About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Sunday, July 14, 2013

ಸುಷುಮ್ನಾ..

ಮುಗಿಲು ಮಬ್ಬಾಗಿ ಮಳೆಚೆಲ್ಲಿ
ಅಳಿದುಳಿದ ಮರದನಿ
ಕೊನೆಗೊಳ್ಳುವ ಮುಂಚೆ..
ಏಡಿಗೂಡ ಮಲಗಿಸಿಕೊಂಡ
ತೋಟದಾ ಹಸಿಮಣ್ಣಿಗೆ
ಮಣಿಗೆಜ್ಜೆಯ ಹೆಜ್ಜೆಯಿಕ್ಕಿದಳು ಅವಳು..

ನೆಲಸವರಿದ ಕೆಂಪುದಾವಣಿಯಂಚು
ಕೊಂಚ ತೋಯ್ದಿತ್ತು..
ನಿನ್ನೆ ಜಾತ್ರೆಯಲ್ಲಿ ಕೊಂಡ
ಹಳದಿಗಾಜಿನ ಬಳೆಗಳಿಗೆ
ಒರಗಿ ನಿದ್ರಿಸಲೊಂದು
ಹೊಸ ಕೈ ಸಿಕ್ಕಿದ ಸಂಭ್ರಮವಿತ್ತು..!

ಗೂಡಿನಿಂದಾಚೆ ಬಂದ ಏಡಿಯ
ಕಸಕ್ಕನೆ ಒಳಗೋಡಿಸಿತ್ತವಳ ಮುದ್ದು ಪಾದ..
ನಡೆದಳು ಇಂಚಿಂಚಾಗಿ:
ಬಾಗಿ ಮುತ್ತಿಟ್ಟು ಜೇಡದ ಇಬ್ಬನಿ ಮನೆಯ.
ನಡೆದಳು ಗುನುಗುತ್ತ:
ಅಡಿಕೆ ಮರದ ಕೆಂಪಿರುವೆಗೆ ಗೊತ್ತಿಲ್ಲದ ಹಾಡೊಂದನ್ನ..

ಉದುರಡಿಕೆಯಾರಿಸುತ್ತ ನಿಂತ
ಅಪ್ಪ ಸಿಕ್ಕ ಪಕ್ಕ..
ಊಹೂಂ..
ಮಾತಾಡದೇ ಮುಂದೋಡಿದಳವಳು:
ಇನ್ನಷ್ಟು ಏಡಿಗಳ ಮನೆಗೋಡಿಸುತ್ತ.
ಮಲೆನಾಡಜಡಿಮಳೆಯುಡುಗೊರೆ
ಗೊಣ್ಣೆಯೊರೆಸುತ್ತ ನಿಂತ ತಮ್ಮ ಸಿಕ್ಕ ಮುಂದೆ..
ಇಲ್ಲ..
ಮತ್ತದೇ..
ಮಾತಾಡದೇ ಮುಂದುವರೆದಳು ಹುಡುಗಿ.

ಕೊನೆಗೂ ಬಂದಳವಳು
ತೋಟದ ಮೂಲೆಯಲ್ಲಿ ಹಾಸಿದ್ದ
ಗೋರಿಯ ಬಳಿಗೆ..
ಕಲ್ಲುಗೋರಿಗ್ಯಾವ ಮಳೆಚಳಿಯ ಭಯ?
ಮಲಗಿತ್ತು:
ರವಿಕಿರಣ,ಪಚ್ಚೆ ಪಾಚಿಗಳ
ಚುಚ್ಚಿಸಿಕೊಂಡು.

"ಸುಷುಮ್ನಾ"
ಗೋರಿಯಲ್ಲಿದ್ದ ತನ್ನ ಹೆಸರ
ಅಷ್ಟು ಮುದ್ದಾಗಿ ಕೆತ್ತಿಕೊರೆದ
ಗಾರೆಯವನಿಗೊಂದು ಸಲಾಂ ಹೇಳಿ
ಪಾಚಿಪಕ್ಕದ ಖಾಲಿಗೆ
ಪುಟ್ಟಪಾದವಿಟ್ಟು ಗೋರಿಯೊಳಗೋಡಿದಳು
ನೆರಳಿಲ್ಲದ ಹುಡುಗಿ.....!
ನನ್ನ ಹುಡುಗಿ....

ಹೀಗೇ..
ಅವಳಿಲ್ಲದ ಕ್ಷಣದಿಂದಿಲ್ಲಿಯವರೆಗಲ್ಲದೆ ಮುಂದೂ..
ಪೆನ್ನ ಮೊನಚಲ್ಲಿ ಅವಳ ಮೂಡಿಸುತ್ತೇನೆ.
ಅವಳೋಡುವ ದಾರಿಯಲ್ಲಿ
ಕೇಡಿಯಲ್ಲ ಏಡಿಯೂ ಬೇಡ.
ಅವಳಲೊಂದೇ ಕೂಗು ನನ್ನದು..
ಮಡದಿಯಾಗದೇ ಮಡಿದೆ ನಿಜ.
ಮುಂದೆಂದೂ ಲೇಖನಿಯಂಚಿನಲ್ಲಿ
ಮೂಡದೇ ಮತ್ತೆ ಮಡಿಯದಿರು..
ಅಷ್ಟೇ...