About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Thursday, March 22, 2012

ಕಾಮಾತುರಾಣಾಂ..

ನನ್ನ ಮುದ್ದು ಮಗಳಿಗೊಂದು ಪತ್ರ :

ನೀನಂದು ನನ್ನ ಕೈಯ್ಯಲ್ಲಿದ್ದಾಗ ಕೆನ್ನೆ ತೋಯ್ದ ಬಿಸಿಹನಿಯೊಂದು
ಖುಷಿ ತಾಳಲಾರದೇ ಜಾರಿಬಿದ್ದಿತ್ತು ನಿನ್ನ ಪುಟ್ಟುಪಿಂಕು ಅಂಗೈಗೆ.
ಜೋಯಿಸರ ಮಾತ ಊರಿಂದಾಚೆ ಬಿಸಾಕಿ
ನಿನ್ನ ಕಿವಿಯ ಕವಲಲ್ಲಿ ಹೆಸರೊಂದ ತೂಗಿಬಿಟ್ಟಿದ್ದೆ.. "ಸೃಷ್ಠೀ"....

ನಿನ್ನಮ್ಮನ ಥರ ಜಡೆಬಿಡಬೇಡ..
ಅವಳಂತೆ ಸೌಂದರ್ಯ ಸುಕ್ಕಾದೀತು ಎಂದಾಗ
ಬಂದ ಸಿಟ್ಟಿಗೆ ಬಚ್ಚಲ ಕೊಳೆ ಹಾಗೇ ಇತ್ತು.
ಸಾರಿಗೆ "ರುಚಿಗೆ ತಕ್ಕಷ್ಟು ಉಪ್ಪು" ಜಾಸ್ತಿ ಬಿದ್ದಿತ್ತು..!

ಬಂಪರಿಲ್ಲದ ಸೈಕಲ್ಲು,ಮುಂದೊಂದು ಹೂಬೊಕ್ಕೆ
ನಿನ್ನದೊಂದು ಸಿಹಿಮುತ್ತು,ನನ್ನಾಕೆಯ ಕಣ್ಣಲ್ಲಿನ
"ಹುಷಾರು ರೀ" ಎಲ್ಲಾ ಸೇರಿ ಅವತ್ತೊಂದಿನ
ಪೂರ್ಣಚಂದ್ರ ಮೂಡಿದ ಯುಗಾದಿಯಾಗಿತ್ತು ನನಗೆ..!

ನಿನ್ನ ಹಠ ನನ್ನದೂ ಆಗಿತ್ತೇನೋ ಗೊತ್ತಿಲ್ಲ.
"ಅಪ್ಪನ್ ಪಕ್ಕನೇ ಮಲಗ್ತೀನಿ ನಾನು.."
ಸೊಂಟದಾಚೆ ಕಾಲುಹಾಕಿದ ನಿನ್ನ,
ನೀ ನಿದ್ದೆಹೋದ ಮೇಲೆ ಅದೆಷ್ಟು ಮುದ್ದಿಸಿದ್ದೆ ಗೊತ್ತಾ?!
ಅಮೇಲಾಮೇಲೆ ನಿನ್ನ ಹಠ ನನ್ನದೇ ಆಯಿತು..

ಆದರೆ ಅಂದು..

ಮೊದಲೆಲ್ಲೂ ಹಾಗೆ ಗೊತ್ತಿರಲಿಲ್ಲ ನೀನು..
ರಕ್ತವರ್ಣದ ರೇಷಿಮೆ ಸೀರೆ,ಕೆಂಪು ತುಟಿ,
ಅಮಾಯಕತೆಯಲ್ಲಿ ನಂಗೆ ಮಾತ್ರ ಕಂಡ ಮಾದಕತೆ..
ಎಲ್ಲಕ್ಕೂ ಮಿಗಿಲಾದ ತುಂಬು ಕುಪ್ಪುಸ..!

ಕೆಲಸದಲ್ಲಾಸಕ್ತಿಹೀನನಾದೆ..
ನೇವರಿಸಿಕೊಳ್ಳುವ ನಿನ್ನ ಬೆನ್ನೆಲ್ಲಿಂದರಿತಾತು ಪಾಪ.
ತಪ್ಪೆಂದರಿವಿದ್ದರೂ ತಪ್ಪೇ ಮಾಡುತ್ತಿದ್ದೆ.
ನಿನ್ನಪ್ಪನಲ್ಲೊಬ್ಬ ಪಿಪಾಸು ಹುಟ್ಟಿಕೊಂಡುಬಿಟ್ಟ ಮಗಳೇ..

ಛೀ.. ನಾಚಿಕೆಯಿಲ್ಲದ ನಾಯಿ..
ಮನುನಿಯಮವ ಚರಂಡಿಗೆ ತೂರಿದ ಮುಖೇಡಿ..
ಕಾಮವಾಂಛೆಯ ಹಂದೀ..
ಅಯ್ಯೋ..
ಏನು ಮಾಡಲಿ..ನಿನ್ನಾ ಲಾವಣ್ಯದ ಮತ್ತಿಗೆ
ಈ ಸ್ವನಿಂದನೆಗಳೇನೂ ಮಾಡದಾದಾಗಲೇ ನಿರ್ಧರಿಸಿಬಿಟ್ಟೆ..

ಇಂಥ ನನ್ನಂಥವರಿಗೀಜಗವಲ್ಲಮ್ಮಾ..ತಿಪ್ಪೆಯಲ್ಲಿನ
ಹಡಬೆನಾಯಿಗೂ ಈ ಮನಸ್ಥಿತಿಯಿರದಿರಲಿ..
ಅಪ್ಪನಡಿಯುಸುರಿಗೆ ಕೊಳೆತ ಜೀವಚ್ಛವವಾಗದೇ
ತಂದೆಯಿಲ್ಲದ ಮಗಳಾಗಿಯೇ ಜೀವಿಸಿಬಿಡು ತಾಯೀ..
ನಿನ್ನೊಂದು ಹೇಸಿಗೆಯ ನೆನಪಾಗಿಯೂ ಉಳಿಸಬೇಡ ನನ್ನ.

ನಿನಗೆ ಹೇಳಲೇಬೇಕೆನಿಸಿದ್ದಿಷ್ಟು..

ನರಕ ನನಗಾಗಿ ಕಾದಿದೆ..ಹೋಗುತ್ತಿದ್ದೇನೆ.

- ಅಪ್ಪ.

****************************************************
ಇದು "ಈಡಿಪಸ್ ಕಾಂಪ್ಲೆಕ್ಸ್" ಹಾಗೂ "ಎಲೆಕ್ಟ್ರಾ ಕಾಂಪ್ಲೆಕ್ಸ್" ಗಳಂಥ ಮಾನಸಿಕ ವ್ಯಾಧಿಯ ಮೇಲೆ ಬರೆಯಲೆತ್ನಿಸಿದ ಕವನ.ತಂದೆಯೇ ಮಗಳೆಡೆಗೆ ಅನುರಕ್ತನಾಗುವ ಇಲ್ಲಿನ ವಿಷಯಕ್ಕೆ ವೈಜ್ನಾನಿಕ ಭಾಷೆಯಲ್ಲಿ ಯಾವ ಕಾಂಪ್ಲೆಕ್ಸೆನ್ನುತ್ತಾರೋ ಗೊತ್ತಿಲ್ಲ. ಆದರೆ ಪ್ರತಿದಿನ ಒಂದಿಲ್ಲೊಂದು ಪೇಪರಿನಲ್ಲಿ "ಮಗಳ ಮೇಲೆ ತಂದೆಯ ಅತ್ಯಾಚಾರ"ದಂಥ ಸುದ್ದಿಗಳನ್ನು ಓದುತ್ತಿರುವುದು ದುರಂತ.

6 comments:

 1. ವಿಶ್ವ, ಕವನದ ಸಾರ್ಥಕ್ಯ ಇದೇ ಆಗುತ್ತದೆ.. ತುಂಬಾ ಪ್ರಯೋಜನಕಾರೀ ಕವನ ಇದು.
  ಯಾವತ್ತಿನಂತೆ ನಿನ್ನ ಶೈಲಿ ಸ್ವಲ್ಪ ಬಿಗು ಕಳೆದುಕೊಂಡಿದೆ ಏನೋ, ಆದರೂ ವಸ್ತುವಿಗೆ ಸಾಕಷ್ಟು ನ್ಯಾಯ ಕೊಟ್ಟಿದೆ.

  ಈಡಿಪಸ್ಸಿನ ಗೂಢ ಪಾಪಲೇಪಿತ ನಾನು
  ಟ್ರಾಕ್ಟರನ್ನೇರಿದೆನು , ಉತ್ತೆ ಸಿಗಿದೆ - ಅಡಿಗರು ಭೂಮಿಗೀತದಲ್ಲಿ ಹೇಳಿದ್ದು ಇದನ್ನೇ. ಮತ್ತೆ ಇದು ಮಾನವ ಭೂಮಿಯನ್ನು ನೋಡುವ ದೃಷ್ಟಿಯೂ ಹೌದು. ಚೆನ್ನಾಗಿದೆ.

  http://bhavakirana.blogspot.in/2012/01/blog-post_23.html ನಾನೂ ಇದೇ ವಿಷಯದ ಮೇಲೆ ಬರೆದು ಸೋತಿದ್ದೇನೆ. ಆದರೆ ನಿನ್ನಷ್ಟು ಪ್ರಾಮಾಣಿಕ ಆಗಲಿಲ್ಲ..

  ReplyDelete
 2. ವಿಶ್ವಣ್ಣ ಎಕ್ಸಲೆಂಟ್ ಎಂದಷ್ಟೇ ಹೇಳುತ್ತೇನೆ.. ವಿಷಯ ವಸ್ತುವಿಗೆ ಸಂಪೂರ್ಣ ನ್ಯಾಯ ದಕ್ಕಿಸಿದ್ದೀರಿ.. ಚಡ್ಡಿಯಿಲ್ಲದ ಮಾತುಗಳು, ಚಳಿಯಲ್ಲಿ ಇತ್ತೀಚೆಗೆ ನಾನು ತುಂಬಾ ಇಷ್ಟಪಡುತ್ತಿರುವ ಬ್ಲಾಗ್ ಗಳಲ್ಲೊಂದು.. ಮಗಳ ಮೇಲೆಯೆ ಅನುರಕ್ತನಾಗ ಬಯಸುವ ತಂದೆಯ ಕಾಮುಕ ಮುಖವನ್ನು ಬೆತ್ತಲು ಮಾಡಿದ್ದೀರಿ.. ಕವಿತೆಗೆ ಕಡೆಯಲ್ಲಿ ನೀಡಿದ ತಿರುವು ತುಂಬಾ ಹಿಡಿಸಿತು.. ಆ ಅಪ್ಪ ಕೇವಲ ಒಂದು ಪ್ರತಿಮೆಯಾಗಿ ನಿಂತು ಕಾಮಕ್ಕಾಗಿ ಮಮತೆ ಮತ್ತು ಪ್ರೀತಿಯನ್ನು ಹೊಸಕುವ ಅಪ್ಪಂದಿರ ಆತ್ಮಹತ್ಯೆ ಮಾಡಿಸಿದ್ದು ಅರ್ಥಪೂರ್ಣವೆನಿಸಿತು.. ಸಮಾಜದ ಇನ್ನಷ್ಟು ಹುಳುಕುಗಳನ್ನು ಅಣಕಿಸುವ ಕಾರ್ಯ ನಿಮ್ಮಿಂದ ಆಗಬೇಕು..

  ReplyDelete
 3. ಸಮಾಜದ ಹುಳುಕೊಂದನು ಎತ್ತಿ ಹಿಡಿದ ಗಟ್ಟಿ ಕವಿತೆ ವಿಶ್ವಣ್ಣ. ಕಲುಷಿತ ಮನವೊಂದು ತನ್ನ ಪಿಪಾಸುಬುದ್ಧಿಯಿಂದ ಹೊರಬರಲಾಗದೆ ತೊಳಲಾಡುವ ಪರಿ ಇದು. ಕಾಮಾತುರಾಣಾಂ ನ ಭಯಂ ನ ಲಜ್ಜಾ. ಎಲ್ಲಾ ರಕ್ತ ಸಂಬಂಧಗಳನು ಮರೆತು ಈ ರೀತಿ ತುಂಬು ಕುಪ್ಪಸಕೆ ಹಾತೊರೆವ ಕುರುಡು ಬುದ್ಧಿಗಳು ಎಷ್ಟಿವೆಯೋ ಈ ಜಗದೊಳಗೆ. ಈ ಹುಳುಕುಗಳ ಬಗೆಗಿನ ವಸ್ತು ವಿಷಯ ಆರಿಸಿಕೊಂಡು ಬರಯುವುದು ಸ್ವಲ್ಪ ಕಷ್ಟದ ಕೆಲಸ. ಮೆಚ್ಚಬೇಕು ನಿಮ್ಮ ಚತುರತೆಗೆ.

  ReplyDelete
 4. ಅತ್ಯಂತ ಸಂಕೀರ್ಣವಾದ ವಸ್ತುವೊಂದಕ್ಕೆ ಪದಗಳ ಹಾರ ಹೆಣೆಯುವ ಕಾರ್ಯ ಮಾಡಿದ್ದೀರಿ. ನಿಮಗೆ ನಿಮ್ಮದೇ ಆದ ಒಂದು ಶೈಲಿ ಹಾಗೂ ವಸ್ತುಗಳನ್ನು ಆಯ್ದುಕೊಳ್ಳುವ ಪ್ರತಿಭೆ ಇದೆ. ಈ ಕವನ ಓದಿದ ಮೇಲೆ ನಿಮ್ಮ ಬ್ಲಾಗ್ನಲ್ಲಿ ಇನ್ನಷ್ಟು ಕವನಗಳನ್ನು ಓದಿದೆ. ಅದರಿಂದ ಮೂಡಿದ ಅಭಿಪ್ರಾಯವಿದು. ಮೊದಲು ಇಂಥ ವಸ್ತುಗಳ ಬಗೆಗೆ ಬರೆಯಲು ಎಲ್ಲರಿಗೂ ಧೈರ್ಯವಾಗುವುದಿಲ್ಲ. ಎರಡನೆಯದು ಇಂಥ ವಸ್ತು ಜನರನ್ನು ಅತಿ ಸುಲಭವಾಗಿ ಸೆಳೆಯುತ್ತವೆ. ಮೂರನೆಯದಾಗಿ Shakuntala Iyer ಅವರು ಹೇಳಿರುವಂತೆ ಸ್ವಂತ ಅನುಭವಕ್ಕೆ ಬಾರದ ಪರಕಾಯ ಪ್ರವೇಶ ಮಾಡುವ ಅಗತ್ಯವಿರುವ ವಸ್ತುವಿಗೆ ಬಹಳಷ್ಟು ಓದು, ಅನೇಕ ರೀತಿಯ ದೃಷ್ಟಿಕೋನಗಳ ಬಗೆಗೆ ಗಾಢವಾಗಿ ಚಿಂತಿಸಿ, ಮನಕೆ ಬಂದ ಭಾವಗಳ ವಿಮರ್ಶೆ ಮಾಡಿ, ವಸ್ತುವಿನ ನಿರೂಪಣೆ ಗಟ್ಟಿಗೊಳ್ಳುವವರೆಗೆ ಕಾಯಬೇಕಾದ ಸಂಯಮ ಬೇಕಾಗುತ್ತದೆ. ನಾಲ್ಕನೆಯದಾಗಿ ಯಾವುದೇ ರೀತಿಯ ಕಟು ಟೀಕೆ ವಿಮರ್ಶೆಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳುವ ಮನಸ್ಸು ಬೇಕಾಗುತ್ತದೆ. ಇವೆಲ್ಲ ಗುಣಗಳನ್ನೂ ನಿಮ್ಮ ಕವನಗಳಲ್ಲಿ ಕಂಡೆ. ಬಹಳ ಯಶಸ್ವಿ ಪ್ರಯತ್ನವಿದು, ಆದರೆ ಸ್ವಲ್ಪ ಸಂಯಮದ ಕೊರತೆ ಕಾಣುತ್ತಿದೆ. ಈ ಕವನವನ್ನು ಇಷ್ಟಕ್ಕೆ ಬಿಡದೆ ನಿಮ್ಮ ಮನಸ್ಸಿಗೆ ಸಮಾಧಾನವಾಗುವವರೆಗೆ ತಿದ್ದಿ ತೀಡಿ. ಒಂದು ಪಕ್ವ ಮಹತ್ವದ ಕವನವಾಗುವ ಬಹಳಷ್ಟು ಯೋಗ್ಯತೆಗಳು ಈ ಕವನದಲ್ಲಿವೆ. ಇದು ನನ್ನ ಅನಿಸಿಕೆ, ತಮಗೆ ಎನೆನಿಸುತ್ತದೋ ತಿಳಿಸಿ

  ReplyDelete
 5. Incest ಅನ್ನುವಂತ ವಿಷಯದ ಮೇಲೆ ಬರೆದ , ವಸ್ತುವಿಗೆ ನ್ಯಾಯ ದೊರಕಿಸುವಂತ ಕವನ ವಿಶ್ವ.. ನಿ ಹೇಳಿದ ೨ ಕಾಂಪ್ಲೆಕ್ಸುಗಳ ಬಗ್ಗೆ ಮೊದಲ ಬಾರಿ ಕೇಳಿದ್ದು ನಾನು. ಆದರೆ ಪೇಪರಿನ ಸುದ್ದಿ ಹೊಸತಲ್ಲ.. ಅಧ:ಪತನಗೊಳ್ಳುತ್ತಿರುವ ಮೌಲ್ಯಗಳ ಹಿನ್ನೆಲೆಯಲ್ಲಿ ಒಳ್ಳೆಯ ಕವನ ..

  ReplyDelete