About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Tuesday, March 13, 2012

ಅಯ್ಯೋ ಕಷ್ಟ..

ನನ್ನದೇ ಕಷ್ಟಗಳಿಗೆ ಕಾವಲಾಗುವ ಆಸೆ..!
ಈ ಕಷ್ಟಗಳ ಗಾಂಚಾಲಿ ಸಾಮಾನ್ಯದ್ದಲ್ಲ..
ಎದೆಯೊಡ್ಡಿದಷ್ಟೂ ತಡೆಯೊಡ್ಡುವ
ಬೇವಾರಸಿ ಜಾತಿಯವು,ಅವು.

ಕಾವಲಾಗಿ,ಕಣ್ಣಲ್ಲಿ ಕಣ್ಣಿಟ್ಟು ಸಾಕಿ,ಕಾಪಾಡಿ,
ಮೇವು ಹಾಕಿ ಕೊನೆಗೊಮ್ಮೆ ಹೊಂಚು ಹಾಕಿ
ಕೊಂದುಬಿಡಬೇಕು ಅವುಗಳನ್ನ..!

ಬೆನ್ನ ಚೂರಿಯೆಂದಾದರೂ ಅಂದುಕೊಳ್ಳಲಿ,
ಹತ್ಯೆ ಮುಖ್ಯ ನನಗೆ.
ಬೆನ್ನಟ್ಟಿ ಮಗ್ಗಲು ಮುರಿಯಬೇಕು,
"ಕಷ್ಟ"ದ ಕೂಗು ಗಂಟಲಲ್ಲೇ ಅಂಟಿಹೋಗಬೇಕು,
ಆದಷ್ಟೂ ಭೀಕರವಾಗಿರಬೇಕು ಆ ಸಾವುಗಳು.

ಮುಹೂರ್ತ ನೋಡಿ ಅವುಗಳ ಪಿಂಡವಿಡಬೇಕು.
ತಿನ್ನಲು ಕಾಗೆ ಬಂದರೆ ಅದನ್ನೂ
ಕೊಕ್ಕು ಮುರಿದು ಸಾಯಿಸಬೇಕು..!
"ಕಷ್ಟ ಪಿಂಡ"ವ ತಿಂದು ಕಾ..ಕಾ ಎನ್ನುವ ಬದಲು
ಕ..ಕ.. ಎನ್ನುವಂತಾಗಬಾರದು ಅದು..!, ಪಾಪ.

ಮುಂದೊಬ್ಬ ಬುದ್ಧ,
ಕಷ್ಟವಿಲ್ಲದವನ ಬಳಿಯಿಂದ ಕಾಫಿಪುಡಿ ತಾ..ಎಂದಾಗ
ಹತ್ತೂರಿನ ಜನ ನಮ್ಮನೆಮುಂದೆ ಸಾಲುಗಟ್ಟಬೇಕು..!
ಕಾಫಿಪುಡೀ..ಕಾಫಿಪುಡೀ.. ಎಂದು ಕೂಗಬೇಕು..!!

ಆದರೆ ಈ ಇಮ್ಮಡಿ ಬುದ್ಧನಿಗೆ ಬುದ್ಧಿಯಿಲ್ಲ.
ಕಷ್ಟವಿಲ್ಲದವನು ಶ್ರೀಮಂತನಾಗಿರಬೇಕೆಂದಿಲ್ಲ..
ಸಾವಿರ ಟನ್ನುಗಳ ಕಾಫಿಪುಡಿ ಸರಬರಾಜಿನ
"ಕಷ್ಟ"ಕ್ಕೆ ಹೆದರಿ ಕೊನೆಗೂ
ನನ್ನ ಕಷ್ಟಗಳಿಗೆ ಕಾವಲಾಗುವ ಆಸೆ ಬಿಟ್ಟೆ..!

(ಆಸೆಯೇ ಕಷ್ಟಕ್ಕೆ ಕಾರಣ..! - ಬುದ್ಧ-2)

1 comment:

  1. ಅದ್ಭುತವಾಗಿ ತೆರೆದುಬಿಟ್ಟಿದ್ದೀರಿ. ಬುದ್ಧನಿಗೆ ಬದ್ಧ ವೈರಿ ಆಸೆ. ಕಾಗೆಗೆ ಏಕೆ ಪಿಂಡಕ್ಕೆ ಉಪಮೆ ಮಾಡಿತೋ ಈ ಸಂಸ್ಕೃತಿ ಅಂತ ಆಲೋಚಿಸಿದ್ದೆ.ಅದರ " ಕ.. ಕ..." ಸ್ವರಕ್ಕೆ ಚೆನ್ನಾಗಿ ಸೂಕ್ಷ್ಮ ಸಂವೇದನೆಗಳನ್ನು ಹೊಂಚು ಹಾಕಿ ಕಟ್ಟಿ ಹಾಕಿದ್ದೀರಿ. ತುಂಬಾ ಚೆನ್ನಾಗಿದೆ ಕವಿತೆ ವಿಶ್ವಣ್ಣ. ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete