗಳಿಗಾಗಿ
ದಿನದೂಡಿದ್ದು ಸಾಕು..
ಬಾಡಿದಾದಿತ್ಯನ ಬೆಳಕು : ಕತ್ತಲೆಯೇ..!
ಕ್ಷಿತಿಜದಾಚೆ
ತೇಲಿಹೋಗುವ ತವಕ..
ತಿಳಿನೀರಿದ್ದರೂ ಹರಿವಿಲ್ಲ.

ಸೂಕ್ತಿಗಳ ಒಕ್ಕಣೆಗಳು,
ಟಿಪ್ಪಣಿಗಳ ಅಪ್ಪಣೆಗಳು
ಭರದಿ ಬಡಿದು
ಭುಗಿಲೆದ್ದರೂ
ಸೀದು ಹೋದ ಸಹವಾಸ
ಸಂತ ಪಟ್ಟಕ್ಕೇರಿಸಲಿಲ್ಲ..

ಕಿಂಕರನ ವಸಾಹತು
ಸಂಗ ದೋಷದ
ಸರ್ಪಸುತ್ತಿಗೆ
'ಸಂಘ'ದ ಕಬಡ್ಡಿಯಲ್ಲೂ
ಮದ್ದಿಲ್ಲದಾಯಿತು..

ಗೋಳವನ್ನೇ ನುಂಗಿದ್ದ
ಗೋಕುಲಾಷ್ಟಮಿಯ ಗೊಲ್ಲ
ಏಕಾಗ್ರತೆಯ
ಮೊದಲೇ
ಏಕತಾನತೆಯೆನಿಸಿದ.

ಮೊದಲು ಮುತ್ತಿಕ್ಕಿದ
ಸ್ವಾರ್ಥ
ಈಗ ಮುಕ್ಕಿ ಮುಗಿಸುತ್ತಿದೆ..
ಪಂಚಭೂತ ಸಾಕ್ಷಿಯಾಗಿ
ಮೊಟ್ಟಮೊದಲು
ನಾ 
ಎಳೆದ
ಮುಂಡುಬೀಡಿಗೊಂದು  ಧಿಕ್ಕಾರ..!

ಹರಿವಿಲ್ಲದಿದ್ದು
ನಿಜವಾದರೂ
ಮುಳುಗಿ
ಹತನಾಗುತ್ತೇನೆ.
ಚಟವಿಲ್ಲದವನಾಗಿ
ಮತ್ತೆ ಹುಟ್ಟುವ ಹಠ ತೊಟ್ಟು..!