About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Monday, March 3, 2014

ಲೀನ

ಠಣ್ಣನೆ ಗಂಟೆಯೊಂದು
ಬಾರಿಸಿತು..
ಮಲಗಿದಲ್ಲಿಂದ ನಿಧಾನವಾಗಿ ಎದ್ದು
ಹೊರಟ ಅವನು ತೇಲುತ್ತಾ..

ಹತ್ತಡಿ ಪಕ್ಕದ ಗ್ಲಾಸಿನಾಚೆ
ಅಮ್ಮ,ಅಪ್ಪ,ಅಪ್ಪಿ ಮುದ್ದಿಸಿದವಳು.
ಹೊರಟವನಲ್ಲಿ ಮೌನವ್ರತದ ಶುರುವಿತ್ತು.
ಎಲ್ಲರ ಕೆನ್ನೆಯನ್ನೊಮ್ಮೆ
ಸವರಿ ಇನ್ನಷ್ಟು ಜೀಕಿ ತೇಲಿದ.

ಹೊರಬಂದವನನ್ನು
ನೂರಡಿಗಳವರೆಗೆ ಬೀಸಿ ಬಿಸಾಕಿತ್ತು
ತಂಗಾಳಿ.
ತರಗೆಲೆಯೊಮ್ಮೆ ನಕ್ಕಂತಾಯಿತು.
ಇನ್ನೊಂದೇನೋ ಮೈ ಹೊಕ್ಕಂತಾಯಿತು.

ಅದು ಪುಟ್ಟನ ಮೂರು ಚಕ್ರದ ಕೈಗಾಡಿ.
ಕೂಗಲು ಹೊರಟವನ ಗಂಟಲು
ಟನ್ನುಗಳಷ್ಟು ಭಾರವಾದ ಭಾವದ ಭಾಸ.
ತಲೆಕೆಟ್ಟು
ಗಾಳಿಯಲ್ಲೊಂದು ಪಲ್ಟಿಯೊಂದಿಗೆ
ಮುಂದುವರೆದ.
ಮಧ್ಯೆ ಮಧ್ಯೆಯ ತಂಗಾಳಿಯ ಬಿಸಾಕುವಿಕೆಯೊಂದಿಗೆ.

ಅಲ್ಲಿ ಸಿಕ್ಕಿದ್ದು ಸಮುದ್ರ.
ಅರೆ.. ಅಲೆಗಳ ಗಲಾಟೆ
ಒಂಚೂರೂ ಕೇಳಲೊಲ್ಲದು..!?
ಏನಾಗಿದೆ ಕಿವಿಗೆ..?
ಮುಟ್ಟಿಕೊಂಡ.
ಕಿವಿಯಿದ್ದ ಜಾಗ ಖಾಲಿ.
ಮೂಗು?
ಅದೂ ಖಾಲಿ..!
ಕಣ್ಣು?
ಮುಟ್ಟಿಕೊಳ್ಳಲು ಕೈ ತಂದವನಿಗೆ ಕಂಡಿದ್ದು
ಕೈಯಿದ್ದ ಜಾಗದ ಖಾಲಿ.
ಮರುಕ್ಷಣ
ಐವತ್ತಾರು ಗಾಳಿಪಟಗಳ ಉದ್ದ ಸಾಲೊಂದು
ಹೊಟ್ಟೆಯೊಳಗಿಳಿದು
ಬೆನ್ನ ಸೀಳಿ ಹೊರಬಿತ್ತು..

ಮೂಲಾಧಾರದ ಮೂಲದಲ್ಲಿ
ಮೂಡಿದ ಭೀಕರ ಭಯ
ಟನ್ನು ಭಾರದ ಗಂಟಲ ಸೀಳಿ ಹೊರಬಿತ್ತು
ಚೀತ್ಕಾರದ ರೂಪದಲ್ಲಿ.
'ಕೀವ್.........'
ಕೊನೆಯ ಗಾಳಿಪಟ ತಿರುಗಿ ನಕ್ಕಂತಾಯಿತು.

ತೆರೆಗಳ ಮೇಲೆ
ಹಾರಿ ಬೀಳುವ ಮಕ್ಕಳು,
ಮರಳಲ್ಲಿ ನಿಂತು ಕಿರುಚುವ ಅಪ್ಪಂದಿರಿಂದ
ತುಂಬಿಹೋಗಿದ್ದ
ಸಮುದ್ರತಡಿಯ ಅಗಾಧ ಮೌನದಲ್ಲಿ
ಸುಮ್ಮನೇ ಕಣ್ಮುಚ್ಚಿಬಿಟ್ಟ.
ತೇಲಿಸಿ ಕರೆದೊಯ್ದಿತ್ತು ಮತ್ತದೇ ತಂಗಾಳಿ.

ನಂತರದಲ್ಲೊಮ್ಮೆ ಅರ್ಧ ರೆಪ್ಪೆ
ತೆಗೆದಿದ್ದಷ್ಟೇ.
ಅಲ್ಲಿತ್ತು ಅದು.
ಕಪ್ಪು-ಬಿಳುಪು ಪಟ್ಟೆ ಪಟ್ಟೆಯ
ಲೈಟ್ ಹೌಸಿನ ಕೊನೇ ಮಾಳಿಗೆ.

ಮೈಯ್ಯಿಲ್ಲದವನ ಮೈ ನಡುಗಿತ್ತು.
ಹಳೆಯದೆಲ್ಲವೂ ಮಂದಗತಿಯ
ಸಿನಿಮಾ ರೀಲಿನೊಳಗೆ ತಿರುಗತೊಡಗಿತು.
ಜಿಗುಪ್ಸೆ,ಸಮುದ್ರ,ಲೈಟ್ ಹೌಸು,
ಕೊನೆಯ ಮಾಳಿಗೆಯ ಮೆಟ್ಟಿಲು,
ಅಲ್ಲಿದ್ದ 'ಅಪಾಯ' - ಬೋರ್ಡು.
ಲೆಕ್ಕಿಸದೇ ಮುಂದೆ ಬಂದಿದ್ದು,
ಹುಟ್ಟಿಸಿದವರಿಗೆ,ಬೆಳೆಸಿದವರಿಗೆ,
ಕಲಿಸಿದವರಿಗೆ,
ಮುತ್ತಿಟ್ಟವಳಿಗೆ..
ಎಲ್ಲರಿಗೊಮ್ಮೆ ಕ್ಷಮೆ ಕೇಳಿದ್ದು..
ಕೊನೆಯದಾಗೊಮ್ಮೆ ಕಣ್ಮುಚ್ಚಿದ್ದು.
ಹಾರಿದ್ದು......

ರೀಲು ಕಟ್ಟಾಯಿತು.
ಲೈಟ್ ಹೌಸು ಮುರಿದುಬಿತ್ತು.
ಜಾತ್ರೆಯ ತೊಟ್ಟಿಲಿನಂತೆ
ಗರಗರನೆ ತಿರುಗಿದ ಕ್ಷಿತಿಜ
ತಿರುತಿರುಗಿ
ಭೂತಾಕಾರದ ಉದ್ದನೆ ಸುರಂಗವಾಗಿ ಮಾರ್ಪಟ್ಟಿತು.

ಒಳಹೊಕ್ಕಿಬಿಟ್ಟ.
ಹೋದಷ್ಟೂ ಸುರಂಗ ಮುಗಿಯದು.
ವೇಗ ಅಡಿ ಅಡಿಗೂ ದ್ವಿಗುಣ.
ಸುತ್ತಲೂ ಕತ್ತಲೆ...
ಕತ್ತಲೆ..
ಕತ್ತಲೆ.

*

ಅದೇನು..?!
ಬೆಳಕು..!
ಈಗಷ್ಟೇ ಹೊತ್ತಿಕೊಂಡ ಬಿಳಿಯ ಕಿಡಿಯಂತೆ..!
ಸುರಂಗದ ಕೊಟ್ಟ ಕೊನೆಯಂತಿದೆ.
ಓಹ್..
ಸಮೀಪಿಸುತ್ತಿದೆ.
ಅಂತೂ ಇನ್ನೇನು ಕೊನೆಮುಟ್ಟಿಬಿಡುತ್ತೇನೆ..!
ಕಿಡಿ ದೊಡ್ಡದಾಗುತ್ತಿದೆ,ಸುಡುತ್ತಿಲ್ಲ.
ಹೇಳಲಾಗದ ಸೆಳೆತ..

ಅಮ್ಮನ ಮೊಲೆತೊಟ್ಟು ನೆನಪಾಗುತ್ತಿದೆ..

ಅಮ್ಮಾ.....

ನಂತರದ ಘಳಿಗೆಗೂ ಮುನ್ನವೇ
ಬಿಳಿ ಬೆಳಕ ಗೋಲ
ತನ್ನೊಳಗಿನ ಸಂಪೂರ್ಣತೆಯೊಳಗೆ
ಹೀರಿಕೊಂಡಿತ್ತು ಅವನನ್ನು.........

.
.
.
.

ಇತ್ತ ಅವನ ಮನೆಯಲ್ಲಿ
ಅಪ್ಪಿ ಮುದ್ದಿಸಿದವಳ
ಅಳುವನ್ನೂ ಮೀರಿಸಿದ ರೌದ್ರತೆಯೊಂದಿಗೆ
ಗರುಡ ಪುರಾಣದ ಕೊನೆಯ ಶ್ಲೋಕ ಅಬ್ಬರಿಸಿತ್ತು.....