About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Monday, May 7, 2018

ಜೀವಂತಿಕೆ..

ಒಪ್ಪವಾಗಿ ಜೋಡಿಸಿಟ್ಟ ಪಾತ್ರೆಗಳು.‌.
ಧೂಳಿಡಿಯದಂತೆ ಒರೆಸಿಕೊಂಡ ಅಜ್ಜನ ಫೋಟೋ..
ಮನೆಮುಂದಿನ ಒಣಗದ ತುಳಸಿ..
ಕೆಳಗಡೆ ಅಡಿಕೆಚೀಲ ಎಳೆದಾಡಿದ
ಲೈನುಗಳು..
ಅಬ್ಬ..!!
ಒಂದು ಜೀವಂತಿಕೆಯ ಅಸ್ತಿತ್ವಕ್ಕೆ
ಎಷ್ಟು ಸಾಕ್ಷಿಗಳು..!

ಒಮ್ಮೊಮ್ಮೆ ಬೆಂಗಳೂರಿನ ರೂಮು
ಸ್ಮಶಾನವಾ ಅನಿಸಿದ್ದುಂಟು..
ಅಲ್ಲಿ ಎಲ್ಲವೂ ಸ್ತಬ್ಧ..
ಯಾವುದೋ ಆಕಾಶ ಕಿತ್ತುಕೊಂಡು
ತಲೆಮೇಲೆಬಿದ್ದು
ವಸ್ತುಗಳಿಗೆಲ್ಲ ನಿಶ್ಶಕ್ತಿಯಾದಂತೆ ,
ಅವೆಲ್ಲ ಮೈಮೇಲೆ ಧೂಳಿನ ಗೋರಿ ಹಾಸಿಕೊಂಡು
ಆಕಳಿಸಿ ಕವುಚಿಕೊಂಡಂತೆ.

ಆ ಅರಳಿಮರ ಹೋದಸಲ ಕಂಡಾಗ
ಬೆನ್ನುಮುರಿದುಹೋದಂತೆ
ಬಡಕಲಾಗಿ ನಿಂತಿತ್ತು.
ಈಗ ಮೈತುಂಬ ಎಲೆತುಂಬಿಕೊಂಡ
ಎಳೆತರುಣಿ..!
ಮೋಡಗಳೆಲ್ಲ ಸಭೆಸೇರಿ , ಪ್ರತಿಜ್ಞೆ ಮಾಡಿ,
ಒಂದೊಂದೇ ಎಲೆಬರೆದು ಮಳೆಹನಿಯ ಅಂಟುಹಚ್ಚಿ
ರೆಂಬೆಕೊಂಬೆಗೆ ಮೆತ್ತಿದ್ದಾವಾ ?!
ಅರಳಿಮರ ಮತ್ತೆ ಉಸಿರಾಡುತ್ತಿದೆ..!
ಅಕ್ಕಪಕ್ಕದ ಮನೆಯವರೂ.
.
ಜೀವಂತಿಕೆಯೊಂದು ನಿರಂತರ ದಾನ.

ಆ ಅಜ್ಜಿ..?
ಮಕ್ಕಮೊಮ್ಮಕ್ಕಳು ಗತಿಯಿಲ್ಲದ ಅನಾಥ ಸಂಜೆಗಳ ಗೆಳತಿಯವಳು‌.
ನಡೆಯುತ್ತಿದ್ದರೆ ಫ್ಯಾಂಟಮ್ ಕ್ಯಾಮರಾ ಫೂಟೇಜು ನೋಡುವ ಫೀಲು..
ಅತಿನಿಧಾನದ ಬದುಕು ಅವಳದು..
ತನ್ನ ಅಡಿಗೆ ತಾನೇ ಮಾಡಿಕೊಂಡು
ಉಂಡು, ಪ್ಲೇಟು ತೊಳೆದು ಹೊರಡುತ್ತಾಳೆ ಮತ್ತೆ ನೀರುತರಲು.
ನಾಚಿಕೆಯಾಗಬೇಕು.. ;
ಬ್ಯಾಚುಲರ್ ಬದುಕಿನ ಸೂಪರ್ ಫಾಸ್ಟ್ ಸೋಂಬೇರಿತನಗಳಿಗೆ.
.
ಜೀವಂತಿಕೆ ಎನ್ನುವುದೊಂದು ಶಿಸ್ತು..

ಹುಡುಗಿ ಹಾರಿಹೋಗಿ ತಿಂಗಳಾಗಿದೆ.
ಇಡೀ ಬೋನಿಗೆ ತಾನೊಬ್ಬನೇ.
ಆಗಾಗ ಕೂಗುತ್ತಾನೆ.
ಹೊರಬಿಟ್ಟುಬಿಡೋಣವೆಂದರೆ
ಪಕ್ಕದ ಆಕಾಶದಲ್ಲೇ
ಹದ್ದಿನ ರೆಕ್ಕೆ ಸದ್ದು....
ಕೊತ್ತಂಬರಿ ಸೊಪ್ಪೋ, ನವಣೆಯೋ
ಒಂದಿಷ್ಟು ಸುರಿಯುತ್ತೇನೆ.
ತಿಂದು ಮೆತ್ತಗಾಗುತ್ತಾನೆ..
ಮತ್ತೆ ಕೂಗು,ಕಿರುಚುಗಳು.
ಬೋನಿನ ಹಕ್ಕಿಯ ಏಕತಾನತೆಯ ಜೀವಂತಿಕೆ
ಅದ್ಯಾವ ರೀತಿಯ ನೆಸೆಸಿಟಿ ಸೃಷ್ಟಿಕರ್ತನಿಗೆ ?
.
ಜೀವಂತಿಕೆಯೂ ಪ್ರಶ್ನೆಯಾಗಬಲ್ಲ ಅಂಶವಾ ?

.....

ಜಗತ್ತು ನಿಧಾನವಾಗಿ ಪೊರೆ ಕಳಚುತ್ತಿದೆ..
ಅಥವಾ ಕಣ್ಣು.

No comments:

Post a Comment