About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Sunday, March 4, 2012

ಇಳಿಸಂಜೆಯ ಕಣ್ಣೀರು

ದೂರದ ಮಯೂರನ ಮುದಕ್ಕೆ ಕಾದ
ಕಪ್ಪು ಸಂಜೆಯೊಂದು
ಹೆಪ್ಪುಗಟ್ಟಿದ ತಂಪ ಸಡಿಲಿಸಿ
ಕಣ್ಣೀರಾಯಿತು..:
ಆಗ ತಾನೇ ಜನಿಸಿದ ಆ ಮುಪ್ಪು ವಿಧವೆಯ ಕಂಡು..

ಜಾವದ ರಂಗೋಲಿ ಚುಕ್ಕಿ ತಪ್ಪಿದ ದಿನ,
ರಂಗಪ್ರವೇಶದ ಕಾಲ್ಗಳು ಫಕ್ಕನೆ ನಿಂತ ದಿನ,
ಕೊಟ್ಟ ಸಂಪಿಗೆಯನ್ನ ಶಕುಂತಲೆಯಾಗಿ ಮುಡಿದ ದಿನ,
ಏಳ್ಪದಿಗಳು ಸರಸರ ಮುಗಿಯಬಾರದೇ ಎನ್ನಿಸಿದ ದಿನ..
ಎಲ್ಲ ಕಡೆ ಇದ್ದ ಅವನಿವತ್ತು ಮಡಿದ ದಿನ..

ಕನ್ನೆತನದ ಕದಲಿಕೆಯಲ್ಲಿನ ಜೋಡಿಯುಸಿರುಗಳಲ್ಲೊಂದನ್ನು
ಕಾಲದ ಕೋಡಿ ಬಾಚಿ ತಿಂದಿದ್ದನ್ನು
ಕೆನ್ನೆಯಲ್ಲಿಳಿದ ಕಣ್ಣೀರು
ಮತ್ತೆ ಹೊತ್ತು ತರದು..
ಬೇಡುವ ಕಪಾಲ ಪರಶಿವನದ್ದಾದರೂ ಸರಿಯೇ..
ಭಿಕ್ಷೆಯಿಲ್ಲವೆಂದಮೇಲೆ ಭಿಕ್ಷೆಯಿಲ್ಲ.. ಅಷ್ಟೇ..

ತಲೆ ತಿರುಗಿದ ಆ ಗುಳಿಗೆ ಬೇಡದ ಘಳಿಗೆಯನ್ನ
ಹಿಂದೊಮ್ಮೆ ಕಚ್ಚಿ ಎಳೆದ ಗಡಸು ಕಿವಿಯಲ್ಲಿ
ಬೆನ್ನಿನಂಬಾರಿಯಾಸೆಗೆ ಬೇಗ ಹೇಳಿದ್ದು..
ಬಂಜೆಯಲ್ಲದವಳಾಗಿ ಬೆನ್ನಿನಿಂದ ಇಳಿದಿದ್ದು
ಸುಕ್ಕಾದ ಭಾವಗಳಲ್ಲಿ ಬೆರೆತುಹೋಗಿದೆ,ಮರೆತಿಲ್ಲ..!

ಹೆತ್ತಮ್ಮನದು ಮುತ್ತೈದೆ ಸಾವಂತೆ..
ಹೆತ್ತ ಮಗಳಿನ್ನೂ ಇಳಿಯದೆದೆಗಳ ಸಂಸಾರಗಿತ್ತಿ..
ತನ್ನ ಕೇಳುವರ್ಯಾರಿಲ್ಲಿ..??
ಕುಂಕುಮದ ಕೆಂಪಿನಾಸೆ ಮುದುಕಿಗಿರಬಾರದೇ?
ಭಾಗ್ಯದ ಬಳೆಗಾರ ಕೋಪಿಸಿಕೊಂಡನೇ?
ಮನೆಯೆದುರಿನ ಹೂಬಿಟ್ಟ ಗಿಡ ಅಣಕಿಸುತ್ತಿದೆ..

ಏನಾದರಾಗಲಿ..
ಒಂಟಿತನದ ಬಾಲ್ಯಸ್ನೇಹಿತೆ ತಾನಂತೂ ಅಲ್ಲ..
ಬಾರದವನು ಬೇರೆಯೆಂದಲ್ಲ..
ಗೂನು ಸ್ವಲ್ಪ ಕಾಡಬಹುದು..
ಹಲ್ಲಿಲ್ಲದ ಮೆಲ್ಲುವಿಕೆಗೆ ಆತ ಬಿಟ್ಟುಹೋದ
ನೆನಪ ತಾಂಬೂಲವಿದೆ..
ಗಿಡದ ಹೂವಿಗೆ ಬುದ್ಧಿ ಕಲಿಸಲು
ಮುಂದೆ ಅಳಿಯ ಮಾಡಿಸುವ ತನ್ನವನ ಭಾವಚಿತ್ರವಿದೆ..!

ಹಾಗೆ ಜಗುಲಿಯ ಈ ಮೂಕಜ್ಜಿಯಲ್ಲಿ
ಕನಸುಗಳು ಮತ್ತೆ ಆಕಳಿಸಿ ಕಣ್ಬಿಡುತ್ತಿವೆ..
ದೂರದಲ್ಲಿನ ಮಯೂರನ ಮುದವಿಲ್ಲದೆಯೂ
ಸಂಜೆಯ ಕಣ್ಣೀರಿನ ಮೌನ ಸಾಂತ್ವನಕ್ಕೆ
ಕೊನೆಗೂ ಫಲ ಸಿಕ್ಕಿದೆ..!!

1 comment:

  1. ಭಾವ ತೀವ್ರತೆ ಮತ್ತು ಅದನ್ನು ಕವನವಾಗಿಸಿದ ನಿಮ್ಮ ಶೈಲಿ ಮನಗೆದ್ದಿತು.

    ಕಣ್ಣಾಲಿಗಳು ತೇವವಾದಾಗಲೇ ಇಂತಹ ಕಾವ್ಯ ಸೃಷ್ಟಿಯೂ ಸಾಧ್ಯ.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete