About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Monday, November 4, 2013

Diwali - ದೀಪಾವಳಿ

ನನ್ನ ಮಡಿಲ ಸೆರೆಯ ಬಿಡಿಸಿ
ತನ್ನ ತಾವರೆಯೂರಿಗೆ ಓಡಿಹೋದಳು
ಲಕ್ಷ್ಮಿ..
ಕಾಕರಾಜನ ಬೆನ್ನೇರಿ ಬೇಟೆಯಾಡುವವನ
ವಾರೆಗಣ್ಣೇಕೋ ಅದೇ ಸಮಯಕ್ಕೆ
ನನ್ನ ಜೇಬಿನ ಬೇಲೆ ಬಿದ್ದಿದ್ಯಾಕೆ..??!

ಅಲ್ಲಿಗೆ ಶುರುವಾಯ್ತು ಕಷ್ಟಗಳ One-sided ತುಲಾಭಾರ....

Paste ಖಾಲಿ..
ಮನೆಯಲ್ಲಿನ ಗ್ಯಾಸ್ ಖಾಲಿ..
ಹಬ್ಬದ ಸಂಭ್ರಮಕ್ಕೆ ಹೋಟೆಲ್ ಮುಂಗಟ್ಟುಗಳು ಬಂದ್..
ಸಾಲಕೊಟ್ಟವನ ಬೈಕು ಮನೆಮುಂದೆ ಹಾಕಿದ ಸೈಡ್ ಸ್ಟ್ಯಾಂಡ್ ಸದ್ದು..
ನೀರಿನ ಕ್ಯಾನಿಗೆ ಫೋನಾಯಿಸಿದರೆ ಬ್ಯಾಲೆನ್ಸ್ ನಿಲ್ ಎಂದುಲಿಯುವ ಕಟುಕಂಠದ ಲಲನೆ,
ರೂಮ್ ಮೇಟು ಊರುಸೇರಿದ್ದ,
ಬಿಸ್ಕೆಟ್ಟಿಗೆ ಕಾಸಿದ್ದರೂ ಮೂಲೆಯಂಗಡಿಯಲ್ಲಿ ದೊರೆತಿದ್ದು ಬೀಗ ಮಾತ್ರ..
ಅಯ್ಯೋ.. ಇದೇನು.. ಕರೆಂಟ್ ಹೋಯ್ತು...!

ದೀಪದ ಹಬ್ಬವಿದು -
-ನೆಂಟರೆನಿಸಿಕೊಂಡವರು ನೂರು.. ಮನೆಗೆ ಊಟಕ್ಕೆ ಕರೆಯದವರೇ ಎಲ್ಲರೂ..

ಒಂಟಿಯಾಗಿಹೋದೆ ಕೊನೆಗೂ..

ಹುಚ್ಚೊಂದು ತಂತಾನೇ ಮೆತ್ತಿಕೊಳ್ಳುವ ಮುನ್ನ ಹಲ್ಲು ಕಚ್ಚಿ ಎದ್ದು ನಿಂತೆ....
ಬರೀ ಬ್ರಶ್ಶಿಂದ ಹಲ್ಲುಜ್ಜಿದೆ..
ಗ್ಯಾಸ್ ಖಾಲಿಯಾದರೇನಂತೆ.. ಮೂರುದಿನದ ಹಿಂದೆ ಕೊಂಡ ಕ್ಯಾರೆಟ್ ತಿಂದೆ..
ಮಧ್ಯಾಹ್ನಕ್ಕೆರಡು ಪ್ಯಾಕ್ Eno..
ಸಾಲಕೊಟ್ಟವನಿಗೆ ನಾನೇ ಟೈಮು ಕೊಟ್ಟೆ..
ನಲ್ಲಿ ನೀರು ಕುಡಿದೆ..
ಕರೆಂಟಿಲ್ಲದಿರೆ ಪುಸ್ತಕಕ್ಕೆ ಬರವೇ..! ಗುಕ್ಕಿನಲ್ಲಿ ಮುಗಿಸಿದೆ ಮೂರ್ಪುಸ್ತಕಗಳ..
ನೆಂಟರ ಹಂಗು,ಹಮ್ಮುಗಳ್ಯಾಕೆ.. ಗಂಡಸಲ್ಲವೇ ನಾನು..!
ಬದುಕಿಬಿಡುತ್ತೇನೆ ಒಬ್ಬನೇ.. -
-ಮಕ್ಳಾ.. ಮುಂದೊಂದಿನ ಗಾಂಧೀಜಯಂತಿಗೂ ಮನೆಗೆ ಕರೀತೀರಿ ನನ್ನ.. ನೋಡ್ತಿರಿ..
ಎಂದುಕೊಂಡು..
ಕಸದ ಮಧ್ಯೆ ಸಿಕ್ಕ ಅರ್ಧ ಸಿಗರೇಟಿಗೆ ಕೆಂಪಂಟಿಸಿ
ಟೆರೇಸಿಗೆ ಬಂದರೆ...

...........................

ಭೂಚಕ್ರ,ಕುಂಡಗಳ ಮುಂಡಗಳಿಗೆ ಕಿಡಿಬತ್ತಿಗಳ ಚುರುಕುಮುಟ್ಟಿಸಿ
ಮನದ ಮೂಲೆಮೂಲೆಗಳಿಗೆ ಖುಷಿಯ ಬಣ್ಣ ಬಳಿದುಕೊಂಡ ಪಾಪುಗಳೂ..,
ಝರಿಸೀರೆಯ ಹೋಮ್ಲಿ ಅಮ್ಮಂದಿರೂ,
ಬರ್ಮುಡಾ ತೊಟ್ಟು ಡಿಜಿಕ್ಯಾಮ್ ಹಿಡಿದುನಿಂತ ಅಪ್ಪಂದಿರೂ,
ಊರ್ತುಂಬ ಅಲ್ಲಲ್ಲಲ್ಲಿ ಘೀಳಿಡುವ ಮಿನಿಬಾಂಬುಗಳು
ಹಾಗೂ..
ಟೆರೇಸಿನಲ್ಲಿ ಕೈಕಟ್ಟಿನಿಂತ ಸ್ನಾನ ಮಾಡದ ನಾನು...

ಹೌದು..

ಬದುಕಿಬಿಡಬೇಕು ನಾನು..
ಶನಿಲಕ್ಷ್ಮಿಯರ ಚುರುಕುಮುಟ್ಟಿಸಿಕೊಂಡಲ್ಲಿ ಮಾತ್ರ
ಕಿರಣಗಳ ಸೂಸಿ ತಿರುಗಲು ಸಾಧ್ಯ..
ಕಿಡಿಗಳ ಚಿಮ್ಮಿಸಿ ಭೋರ್ಗರೆಯಲು ಸಾಧ್ಯ..
ಬೆಳಕಾಗಲು ಸಾಧ್ಯ..
ಬದಲಾಗಲು ಸಾಧ್ಯ..
ಸಾಧ್ಯತೆಗಳ ಎದುರುಗೊಳ್ಳಲು ಸಾಧ್ಯ..
ಉರಿ,ಗುರಿ,ಗರಿ.. ಇದಲ್ಲವೇ ಹೈಯರಾರ್ಕಿ..?!!

ಬೋಧಿಯಿಲ್ಲದ ಟೆರೇಸಿನಲ್ಲಿ ಜ್ನಾನೋದಯವಾಗಿ
ಮೆಟ್ಟಿಲಿಳಿದ್ಹು ರೂಮಿನ ಕದ ತೆರೆದದ್ದಷ್ಟೇ..
ಕರೆಂಟು ಬಂತು......!!!

ನನ್ನ Diwali ದೇಹದೊಳಗೊಂದು
ಸ್ಪಷ್ಟ ದೀಪಾವಳಿ ಶುರುವಾಗಿದ್ದು ಹೀಗೆ....

Sunday, July 14, 2013

ಸುಷುಮ್ನಾ..

ಮುಗಿಲು ಮಬ್ಬಾಗಿ ಮಳೆಚೆಲ್ಲಿ
ಅಳಿದುಳಿದ ಮರದನಿ
ಕೊನೆಗೊಳ್ಳುವ ಮುಂಚೆ..
ಏಡಿಗೂಡ ಮಲಗಿಸಿಕೊಂಡ
ತೋಟದಾ ಹಸಿಮಣ್ಣಿಗೆ
ಮಣಿಗೆಜ್ಜೆಯ ಹೆಜ್ಜೆಯಿಕ್ಕಿದಳು ಅವಳು..

ನೆಲಸವರಿದ ಕೆಂಪುದಾವಣಿಯಂಚು
ಕೊಂಚ ತೋಯ್ದಿತ್ತು..
ನಿನ್ನೆ ಜಾತ್ರೆಯಲ್ಲಿ ಕೊಂಡ
ಹಳದಿಗಾಜಿನ ಬಳೆಗಳಿಗೆ
ಒರಗಿ ನಿದ್ರಿಸಲೊಂದು
ಹೊಸ ಕೈ ಸಿಕ್ಕಿದ ಸಂಭ್ರಮವಿತ್ತು..!

ಗೂಡಿನಿಂದಾಚೆ ಬಂದ ಏಡಿಯ
ಕಸಕ್ಕನೆ ಒಳಗೋಡಿಸಿತ್ತವಳ ಮುದ್ದು ಪಾದ..
ನಡೆದಳು ಇಂಚಿಂಚಾಗಿ:
ಬಾಗಿ ಮುತ್ತಿಟ್ಟು ಜೇಡದ ಇಬ್ಬನಿ ಮನೆಯ.
ನಡೆದಳು ಗುನುಗುತ್ತ:
ಅಡಿಕೆ ಮರದ ಕೆಂಪಿರುವೆಗೆ ಗೊತ್ತಿಲ್ಲದ ಹಾಡೊಂದನ್ನ..

ಉದುರಡಿಕೆಯಾರಿಸುತ್ತ ನಿಂತ
ಅಪ್ಪ ಸಿಕ್ಕ ಪಕ್ಕ..
ಊಹೂಂ..
ಮಾತಾಡದೇ ಮುಂದೋಡಿದಳವಳು:
ಇನ್ನಷ್ಟು ಏಡಿಗಳ ಮನೆಗೋಡಿಸುತ್ತ.
ಮಲೆನಾಡಜಡಿಮಳೆಯುಡುಗೊರೆ
ಗೊಣ್ಣೆಯೊರೆಸುತ್ತ ನಿಂತ ತಮ್ಮ ಸಿಕ್ಕ ಮುಂದೆ..
ಇಲ್ಲ..
ಮತ್ತದೇ..
ಮಾತಾಡದೇ ಮುಂದುವರೆದಳು ಹುಡುಗಿ.

ಕೊನೆಗೂ ಬಂದಳವಳು
ತೋಟದ ಮೂಲೆಯಲ್ಲಿ ಹಾಸಿದ್ದ
ಗೋರಿಯ ಬಳಿಗೆ..
ಕಲ್ಲುಗೋರಿಗ್ಯಾವ ಮಳೆಚಳಿಯ ಭಯ?
ಮಲಗಿತ್ತು:
ರವಿಕಿರಣ,ಪಚ್ಚೆ ಪಾಚಿಗಳ
ಚುಚ್ಚಿಸಿಕೊಂಡು.

"ಸುಷುಮ್ನಾ"
ಗೋರಿಯಲ್ಲಿದ್ದ ತನ್ನ ಹೆಸರ
ಅಷ್ಟು ಮುದ್ದಾಗಿ ಕೆತ್ತಿಕೊರೆದ
ಗಾರೆಯವನಿಗೊಂದು ಸಲಾಂ ಹೇಳಿ
ಪಾಚಿಪಕ್ಕದ ಖಾಲಿಗೆ
ಪುಟ್ಟಪಾದವಿಟ್ಟು ಗೋರಿಯೊಳಗೋಡಿದಳು
ನೆರಳಿಲ್ಲದ ಹುಡುಗಿ.....!
ನನ್ನ ಹುಡುಗಿ....

ಹೀಗೇ..
ಅವಳಿಲ್ಲದ ಕ್ಷಣದಿಂದಿಲ್ಲಿಯವರೆಗಲ್ಲದೆ ಮುಂದೂ..
ಪೆನ್ನ ಮೊನಚಲ್ಲಿ ಅವಳ ಮೂಡಿಸುತ್ತೇನೆ.
ಅವಳೋಡುವ ದಾರಿಯಲ್ಲಿ
ಕೇಡಿಯಲ್ಲ ಏಡಿಯೂ ಬೇಡ.
ಅವಳಲೊಂದೇ ಕೂಗು ನನ್ನದು..
ಮಡದಿಯಾಗದೇ ಮಡಿದೆ ನಿಜ.
ಮುಂದೆಂದೂ ಲೇಖನಿಯಂಚಿನಲ್ಲಿ
ಮೂಡದೇ ಮತ್ತೆ ಮಡಿಯದಿರು..
ಅಷ್ಟೇ...

Tuesday, March 12, 2013

ಕನಸೆಂಬೋ ಉಪಮೆಯನೇರಿ..

ಕನಸೊಂದು ಓಡಿ ಬಂದು ಕೇಕೆ ಹಾಕಿತು
ಹಲ್ಲು ಕಿಸಿದು
ತುಟಿ ಹರಿಯುವಂತೆ.
ಕಣ್ಣು ಕಾಸಗಲವಿತ್ತು:
ಪುಟ್ನಂಜನ ಪ್ರಿಯತಮೆಯಂತೆ:
ನನಗೂ ಆಸೆ ಊರಗಲವಿತ್ತು:
ವಿಷ್ಣುವರ್ಧನದ ಕಿಚ್ಚನಂತೆ..!

ಕೇಕೆ ಹಾಕಿದ ಕನಸಿಗೆ
ಮೂಗೊಂಚೂರು ಉದ್ದವಿತ್ತು:
ಶೂರ್ಪನಖಿಯಂತೆ.
ಕಣ್ಣೊಂಚೂರು ಚಿಕ್ಕದಿತ್ತು
ರಾಮಯ್ಯ ಕಾಲೇಜಿನ ನಾರ್ತಿ ಚಿಂಗಿಯಂತೆ..!

ಆದರೂ ಸುಮ್ಮನೇ ಬಿಡಲಿಲ್ಲ ನಾನು.
ಅದರ ಕೇಕೆಗೆ ಪ್ರತಿಸ್ಪರ್ಧಿಯಾದೆ..
ಗಹಗಹಿಸಿ ನಕ್ಕೆ:
ರೇಪಿಗೆ ಮುನ್ನದ ವಜ್ರಮುನಿಯಂತೆ..!
ಕನಸಿನ ಕೆನ್ನೆ ಹಿಂಡಿದೆ:
ಪಾಂಡ್ಸ್ ಬೇಬಿಯ ಮಮ್ಮಿಯಂತೆ.. :)

ಕೆನ್ನೆ ಹಿಂಡಿದ ನೋವಾ?
ಖುಷಿಯಾ?
ತಿಳಿಯದು.
ಕನಸಿನ ಕೇಕೆ ಥಟ್ಟನೆ ನಿಂತಿತು:
ಸುಪ್ರೀಂ ಸ್ಟೇ ನಂತರದ ಕಾವೇರಿಯಂತೆ.
ಒಮ್ಮೆಗೇ ಮೈಯ್ಯೊಳಗೆ ಹೊಕ್ಕಿಬಿಟ್ಟಿತು:
"ಶ್ರೀರಾಮಚಂದ್ರ"ದ ಶ್ರೀರಾಮನಂತೆ.

ಈಗದು ನನ್ನ ನಿದ್ದೆ ಕಸಿದಿದೆ,
ಕೂತಲ್ಲಿ ಕೂರಲು ಬಿಡದು,
ಅವಕಾಶಗಳು ಕಣ್ಣೆದುರಲ್ಲೇ ಆಡುತ್ತಿವೆ:
ಟಿಕ್ಲಿಯಿಟ್ಟು ತಿರುಗುವ ಪುಟ್ಟಿಯರಂತೆ..
ಅಷ್ಟರಲ್ಲೇ..
ದೂರದ ಗುಡಿಸಿಲಲ್ಲೊಂದು ಹಾಡು
"ಏಕೆ ಕನಸು ಕಾಣುವೆ.. ನಿಧಾನಿಸು ನಿಧಾನಿಸು.."
". . . . . . . . . . . . . . . . . . . . . ."
ಮಂಕಾಗಿಬಿಡುತ್ತೇನೆ:
ಕನಸಿನ ಕೇಕೆ ಕೇಳುವ ಮೊದಲಿದ್ದ ನನ್ನಂತೆ....

Monday, February 4, 2013

ಕತ್ತಲೆಗೊಂದು ಧಿಕ್ಕಾರದೊಂದಿಗೆ..


ಇರುಳಿನ ಬಿಗಿದಪ್ಪುಗೆಯಲ್ಲಿ
ಹರಿದ ರವಿಕೆಯೊಳಗಿಂದ
ಥಟ್ಟನೆ ಗೋಚರಿಸಿತವಳೆದೆ
ಮರಿನಾಯಿಯಕ್ಷಿಯೊಳಗೆ
ಪಕ್ಕದಲ್ಲಿದ್ದ ಹಸಿದ ಮರಿನಾಯಿಗೆ..

ತನ್ನಮ್ಮನ ಆರ್ಮೊಲೆತೊಟ್ಟುಗಳೂ
ಬರಿದಾಗಿ ಹಪ್ಪಳವಾಗಿವೆ..
ಕ್ಷೀರಸಾಗರ ಕಡೆವ ದೇವತೆಗಳೊಂದು
ಲೋಟವಾದರೂ ಅಮ್ಮನೆದೆಗಿಟ್ಟು
ತುಳುಕಿಸಲಾರರೇ??
ಎಂದತ್ತುಕೊಂಡು ಮರಿನಾಯಿಯ ಪಕ್ಕದಲ್ಲಿತ್ತು
ಆ ಹಸಿದ ಮರಿನಾಯಿ..

ತುಂಬಿದೆದೆ ಕಂಡೊಡನೆ
ಮುರಿದೊಂದು ಕಾಲನೆಳೆಯುತ್ತಾ ಓಡಿ
ಹರಿದ ರವಿಕೆಯ ಜಾಗಕ್ಕಗಲಿಸಿತು ಬಾಯಿ.
ಬಿಳಿಹಾಲ ಬದಲು
ಹನಿರಕ್ತವಂಟಿತದರ ತುಟಿಗೆ..
ಆರ್ಮೊಲೆತೊಟ್ಟುಗಳ ನಾಯಿಯ ಮರಿಗೇನು ತಿಳಿದೀತು
ಆರ್ಮಂದಿ ಕಾಮುಕರ ಅಟ್ಟಹಾಸ..??

ಹನ್ನೆರಡು ಹಸಿದ ಕಣ್ಣುಗಳಲ್ಲೂ
ಅವಳದೇ ಬಿಂಬಗಳು..
ಆದರೆ ದೇವರು ನಿರಾಕಾರ.
ಅವಳ ಗೋಳ ಕೇಳಲು
ಕಿವಿಯಿಲ್ಲ ಅವನಿಗೆ..
ಕೊನೆಗೆ..
ನಡುಮುರಿದ ಆ ಭಗ್ನಬಾಲಿಕೆಯನ್ನೊಂದು 
ತಿಪ್ಪೆಗೆಸೆದವು ವಾಂಛೆ ತೀರಿದ ಹಂದಿಗಳು..

ಹರಿದ ರವಿಕೆಯ ತುದಿ
ಗಾಳಿಗಲ್ಲಾಡಿತ್ತು..
ಮರಿನಾಯಿಯ ಪಕ್ಕ ಒರಗಿದ್ದ
ಮರಿನಾಯಿಗೆ ಹಸಿವು ಕಾಡಿತ್ತು..
ಓಡಿದ್ದ ಮರಿನಾಯಿಗೊಂದು ಕಾಲು ಕುಂಟು,
ಮಲಗಿದ್ದ ಆಕೆಗೆ ಮಾನ ಕುಂಟು.
ಹಸಿದು ಸಾಯುವ ಭಯ ಮರಿನಾಯಿಗಿತ್ತಾ??
ತಿಳಿದಿಲ್ಲ.
ಆದರೆ..
ಇರುಳು ತನ್ನಪುಗೆಯ ಸಡಿಲಿಸಿದ ಕೂಡಲೇ
ಕಂಡಿದ್ದು,ಕೇಳಿದ್ದು ಒಂದೇ ಶಬ್ಧ..
"ನಿರ್ಭಯಾ..".

Tuesday, January 22, 2013

ಬಂದೇಬಿಟ್ಟಿದೆ ಆ ದಿನ..

ಸಾವಿರ ಅಳು ಕನವರಿಕೆಗಳ
ನಂತರದಲ್ಲೊಮ್ಮೆ
ಬಂದೇಬಿಟ್ಟಿದೆ ಆ ದಿನ..
ನಾ ಚಿತೆಯಾಗುವ ದಿನ..
ನೀ ಕೊಳ್ಳಿಯಾಗುವ ದಿನ..
ಪ್ರೀತಿಯೆಂಬ ಹೆಣ ಫಟಫಟನೆ
ಉರಿದುಹೋಗುವ ದಿನ..

ಕಣ್ಣೀರು ಸುರಿಸುವವರ್ಯಾರೇ ಹುಡುಗೀ..?
ನಮ್ಮಧ್ಯದ ಒಲವ ತಿಳಿದವರ್ಯಾರೂ ಇಲ್ಲ :
ಇಬ್ಬರ ಗೆಳೆಯರ ಬಳಗದಲ್ಲೂ..
ಕೊನೆಗೂ..
ಪ್ರೀತಿಗೆ ಅನಾಥ ಶವದ ಪಟ್ಟವೇ..

ಬೇರೆಯವನ ಬೆರಳಂಚಿನ
ಕರಿಮಣಿಗೆ ಕೊರಳೊಡ್ಡಲು
ಇನ್ನೂ ಸಮಯವಿದ್ದರೂ..
"ಓಡಿ ಬಾ" ಎನ್ನಲು
ನನ್ನ ಕೊರಳೊಪ್ಪದು ಪುಟ್ಟೀ..
ನಲ್ಲಿ ನೀರು ಕುಡಿಯುವವ ನಾನು.
ನಿನ್ನತಿಯಿಷ್ಟದ ನಿಂಬೆರಸಕ್ಕೆ ಬೇಕಾಗಿದೆ
ನಿಂದೇ ದುಡ್ಡು..!

ನಾ ಹೇಳುವುದೊಂದೇ..
ಇವತ್ತಿನ ಗೋಧೂಳಿಯಲ್ಲಿ ನಿನ್ನ ಲಗ್ನ..
ಹಸೆಮಣೆಯಲ್ಲಿ ಕುಸಿದು ಕೂರದಿರು..
ಹಾರ ಹಿಡಿದ ಕೈ ನಡುಗಿಸದಿರು..
ಬಿಗಿದ ಬಾಸಿಂಗಕ್ಕೂ ತಿಳಿಯದಿರಲಿ
ನನ್ನ ವಿರಹ..
ನನ್ನೊಡನೆ ಸರಿಸಿದ ಸಾವಿರ ಪದಿಗಳ ಮುಂದೆ
ಇನ್ನೊಬ್ಬನೊಡನೆ ಬರಿ ಏಳು ಪದಿ ದೊಡ್ಡದೇನೇ ನಿನಗೆ??

ನಾ ಕೇಳುವುದೊಂದೇ..
ನಿನ್ನೊಲವಿನ ಗಣಪನಲ್ಲಿ ಬೇಡಿಕೋ..
"ನನ್ನ ಮದುವೆಯಾದೊಂದು ವರ್ಷ
ಇವನಿಗಿರದಿರಲಿ ಕೈ ತುಂಬ ಕಾಸು.."
ಕಾರಣ..
ರಸ್ತೆಯಂಚಿನ ಬಾರು
ಇತ್ತೀಚೆಗ್ಯಾಕೋ ಕೈಬೀಸಿ ಕರೆಯುತ್ತಿದೆ..!

ಮತ್ತು..

ನಾ ಬೇಡುವುದೊಂದೇ..
ದಯವಿಟ್ಟು,ದಯಮಾಡಿ..
ನಾ ಮುತ್ತಿಟ್ಟ ಚೆಂದುಟಿಗಳಿಗೆ
ನಿನ್ನಾತ ಜಿಲೇಬಿಯಿಕ್ಕುವ ಚಿತ್ರವ
ಫೇಸ್ ಬುಕ್ಕಿನ ಗೋಡೆಗಂಟಿಸಬೇಡ.. :(
ಬಿಕ್ಕಿ ಸಾಯುವ ಸಾವು ನನ್ನದಾಗುತ್ತದೆ..
ಕೊನೆಯವರೆಗಿನ ಕೊರಗು ನಿನ್ನದಾಗುತ್ತದೆ..

ಇಷ್ಟು ತಿಳಿಸುವುದಿತ್ತು ನಿನಗೆ. ಇಷ್ಟೇ..

Tuesday, January 1, 2013

ಕೋತಿಯಂಥವಳು ನೀನು..

ಕೋತಿಯಂಥವಳು ನೀನು..
ಕೀಟಲೆಗಿನ್ನೊಂದು ನೇಮು..!
ಮಡಿಲಿಗೊರಗಿಸಿ,
ಕಡಲೆ ತಿನ್ನಿಸಿ,
ಕಿವಿಕಚ್ಚಿ ಕಂಬಿಕಿತ್ತೆ ಮೊನ್ನೆ..!

ನಾನೇನು ಕಡಿಮೆ ಕೂಸೇ..?!
ಸುಮ್ಮನೇ ಕುಂತೆ :
ಪಕ್ಕದ ಬೆಂಚಿನಲ್ಲಿ
ತುಟಿಯೊತ್ತಿದ ಜೋಡಿಯ ನೋಡುತ್ತಾ..!

ಕೈಯಲ್ಲಿ ಕಡಲೆಯುಳಿದಿತ್ತೋ,
ಕುಂತಿದ್ದು ಕಂಡು,ನೋಡಿದ್ದು ಕಂಡು
ಪಿತ್ಥ ಕೆರಳಿತ್ತೋ ಕಾಣೆ..
ಮತ್ತೆ ಬಂತಲ್ಲ ಹಟ್ಟಿಗೆ ಹಸು
ಕೋಣಕ್ಕೆ ಕಣ್ಣು ಪಟ್ಟಿ ಕಟ್ಟಲು..!

ನಮ್ಮನೆಯ ಹುಲ್ಲು ಮುಗಿದಿಲ್ಲ
ಪಕ್ಕದ ಕೊಟ್ಟಿಗೆ ಬೇಡವೆನ್ನುತ್ತಾ
ತುಟಿಗೊಂದಿಟ್ಟೆಯಲ್ಲ ಮುತ್ತು..!
ಆ ಕ್ಷಣ.. ಅದೇ ಕ್ಷಣ..
ಕಾಲ ನಿಂತ ನೀರಾದದ್ದು..
ತುಟಿಯಲ್ಲೊಂದು ಗೀರಾದದ್ದು..
ಪಕ್ಕದ ಜೋಡಿ ಎದ್ದು ಹೋಗಿದ್ದು..!

ನನ್ನಧರಗಳ ನನಗೊಪ್ಪಿಸಿದ ನಂತರ..
ವಸುಂಧರೆಯ ಸಪ್ತಾದ್ಭುತಗಳೆಲ್ಲವೂ
ಭ್ರಮಾಬೂದಿಯಲ್ಲಿ ಕರಗಿದಂತೆನಿಸಿ,
ಸ್ವಪ್ನದಲ್ಲುಲಿವ ಊರ್ವಶಿ ಶೋಡಷಿಯರೆಲ್ಲರ
ಘಮಗಳೂ ಕಮಟು ವಾಸನೆಯಂದೆನಿಸಿ,
ಹಸಿರು ತೊಟ್ಟಿಲಿನ ಹಕ್ಕಿಮರಿಗಳಿಗೆಲ್ಲ
ಒಮ್ಮಿಂದೊಮ್ಮೆಗೇ ಹೊಟ್ಟೆತುಂಬಿದಂತೆನಿಸಿ..
ಥೋ..
ಹಿಂಗೇ ಹೆಂಗೆಂಗೋ ಅನಿಸಿದ್ದು ನಿನ್ನಾಣೆಗು ನಿಜ.. :)

ಅಂತೂ
ಕೋತಿಯಾಗಿಸಿಬಿಟ್ಟೆ ನನ್ನನ್ನೂ..!
ನಾಳೆ ಸಿಕ್ಕಿದಾಗ
ಮಡಿಲು ನನ್ನದು.
ಒಂದೇ ಚೇಂಜು
ಕಡಲೆಯ ಬದಲು ಮುತ್ತುಗಳಿರುತ್ತವೆ ನನ್ನಲ್ಲಿ..!
ಹಾಗೆಯೇ
ಕರ್ಚೀಪಿಡುತ್ತೇನೆ ಪಕ್ಕದ ಬೆಂಚಿನಲ್ಲಿ..! :)