About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Saturday, October 27, 2012

ಉಳಿದೆಲ್ಲ ಮಾಯೆ..

ಮಾಧವನ ನಾದಕೆ
ಮುಂಗುರುಳ ಬಾಚದೇ
ಉಟ್ಟ ಬಟ್ಟೆಯ ತೊಟ್ಟು
ಹೊರಟಳಾ ಗೋಪಿಕೆ..

ಅಮ್ಮನಾ ನೆನಪಿಲ್ಲ
ಅಪ್ಪನಿಗೆ ಹೇಳಿಲ್ಲ
ಏನೊಂದು ತಿಳಿದಿಲ್ಲ
ಗೋಪಾಲನೊರತು..

ಮುಳ್ಳ ಮೊನಚಿಗೆ ಸಿಲುಕಿ
ಪಲ್ಲು ಸಿಗಿದರು ಕೂಡ
ಮೈ ನಿಲ್ಲಲಾರದು
ಮುಸುಕಿದಾ ಮಾಯೆಗೆ..

ಮುದ್ದು ಹರಿಣವು ಬೇಡ
ತುಂತುರಿನ ಮುದ ಬೇಡ
ಗೋವಿಂದನಂದಕ್ಕೆ
ಎಲ್ಲವೂ ಅಡ್ಡಿ..

ಆರ್ಭಟದ ವರುಣನೂ
ಸೋತು ಕಂಗಾಲಾಗಿ
ಹರಿದಿದ್ದ ಕಾಲ್ಕೆಳಗೆ
ತಿಳಿನೀರ ಥರದಲ್ಲಿ..

ನಿಂತ ಕೆರೆಯಲಿ ತೇಲಿ
ಹರಿವ ನದಿಯಲಿ ಹರಿದು
ಬಂದಳು ಹುಡುಕುತ್ತ
ಕೊಳಲಿನುಸಿರ..

ಅರೆರೆ..?!

ಶ್ಯಾಮನ ಸುಳಿವಿಲ್ಲ
ಎಲ್ಲಿ ಹೋದನೊ ಕಳ್ಳ
ದಿಕ್ಕು ದಿಕ್ಕಲಿ ಅಲೆದು
ಮರುಗಿದಳು ಕನ್ನಿಕೆ..

ಮೋಹನನ ರಾಗಕ್ಕೆ
ಮರಗಳಲು ಬೆವರಿತ್ತು
ಉಳಿದಿತ್ತು ಛಾಯೆ
ಉಳಿದೆಲ್ಲ ಮಾಯೆ..!

Friday, October 26, 2012

ಇನ್ನೊಂದಿಷ್ಟು ಹಾಯ್ಕುಗಳು:

ನನ್ನ ಕಣ್ಮುಂದೆಯೇ ಹುಡುಗನಿಗೆ
ತುಂಬುಯೌವನೆಯಿಂದ ಕಪಾಳಮೋಕ್ಷ.
"ಕಣ್ಣಾರೆ ಕಂಡರೂ ಮುಟ್ಟಿ ನೋಡು"
ಎಂಬ ಗಾದೆ ಅವನೇ ಬರೆದಿದ್ದು..!

ಮಧುರ ಕಂಠದ ಹಾಡುಹಕ್ಕಿಗೆ
ತನ್ನ ಶೈಲಿ ಬೇಜಾರಾಗಿ
ಒಮ್ಮೆ ಕರ್ಕಶವಾಗಿ ಕೂಗಿತು.
ನಂತರದಲ್ಲಿ ಅದು 'ಕಾಗೆ'ಯಂತಲೇ ಮನೆಮಾತಾಯಿತು..!

ಹುಡುಗಿಗೆ ಹುಡುಗ ಸಿಕ್ಕ.
ಮರಿಹಕ್ಕಿಗೆ ರೆಕ್ಕೆ ಸಿಕ್ಕಿತು.
ಉಳಿದಿದ್ದು ತಾಯ್ತಂದೆಯರ
ಖಾಲಿ ಮನ-ಮನೆಗಳು ಮಾತ್ರ.

ಗಾಂಧಿಯಂದ "ಕೆಟ್ಟದ್ದನ್ನು ಮಾಡಬೇಡ".
ಅದನ್ನು ಓದಿದ ಕೂಸು
"ಕೆಟ್ಟದ್ದು" ಪದಕ್ಕೆ ಅರ್ಥ ತಿಳಿಯಲು ಹೋಗಿ
ಸಿಗರೇಟು ಕಲಿಯಿತು..!

ಗೋಡೆಗೆ ಆತ ಹೊಡೆದ ಮೊಳೆಗೆ
ಮರುದಿನ ಕುಂಕುಮದಿಂದ ಕಂಗೊಳಿಸುತ್ತಿದ್ದ
ಅವನ ಭಾವಚಿತ್ರವೇ ನೇತುಬಿದ್ದಿದ್ದು
ದುರಂತವಲ್ಲದೇ ಇನ್ನೇನು..?!

Thursday, October 25, 2012

ಗರ್ಭಾಂತಃಕರಣ

ಅಮ್ಮ..
ಮೊದಲ ಕೀಟಲೆಗೆ
ಅಟ್ಟಿಸಿ ಹೊಡೆದವಳು ನೀನು,
ನಂತರವೂ..!

ತಿಳುವಳಿಕೆಯ ಮೊದಲುಗಳಲ್ಲಿ
ಅಂಡಿನ ಬಾಸುಂಡೆಗಳಿಗತ್ತು
ನಿನ್ನ ಗಂಡನ ಕೇಳಿದ್ದೆ ನಾನು..
ನಾ ನಿಮಗೇ ಹುಟ್ಟಿದ್ದಾ?
ತಂದು ಸಾಕಿದ್ದಾ?
ಮುದ್ದು ಸುರಿಯುವ ಅತ್ತೆಯೇ ನನ್ನಮ್ಮನಾ?!

ಉತ್ತರ ದಕ್ಕಿದ್ದು
ನಿನ್ನ-ನನ್ನಲ್ಲೊಂದಷ್ಟು ಸಾಮ್ಯತೆಗಳಲ್ಲಿ.
ಪಾರ್ಲರಿಲ್ಲದ ಕಾಲ ನಿನ್ನದು
ಇಬ್ಬರ ಹುಬ್ಬೂ ಪೊದೆಪೊದೆ.
ಗಜಗಮನೆಯಲ್ಲ,ಗುಬ್ಬಿಯೂ ಅಲ್ಲ ನೀನು,
ನನ್ನಂತೆ.
ಸ್ನೇಹಿತನೆಂದ ನೆನಪು..
ಜಡೆಹಾಕಿದರೆ ಥೇಟ್ ನಿನ್ನಮ್ಮನೇ ನೀನು..!

ರೂಮಿನ ಮಂದತೆಯಲ್ಲಿ
ಪೋಲಿಪುಸ್ತಕದೊಂದಿಗೆ ಸಿಕ್ಕಿಬಿದ್ದಾಗ
ಒಂದಿಂಚೂ ಬೈಯ್ಯಲಿಲ್ಲ ನೀನು..!
"ಯಾರಿದನ್ನು ಕೊಟ್ಟವ?" ಮತ್ತು
ಹಿತ್ತಲ ಹರಿವಲ್ಲಿ
ಹರಿದು ಬಿಸಾಕಿದ್ದಷ್ಟೇ.

ಅಜ್ಜಿಯೊಟ್ಟಿಗಿನ ನಿನ್ನ ಜಗಳ
ಯಾವತ್ತಿಗಿದ್ದಿದ್ದೂ ಶೀತಲವೇ.
ಆದರೂ
ಮಾತೆ-ರತಿಯರ ಮಧ್ಯೆಯ
ಅಪ್ಪನ ಸಮಭಾವದ ಹೆಣಗಾಟ
ನಂಗೆ ಮಾತ್ರ ಗೊತ್ತಿತ್ತು,ಗೊತ್ತಾ..?

ಕಾಲದ ಸವಕಳಿ ಬಹುಬೇಗ ಸಂದಿತು.
ವೀರ್ಯ,ಗಾಂಭೀರ್ಯತೆಗಳರ್ಥ ತಿಳಿಯಿತು.
ಓದಿಗೆಂದು ಮನೆಯಿಂದ
ಹೊರಬಿದ್ದಿದ್ದೂ ಆಯಿತು.
ಆಗ,ಆಗಲೇ ಗೊತ್ತಾಗಿದ್ದು ನಿನ್ನತಿಮುಗ್ಧ ಪ್ರೀತಿ.

ಅಲ್ಲಿಂದಿಲ್ಲಿಗೂ ಅದು ಜಾರಿಯಲ್ಲಿದೆ.
ದಿನಕ್ಕಾರುಸಲದ ಫೋನು,
"ಹೊಟ್ಟೆಬಾಕ ನೀನು,
ಎರಡು ಚಪಾತಿ ಯಾವ ಮೂಲೆಗೋ?"
ಎನ್ನುವ ವಾತ್ಸಲ್ಯ,
"ಅರ್ಜೆಂಟಿಗಿಟ್ಟುಕ್ಕೋ,ಅಪ್ಪನಿಗೆ ತಿಳಿಸಬೇಡ"ವೆಂದು
ಕೊಡುವ ಸಾವಿರದ ನೋಟು..

ಅಮ್ಮನಮೇಲಿನ ಕಥೆ,ಕವನಗಳ
ತಿರುವುಗಳಲ್ಲಿ "ನನ್ನಮ್ಮನ್ಯಾಕೆ ಹೀಗಿಲ್ಲ?"
ಎಂದುಕೊಳ್ಳುತ್ತಿದ್ದವನಿಗೆ
ಸಾತ್ವಿಕ ಉತ್ತರ ನಿನ್ನಿಂದಲೇ ಸಿಗುತ್ತಿದೆ ನನಗೆ.
"ಹಾಗಿದ್ದೆ ನಾನು,ಈಗಲೂ,
ಕುರುಡುಕಣ್ಣು ನಿನ್ನದು".

ಇಷ್ಟಾಗುವಷ್ಟರಲ್ಲಿ
ನಿನ್ನ ಬೆನ್ನಲ್ಲೊಂದು ಛಳಕು.
ಯಾವ ಕ್ಷಣದಲ್ಲೂ ನೀನು ಕಾಲು
ಕಳೆದುಕೊಳ್ಳಬಹುದೆಂಬ
ಡಾಕ್ಟರಿನ ಉದ್ಗಾರ..
ಬೇವರ್ಸಿ ಬದುಕಿನ ಆಟ ಇಲ್ಯಾಕೆ ಶುರುವಾಯಿತಮ್ಮಾ?

ಹಾಗಾಗಕೂಡದು.

ಕೈಗೊಂದು ಕೋಲನ್ನು ನಾನೇ ಕೊಡುತ್ತೇನೆ.
ತಪ್ಪಿದ್ದರೂ,ಇಲ್ಲದಿದ್ದರೂ
ಪ್ರತಿದಿನ ಅಟ್ಟಿಸಿ,ಓಡಾಡಿಸಿ ಹೊಡಿ ನನ್ನ :
ದೈವಕ್ಕೂ ಬಿಟ್ಟುಕೊಡೆನು ನಾ ನಿನ್ನ.
ಮುಕ್ಕೋಟಿದೇವರು ಕಾಲಡ್ಡ ಕೊಟ್ಟರೂ
ನಿನ್ನ ಕಾಲ್ಗಳ ಓಟ
ನನ್ನ ಮುಪ್ಪಿನತನಕ ನಿಲ್ಲದಿರಲಿ.
ನನ್ನೆಡೆಗಿನ ನಿನ್ನ
ಜ್ವಲಂತ ಪ್ರೀತಿ ಜ್ವಲಿಸುತ್ತಲೇ ಇರಲಿ.

Tuesday, October 23, 2012

ನಿಲ್ಲದಿದು ಕಾಲ..

ಗಡಿಯಾರದ ಮಡಿಲಲ್ಲಿ
ಮುಳ್ಳಿಡುವ ಮುಂಚೆ
ಒಮ್ಮೆಯೂ ಯೋಚಿಸಿರಲಿಲ್ಲವೇ ಇಟ್ಟವನು? :
ತನ್ನ ತಾರುಣ್ಯದ ಕೊಲೆ
ಅಲ್ಲಿಂದಲೇ ಎಂದು?

ದೊಡ್ಡವನಾಗಬಾರದಿತ್ತು ನಾನು..
ಅಕ್ಕನ ಮರಳುಗೂಡು ಪಕ್ಕದಲ್ಲೇ ಇರುತ್ತಿತ್ತು,
ಮೂರೊತ್ತು ಸಂಧ್ಯಾವಂದನೆಯ
ಕಷ್ಟವಿರುತ್ತಿರಲಿಲ್ಲ,
ನನ್ನವೇ ಕಣ್ಣುಗಳಿಗೆ
ಕುಡಿತದ ಕೆಂಪಂಟುತ್ತಿರಲಿಲ್ಲ..

ಕಾಲಚಕ್ರ "ಚಕ್ರ"ವೇ ಯಾಕಾಗಬೇಕಿತ್ತು?
ತಿರುಗದ,ಓಡದ
ಚೌಕವಾಗಿದ್ದಿದ್ದರೆ
ಅದರಲ್ಯಾವ ಮೂಲೆಗುಂಪಾದರೂ
ನನಗಡ್ಡಿಯಿರುತ್ತಿರಲಿಲ್ಲ..

'ವೇಳೆ'ಯ ಬೇಳೆ ಬೇಯಬಾರದಾಗಿತ್ತು..
ಅಪ್ಪನಪ್ಪುಗೆಯಲ್ಲಿ ಮುಪ್ಪಿನ ಘಮವಿರುತ್ತಿರಲಿಲ್ಲ,
ಹೊತ್ತಿಗೆ ಸರಿಯಾಗಿ ಮಲಗಿರುತ್ತಿದ್ದೆ,
ಹತ್ತೊಂಭತ್ತರ ಮಗ್ಗಿಯ
ವೇದನೆಯಿರುತ್ತಿರಲಿಲ್ಲ.!,
ಅಜ್ಜಿಯ ಸುಖಾಸುಮ್ಮನೆಯ ಕೆಮ್ಮಿಗೆ
ತಲೆತಟ್ಟಲು ಅಜ್ಜನಿರುತ್ತಿದ್ದ..

ಸಮಯಕ್ಯಾರು ಅಂಟಿಸಿದ್ದು ಈ 24/7..?
'ಸುವರ್ಣ'ಕ್ಕೊಂದೇ ಸಾಕಿತ್ತು..!
ಕ್ಷಣಕ್ಷಣಕ್ಕೂ
ಕ್ಷಣಗಳುರುಳುವಿಕೆ,
ಮೊಗ್ಗುಗಳರಳುವಿಕೆ,
ಪಕ್ಕದ ಪಕಳೆ ಬಾಡುವಿಕೆ..
ಮೂಡಿ-ಮಡಿಯುವುದೊಂದು
ಚಟವೇ ಇವಕ್ಕೆ?

ಯಾರೆಷ್ಟು ಬೊಬ್ಬಿರಿದರೂ,
ಹಜಾರೆಯೇ ಲಂಚವಿಕ್ಕಿದರೂ
ನಿಲ್ಲದಿದು ಕಾಲ..!
ಮೋಹಿನೀ 'ನಾಳೆ'ಗಳ ಭರಕ್ಕೆ ಬರವುಂಟೇ?
ಭೂರಮೆಯ ರವಿಯಾಸೆ ಕೊನೆಗೊಳ್ಳದ್ದು,
ಆಸೆಗಳ ತುರಿಕೆ ತಡೆಯಿಲ್ಲದ್ದು,
ಹೊಟ್ಟೆಯ ಆಕಳಿಕೆಗೆ
ಅನ್ನದ ಚಿಟಿಕೆ,ಹೊಡೆದು ಮುಗಿಯದ್ದು..

ಎಲ್ಲಿಯತನಕ?
ಪಾಪ ತುಳುಕುವತನಕ?
ಮೊಲೆಹಾಲು ಬತ್ತುವತನಕ?
ಅತಿಯಾಸೆಗೆ ಕೈ ರೇಖೆಗಳು
ನೇರವಾಗುವತನಕ..?!
ಎಲ್ಲೆಮೀರಿ
ಎಲ್ಲ ಮುಗಿಯುವತನಕ?

ದೇವರೊಮ್ಮೆ ಕೊನೆಯ ರುಜು ಹಾಕಲೇಬೇಕು..
ಅಷ್ಟರೊಳಗೆ
ಸುಖಾಸುಮ್ಮನೆಯ ಕೆಮ್ಮಿಗೆ
ತಲೆತಟ್ಟಲು
ನನ್ನಜ್ಜಿಗೊಂದು ಮರಿಮಗಳು ಸಿಕ್ಕಿಬಿಡಬೇಕು..!!

Wednesday, October 17, 2012

ಇದೇ ಬದುಕು ಬೇಕಿದೆ.

ಹೆಪ್ಪುಗಟ್ಟಿ ಅಂಡೂರಿ ಕುಂತಿದ್ದ
ಹತ್ತಾಸೆಗಳಿಗೆ
ಮತ್ತೆ ಹರಿವು ಸಿಕ್ಕಿದೆ..
ಕುಲಾವಿ ಹೊಲಿಯುವ ಕ್ಷಣಕ್ಕೆ ಕಾದಿರುವ
ಗಂಡು ಬಾಣಂತಿ ನಾನು..

ಪಣಕ್ಕಿಟ್ಟ ಒಂಭತ್ತು ಮಾಸಗಳು
ಬೇಡದ ನೈವೇದ್ಯವಾಗಲಿಲ್ಲ,
ನಾನೇ ಗೀಚಿ,ನಟಿಸಿ,ನಿರ್ದೇಶಿಸಿ,ನಡೆಸಿದ
ನಾಟಕಕ್ಕೆ
ನಾನೇ
ಪ್ರೇಕ್ಷಕ ಪ್ರಭುವೂ ಆಗಿದ್ದೆ..!

ಬೀಡಾಡಿ ಕುನ್ನಿಗಳಂತಿದ್ದ
ಕೆಲ ಕೆಟ್ಟಕನಸುಗಳು
ತುಂಡುಬಾಲ ಮುದುರಿ
ಇಂದು ತೆಪ್ಪಗಾಗಿವೆ.
ಸೋನೆಯಲ್ಲ ಇದು..
ದಪ್ಪ ಹನಿಗಳ ಕುಂಭದ್ರೋಣವೆಂದು
ಅವಕ್ಕೂ ಗೊತ್ತಾಗಿದೆ..

ಅದುರುವ ಆಸೆಗಳ ಬುನಾದಿಗೆ
ಎರಡಿಂಚು ಮರಳು ಜಾಸ್ತಿ ಬಿದ್ದಿದೆ.
ಆದರೂ..
ಭವಿತದ ಕಳಶ ಸ್ಥಾಪನೆಯ ಸೆಳೆತ
ಶೀಘ್ರಸ್ಖಲನವಾಗಬಾರದಲ್ಲ..!

ಹಾಗಾಗಿ..

ಬಿಕ್ಕಿದ್ದು,ಬಿಕ್ಕಲಿರುವುದ ಕೊಡವಿ
'ಇಂದು' ಮಾತ್ರ ನಂದೆಂದು
ಇವತ್ತಿನ ನನ್ನತನವನ್ನಪ್ಪಬೇಕಿದೆ
ಹರಿವಿನೊಂದಿಗೆ ನುಗ್ಗಬೇಕಿದೆ,
ಕ್ಷಣಗಳಲ್ಲಿ ಬದುಕಬೇಕಿದೆ,
ಇದೇ ಬದುಕು ಬೇಕಿದೆ.

ಮರೆತೆ..

ಗಾಂಧಿಬಜಾರಿನಿಂದ
ಕುಲಾವಿಗೊಂದು ಸೂಜಿ ತರಬೇಕಿದೆ..!

Saturday, October 13, 2012

ಚಾವಡಿಯ ಬೆಳಕಲ್ಲಿ..

ಚಾವಡಿಯ ಬೆಳಕಲ್ಲಿ
ಉಸಿರು ತೊಯ್ದಾಕ್ಷಣಕೆ
ಬಿಸುಟ ಆ ಚಾದರ,
ಕಳಕೊಂಡ ಚಾವಿಗಳೇ ಕುರುಹಾಗಲಿ..

ಚಿಗುರು ಮೀಸೆಯ ಭಯಕೆ
ಆತುರದಿ ಇಳಿದಿಳಿದ
ಕುಂಕುಮದ ಕೆಂಪುಹನಿ
ತುಟಿಪಕ್ಕದ ಮಚ್ಚೆಯ ಮರೆಮಾಚಲಿ..

ಸೀಳೊಡೆದೆರಡೆದೆ ಮೇಲೆ
ಮಗುವಾಗಿ ನಿದ್ರಿಸುವ
ನಿಷ್ಕಾಮ ಭಾವಗಳು
ಒಪ್ಪೊತ್ತು ಮುಗಿದಾಗ ಮರೆಯದೇ ಬರಲಿ..!

ಪದೆಪದೆಯ ಸರಿತಕ್ಕೆ
ಮುತ್ತುಗಳ ಕೆನೆತಕ್ಕೆ
ಒಂಚೂರು ನಕ್ಕು,ಒಂಚೂರು ನಾಚಿ
ನುಣುನಡುವನಪ್ಪಿದಾ ಕಟಿಬಂಧ ನೆಲಸೇರಲಿ..

ಅಸ್ತ್ರಗಳ ಅಭ್ಯಾಸ
ಕೊನೆಘಳಿಗೆಯಲ್ಲಲ್ಲ.
ಗಾದೆ ನಂಬುವ ಮುನ್ನ
ಮೇಲ್ಬರೆದ ಚರಣಗಳ ನೀ ಓದಲಿ..!

ಅಂತ್ಯದಾಡಂಬರಕೆ
ಚಂದ್ರರಾ ದಿಬ್ಬಣಕೆ
ಬಿಂಬಗಳ ಜೊತೆ ಯಾಕೆ
ಬಣ್ಣವಿಲ್ಲದ ಕನ್ನಡಿ ಕಣ್ಮುಚ್ಚಲಿ..
ತಪ್ಪಿ ಕಣ್ತೆರೆದರೂ ಕ್ಷಮೆ ಕೇಳಲಿ..!

ಓ ಬಿಸುಟ ಚಾದರವೆ
ನಿಷ್ಕಾಮ ಭಾವಗಳೆ
ನಸುಕು ಹರಿಯಿತು ಕೇಳಿ
'ಕೇಳಿ' ಮುಗಿಯಿತು ಏಳಿ
ಮೈಗಳಿಗೆ ಮುಸುಕಾಗಿ ಮೇಲೇರಿ ಬನ್ನಿ,
ಕನಸನೂ ತನ್ನಿ..!

Wednesday, October 10, 2012

ನಿದ್ರಾಪರ್ವ..

ಮನದಣಿಯೆ ಮಲಗಿ ಮಲಗಿ,
ಗುರಿಯ ಕನಸು ಬಿದ್ದೂ ಬಿದ್ದೂ
ಕೊನೆಗೊಮ್ಮೆ ಖಾಲಿಯಾಗಿದೆ..
ಸಹಸ್ರ ಮೈಥುನಗಳ ನಂತರದ ವೀರ್ಯದಂತೆ..!

ಕಟ್ಟಳೆಯಿಲ್ಲದ ತಿಂಗಳುಗಟ್ಟಲೆಯ ನಿದ್ದೆಯಿದು.
ಗೊರಕೆಯ ಸದ್ದಿಗೆಚ್ಚರವಾಗಿ "ಥೂ ಹಲ್ಕಟ್" ಎನ್ನಲು
ಪಕ್ಕದಲ್ಯಾರೂ ಇಲ್ಲ.
ದುರುಳ ದುರ್ಯೋಧನನಿಲ್ಲದ
ಜುಳು ಜುಳು ವೈಶಂಪಾಯನ ನಾನು..!

ಒಮ್ಮೊಮ್ಮೆ "ಥಟ್ ಅಂತ ಏಳಿ"
ಎನ್ನುವಂತೆ ಎದ್ದುಬಿಡುತ್ತಿದ್ದ ನೆನಪು..
ಮೂರರ ಜಾವ..
ಬ್ರಾಹ್ಮಿಯಲ್ಲ.. ಮದ್ಯಾಹ್ನ..!
ಗೂಡುಕಟ್ಟಿ ಮುಗಿದ ಗೀಜಗನ ನಿರಾಳತೆಗೆ
ಹಾವಿನ ಭಯದಂತೆಯಾ??
ಗೊತ್ತಿಲ್ಲ.

ನಿದ್ದೆಯಲ್ಲೆದ್ದು ಹೊಂಟವನಿಗೆ
ದಾರಿಗುಂಟ ಕುಂಟೆ-ಕಾವಲಿಗಳು ಅಡ್ಡ ಸಿಗಲು
ನನ್ನದೇನು ಬಂಗ್ಲೆಯೇ..?!
ಕದ ತೆರೆಯುತ್ತಿದ್ದಂತೆ ಮುಗಿದುಹೋಗುವ
ಬಡ ಅರಮನೆಯದು..!

ಅರೆ..!! ಅಶರೀರವಾಣಿ..!
"ಒಮ್ಮೆ ಎಚ್ಚರವಾಗು.. ದಾರಿ ಸಿಗುವುದು.."

ಎಚ್ಚರವಾಗಲಿಲ್ಲ..
ದೊಡ್ಡದಾಗಿ ಆಕಳಿಸಿ ಮತ್ತೆ ಮಲಗಿದೆ..
ಮುನ್ನೂರೈನೂರು ಹೊತ್ತುಗಳನ್ನು
ಮುಗ್ಗಲು ಹಿಡಿದ ಚಾದರದಡಿ
ಮಗ್ಗಲು ಬದಲಿಸುತ್ತಾ ಕಳೆದೆ..

ಇಂಥದೊಂದು ಸಕ್ಕರೆ ನಿದ್ದೆಯ ಮಧ್ಯದಲ್ಲಿ..

ಗೊತ್ತಿಲ್ಲದೇ ಸುಷುಪ್ತಿಯ ಪಿತ್ಥದಲ್ಲಿ
ಬಡಬಡಿಸಿದ್ದು..
"ಇದ್ಯಾ ಬುದ್ಧಿ ಬೇಕು" ಎಂಬಂತೆ
ಕೇಳಿರಬಹುದಾ..?!
ಕನಸಲ್ಲಿ ಜಗನ್ಮಾತೆ ಬಂದು
ನಾಲಿಗೆ ಎಳೆದು
ಹೊನ್ನ ತ್ರಿಶೂಲದ ಚೂಪಿನಲ್ಲಿ
"ಓಂ" ಬರೆದಳು..!!

ತಕ್ಷಣ ಧಿಗ್ಗನೆದ್ದು
ಕನ್ನಡಿಯೆದುರು "ಆ" ಮಾಡಿದೆ..
ಬಿಳಿನೊರೆ ತುಂಬಿದ ಕೆಂಪು ತೊಗಲು,
ಹಿಂದೊಂದು
ತೊಟ್ಟಿಕ್ಕುವ ಹನಿಯ ರೂಪದ
ಕಿರುನಾಲಿಗೆ..!
ಅಷ್ಟೇ..

ಅದೇ ಬೇಜಾರಿಗೆ
ಈ ಕವಿತೆ ಬರೆದೆ..