About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Saturday, October 13, 2012

ಚಾವಡಿಯ ಬೆಳಕಲ್ಲಿ..

ಚಾವಡಿಯ ಬೆಳಕಲ್ಲಿ
ಉಸಿರು ತೊಯ್ದಾಕ್ಷಣಕೆ
ಬಿಸುಟ ಆ ಚಾದರ,
ಕಳಕೊಂಡ ಚಾವಿಗಳೇ ಕುರುಹಾಗಲಿ..

ಚಿಗುರು ಮೀಸೆಯ ಭಯಕೆ
ಆತುರದಿ ಇಳಿದಿಳಿದ
ಕುಂಕುಮದ ಕೆಂಪುಹನಿ
ತುಟಿಪಕ್ಕದ ಮಚ್ಚೆಯ ಮರೆಮಾಚಲಿ..

ಸೀಳೊಡೆದೆರಡೆದೆ ಮೇಲೆ
ಮಗುವಾಗಿ ನಿದ್ರಿಸುವ
ನಿಷ್ಕಾಮ ಭಾವಗಳು
ಒಪ್ಪೊತ್ತು ಮುಗಿದಾಗ ಮರೆಯದೇ ಬರಲಿ..!

ಪದೆಪದೆಯ ಸರಿತಕ್ಕೆ
ಮುತ್ತುಗಳ ಕೆನೆತಕ್ಕೆ
ಒಂಚೂರು ನಕ್ಕು,ಒಂಚೂರು ನಾಚಿ
ನುಣುನಡುವನಪ್ಪಿದಾ ಕಟಿಬಂಧ ನೆಲಸೇರಲಿ..

ಅಸ್ತ್ರಗಳ ಅಭ್ಯಾಸ
ಕೊನೆಘಳಿಗೆಯಲ್ಲಲ್ಲ.
ಗಾದೆ ನಂಬುವ ಮುನ್ನ
ಮೇಲ್ಬರೆದ ಚರಣಗಳ ನೀ ಓದಲಿ..!

ಅಂತ್ಯದಾಡಂಬರಕೆ
ಚಂದ್ರರಾ ದಿಬ್ಬಣಕೆ
ಬಿಂಬಗಳ ಜೊತೆ ಯಾಕೆ
ಬಣ್ಣವಿಲ್ಲದ ಕನ್ನಡಿ ಕಣ್ಮುಚ್ಚಲಿ..
ತಪ್ಪಿ ಕಣ್ತೆರೆದರೂ ಕ್ಷಮೆ ಕೇಳಲಿ..!

ಓ ಬಿಸುಟ ಚಾದರವೆ
ನಿಷ್ಕಾಮ ಭಾವಗಳೆ
ನಸುಕು ಹರಿಯಿತು ಕೇಳಿ
'ಕೇಳಿ' ಮುಗಿಯಿತು ಏಳಿ
ಮೈಗಳಿಗೆ ಮುಸುಕಾಗಿ ಮೇಲೇರಿ ಬನ್ನಿ,
ಕನಸನೂ ತನ್ನಿ..!

2 comments:

  1. ಆದರೆ ಅನುಭವ ಬರೀ ದೇಹಕ್ಕಲ್ಲವಲ್ಲ.. ಅನುಭವಿಸುವುದು ಎಂದರೆ ಮನಸ್ಸಿನ ಒಂದು ಕ್ರಿಯೆಯೂ ಹೌದು.
    ಕವಿಯ ಭಾವ/ ಬರವಣಿಗೆಯ ವಿಷಯ ಮನಸ್ಸಿನಲ್ಲಿ ಮಥನವಾಗಿ ಹುಟ್ಟಿದರೂ ಅದನ್ನ ಅನುಭವಿಸಿಯೇ ಬರೆದ ಬರವಣಿಗೆ ಎನ್ನಲೇ ಬೇಕಲ್ಲ. ಇಲ್ಲವಾದಲ್ಲಿ ಗಂಡಸು ಹೆರಿಗೆ ಮಾಡುವುದು ಸಾಧ್ಯವೇ ಇಲ್ಲ.

    ಸ್ವಲ್ಪ ಅವಸರವಾಯಿತೆಂದಿನಿಸಿತು ಮೊದಲ ಓದಿಗೆ. ಚೆನ್ನಾಗಿದೆ. ಸ್ವಲ್ಪ ವಿಷಯಾಂತರವನ್ನೂ ಮಾಡಿ ನೋಡುವಂತಾಗಲಿ ಎಂದು ಕೋರಿಕೆ.

    ReplyDelete
  2. ನಿಮ್ಮ ಕವಿತೆ ಆಸ್ವಾದನೆಗೆ ಸಿಕ್ಕಿ ತುಂಬಾ ದಿನಗಳಾಗಿದ್ದವು ವಿಶ್ವಣ್ಣ. ಚೆಂದ ಬರೆದಿದ್ದೀರಿ. ಭಾಷೆ ಮತ್ತು ಕವಿತೆಯ ವಸ್ತು ಕವಿಮನದ ಪ್ರಬುದ್ದತೆಯನ್ನು ಬಿಚ್ಚಿಡುತ್ತದೆ. ದೇಹದ ಹಸಿವಿಗೆ ದಣಿದು ಬೆವರು ಹರಿಸಿದ್ದನ್ನು ಅನುಭವದ ಭಾವದಲ್ಲದ್ದಿ ಓದುಗರ ಮನಗಳಿಗೆ ನುಗ್ಗಿಸಿದ್ದೀರಿ. ಮತ್ತೆ ಶೈಲಿಗೆ ಸಂಪೂರ್ಣ ಅಂಕಗಳು. ಓದಿಸುವ ತಾಕತ್ತಿದೆ ಕವಿತೆಗೆ.

    ReplyDelete