About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Thursday, October 25, 2012

ಗರ್ಭಾಂತಃಕರಣ

ಅಮ್ಮ..
ಮೊದಲ ಕೀಟಲೆಗೆ
ಅಟ್ಟಿಸಿ ಹೊಡೆದವಳು ನೀನು,
ನಂತರವೂ..!

ತಿಳುವಳಿಕೆಯ ಮೊದಲುಗಳಲ್ಲಿ
ಅಂಡಿನ ಬಾಸುಂಡೆಗಳಿಗತ್ತು
ನಿನ್ನ ಗಂಡನ ಕೇಳಿದ್ದೆ ನಾನು..
ನಾ ನಿಮಗೇ ಹುಟ್ಟಿದ್ದಾ?
ತಂದು ಸಾಕಿದ್ದಾ?
ಮುದ್ದು ಸುರಿಯುವ ಅತ್ತೆಯೇ ನನ್ನಮ್ಮನಾ?!

ಉತ್ತರ ದಕ್ಕಿದ್ದು
ನಿನ್ನ-ನನ್ನಲ್ಲೊಂದಷ್ಟು ಸಾಮ್ಯತೆಗಳಲ್ಲಿ.
ಪಾರ್ಲರಿಲ್ಲದ ಕಾಲ ನಿನ್ನದು
ಇಬ್ಬರ ಹುಬ್ಬೂ ಪೊದೆಪೊದೆ.
ಗಜಗಮನೆಯಲ್ಲ,ಗುಬ್ಬಿಯೂ ಅಲ್ಲ ನೀನು,
ನನ್ನಂತೆ.
ಸ್ನೇಹಿತನೆಂದ ನೆನಪು..
ಜಡೆಹಾಕಿದರೆ ಥೇಟ್ ನಿನ್ನಮ್ಮನೇ ನೀನು..!

ರೂಮಿನ ಮಂದತೆಯಲ್ಲಿ
ಪೋಲಿಪುಸ್ತಕದೊಂದಿಗೆ ಸಿಕ್ಕಿಬಿದ್ದಾಗ
ಒಂದಿಂಚೂ ಬೈಯ್ಯಲಿಲ್ಲ ನೀನು..!
"ಯಾರಿದನ್ನು ಕೊಟ್ಟವ?" ಮತ್ತು
ಹಿತ್ತಲ ಹರಿವಲ್ಲಿ
ಹರಿದು ಬಿಸಾಕಿದ್ದಷ್ಟೇ.

ಅಜ್ಜಿಯೊಟ್ಟಿಗಿನ ನಿನ್ನ ಜಗಳ
ಯಾವತ್ತಿಗಿದ್ದಿದ್ದೂ ಶೀತಲವೇ.
ಆದರೂ
ಮಾತೆ-ರತಿಯರ ಮಧ್ಯೆಯ
ಅಪ್ಪನ ಸಮಭಾವದ ಹೆಣಗಾಟ
ನಂಗೆ ಮಾತ್ರ ಗೊತ್ತಿತ್ತು,ಗೊತ್ತಾ..?

ಕಾಲದ ಸವಕಳಿ ಬಹುಬೇಗ ಸಂದಿತು.
ವೀರ್ಯ,ಗಾಂಭೀರ್ಯತೆಗಳರ್ಥ ತಿಳಿಯಿತು.
ಓದಿಗೆಂದು ಮನೆಯಿಂದ
ಹೊರಬಿದ್ದಿದ್ದೂ ಆಯಿತು.
ಆಗ,ಆಗಲೇ ಗೊತ್ತಾಗಿದ್ದು ನಿನ್ನತಿಮುಗ್ಧ ಪ್ರೀತಿ.

ಅಲ್ಲಿಂದಿಲ್ಲಿಗೂ ಅದು ಜಾರಿಯಲ್ಲಿದೆ.
ದಿನಕ್ಕಾರುಸಲದ ಫೋನು,
"ಹೊಟ್ಟೆಬಾಕ ನೀನು,
ಎರಡು ಚಪಾತಿ ಯಾವ ಮೂಲೆಗೋ?"
ಎನ್ನುವ ವಾತ್ಸಲ್ಯ,
"ಅರ್ಜೆಂಟಿಗಿಟ್ಟುಕ್ಕೋ,ಅಪ್ಪನಿಗೆ ತಿಳಿಸಬೇಡ"ವೆಂದು
ಕೊಡುವ ಸಾವಿರದ ನೋಟು..

ಅಮ್ಮನಮೇಲಿನ ಕಥೆ,ಕವನಗಳ
ತಿರುವುಗಳಲ್ಲಿ "ನನ್ನಮ್ಮನ್ಯಾಕೆ ಹೀಗಿಲ್ಲ?"
ಎಂದುಕೊಳ್ಳುತ್ತಿದ್ದವನಿಗೆ
ಸಾತ್ವಿಕ ಉತ್ತರ ನಿನ್ನಿಂದಲೇ ಸಿಗುತ್ತಿದೆ ನನಗೆ.
"ಹಾಗಿದ್ದೆ ನಾನು,ಈಗಲೂ,
ಕುರುಡುಕಣ್ಣು ನಿನ್ನದು".

ಇಷ್ಟಾಗುವಷ್ಟರಲ್ಲಿ
ನಿನ್ನ ಬೆನ್ನಲ್ಲೊಂದು ಛಳಕು.
ಯಾವ ಕ್ಷಣದಲ್ಲೂ ನೀನು ಕಾಲು
ಕಳೆದುಕೊಳ್ಳಬಹುದೆಂಬ
ಡಾಕ್ಟರಿನ ಉದ್ಗಾರ..
ಬೇವರ್ಸಿ ಬದುಕಿನ ಆಟ ಇಲ್ಯಾಕೆ ಶುರುವಾಯಿತಮ್ಮಾ?

ಹಾಗಾಗಕೂಡದು.

ಕೈಗೊಂದು ಕೋಲನ್ನು ನಾನೇ ಕೊಡುತ್ತೇನೆ.
ತಪ್ಪಿದ್ದರೂ,ಇಲ್ಲದಿದ್ದರೂ
ಪ್ರತಿದಿನ ಅಟ್ಟಿಸಿ,ಓಡಾಡಿಸಿ ಹೊಡಿ ನನ್ನ :
ದೈವಕ್ಕೂ ಬಿಟ್ಟುಕೊಡೆನು ನಾ ನಿನ್ನ.
ಮುಕ್ಕೋಟಿದೇವರು ಕಾಲಡ್ಡ ಕೊಟ್ಟರೂ
ನಿನ್ನ ಕಾಲ್ಗಳ ಓಟ
ನನ್ನ ಮುಪ್ಪಿನತನಕ ನಿಲ್ಲದಿರಲಿ.
ನನ್ನೆಡೆಗಿನ ನಿನ್ನ
ಜ್ವಲಂತ ಪ್ರೀತಿ ಜ್ವಲಿಸುತ್ತಲೇ ಇರಲಿ.

12 comments:

  1. ನಾನು ಕವಿತೆಗಳನ್ನು ಓದುವುದು ಬಹಳ ಕಡಿಮೆ...ಶುರು ಮಾಡಿದ ನಂತರ ಕೊನೆ ಆದಾಗಲೇ ತಿಳಿದಿದ್ದು ಇದು ಅಂತ್ಯ ಎಂದು... ಇದರಲ್ಲಿ ತಾಯಿ ಪ್ರೀತಿಯನ್ನು ಎಷ್ಟು ಅರ್ಥ ಗರ್ಭಿತವಾಗಿ ಅಡಗಿಸಿಟ್ಟಿದ್ದಿರಿ ... ಇಷ್ಟವಾಯಿತು... ನಿಮ್ಮ ಕೆಲವು ಹಳೆಯ ಪೋಸ್ಟ್ ಗಳನ್ನೂ ಕೂಡ ಓದಿದೆ..ಚೆನ್ನಾಗಿವೆ...

    ReplyDelete
    Replies
    1. ನಿಮ್ಮ ಸಮಯಕ್ಕೆ,ಪ್ರತಿಕ್ರಿಯೆಗೆ ಧನ್ಯವಾದಗಳು ಗಿರೀಶ್ ಜೀ..

      Delete
  2. ಅಮ್ಮನ ಬದುಕಿಗೆ ತುಂಬಾ ಹತ್ತಿರವಾದ ಕವಿತೆ.
    ನಗು, ವಿಚಾರ, ಒಂದು ಹನಿ ಎಲ್ಲವನ್ನ ಒಟ್ಟಿಗೆ ಕೊಟ್ಟ ಕವಿತೆ
    ಬರೆಯುತ್ತಿರಿ
    ಸ್ವರ್ಣಾ

    ReplyDelete
    Replies
    1. ವಂದನೆಗಳು ಸ್ವರ್ಣಾರವರೇ..

      Delete
  3. ಚೆನ್ನಾಗಿದ್ದು ವಿಶು :-)
    ಅದಕ್ಕಿಂತ ಹೆಚ್ಚು ವಿವರಣೆ ಕೊಡೋಕೆ ನಾನು ಓದ್ಕಂಡಿದ್ದು ಕಮ್ಮಿ ಆಗ್ತು ..

    ReplyDelete
    Replies
    1. Thanks Prashasti.. ನಿಂಗಿಂತ ನಾ ಓದ್ಕಂಡಿದ್ದು ಕಮ್ಮಿ ಅದಕ್ಕೇ ಇಷ್ಟೇ ಬರ್ಯೋಕಾಗಿದ್ದು ನನ್ ಕೈಲಿ.. :)

      Delete
  4. ಎತ್ತಿ ಆಡಿಸಿದ ಅಮ್ಮ, ಅಸ್ವಸ್ಥವಾದಾಗ ನೊಂದ ಮಗನ ಪ್ರಲಾಪವನ್ನು ಭಗವಂತ ಆಲಿಸುವನೇ? ಆ ತಾಯಿ ತಣ್ಣಗಿರಲಿ.

    ReplyDelete
    Replies
    1. ನಿಮ್ಮ ಹಾರೈಕೆ ನಿಜವಾಗಲಿ ಸರ್..

      Delete
  5. ವಿಶ್ವ ಕವನ ಚೆನ್ನಾಗಿದೆ. ಕವನದ ಅಂತ್ಯವೂ ಸೊಗಸಾಗಿದೆ. ತೀವ್ರತೆಯಿದೆ.

    ReplyDelete
  6. ಭಾಷೆಯ ಮೇಲಿನ ಹಿಡಿತಕ್ಕೊ೦ದು ಸಲಾಮ್. ಭಾವ ತೀವ್ರತೆಯ ಕವನ .

    ReplyDelete
  7. ಪ್ರೀತಿಯ ವಿಶೂ. ನಿಮ್ಮ ಕವಿತೆಗಳು ತುಂಬಾ ಸೊಗಸಾಗಿದೆ.
    ನಿಮ್ಮ ಬಗ್ಗೆ ತಿಳಿದುಕೊಳ್ಳುವ ಹಂಬಲ ಜಾಸ್ತಿಯಾಗಿದೆ. ದಯವಿಟ್ಟು ತಿಳಿಸಿಕೊಡುವಿರಾ.
    ನಿಮ್ಮತ್ರ ಒಂದ್ ಮಾತ್ ಕೇಳ್ತೀನಿ ತಪ್ಪು ತಿಳ್ಕೊಬೇಡಿ, ನಿಮಗೆ ಅಮ್ಮ ಇದಾರ. ಇಲ್ಲಾ ನೀವು ಅವರಿಂದ ಕೆಲಸದ ನಿಮ್ಮಿತ್ತ ದೂರ ಇದ್ದೀರಾ.
    ಯಾಕಂದ್ರೆ ತಾಯಿ ಇಂದ ದೂರ ಇರೋರ್ಗೆ ಮಾತ್ರ ತಾಯಿ ಪ್ರೀತಿ ಅರ್ಥ ಆಗೋದು. ನೀವು ಬರ್ದಿರೋ ಸಾಲುಗಳು ಅನುಭವದ್ದು ಎಂಬುದು ನನ್ನ ಬಾವನೆ ಅಷ್ಟೇ....
    ಕೇಳಿದ್ದು ತಪ್ಪಿದ್ರೆ ಕ್ಷಮಿಸಿ,
    ಕಾರಣ ನಾನು ನಮ್ ತಾಯಿನ ಕಳ್ಕೊಂಡಿದೀನಿ
    ಆಗೇ ಅವರ ಪ್ರೀತಿನ ಕಳ್ಕೊಂಡಿದೀನಿ ಅದಿಕ್ಕೆ ಕೇಳ್ದೆ.

    ReplyDelete