About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Wednesday, February 29, 2012

ಇದು ಕಣೇ ವಿಷ್ಯ..


ತೊಡೆಗೆ ನಾಯಿಕಚ್ಚಿದ ಗುರುತೂ ಕಾಣುವಂಥ ಮಿಣಿಲಂಗದ ಮಹಿಳಾ ಅಮ್ಮಣ್ಣಿಗಳ ಮಧ್ಯೆ ಚೌರಾಸಿಯಾ ಭಾನ್ಸುರಿ ನಾದದ ಗಾಂಭೀರ್ಯತೆಯಂತೆ ಭಾಗ್ಯಲಕ್ಷ್ಮಿಯ ಹಾಗೆ ಸೆರಗನ್ನ ಸರಿಯಾಗಿ ಹೊದ್ದ ನಿನ್ನ ನೋಡಿ, ಮರಿಕುನ್ನಿ ಥರ ನಿನ್ನ ಹಿಂದೆ ಓಡಿ, ನೀ ಬೇಡವೆಂದರೂ ನಡಿಗೆ ಸೈಕಲ್ಲಾದಿಯಾಗಿ ಬಸ್ಸಿನಲ್ಲೂ ಬೆಂಬಿಡದೇ ಸುತ್ತುವ, ಬೈಸಿಕೊಳ್ಳುವ ಮೊಂಡು ಹಠಕ್ಕೆ ಬಿದ್ದು, ನೀ ಬೇಜಾರಾದರೂ ಸರಿಯೇ ಎಂದು ಶಪಥಗೈದ ಬಬ್ರುವಾಹನನಂತೆ, ಛಲ ಬಿಡದ ವಿಕ್ರಮಾದಿತ್ಯನಂತೆ ಹಠಬಿಡದೇ ಪ್ರತಿದಿನದ ಮುಂಜಾವು,ಮಧ್ಯಾಹ್ನ,ಮುಸ್ಸಂಜೆಗಳ ಸಮಯಗಳಿಗೆ ಸರಿಯಾಗಿ ನಿನ್ಮುಂದೆ ವಿಧೇಯ ವಿದ್ಯಾರ್ಥಿಯಂತೆ ಹಾಜರಾಗುತ್ತಿದ್ದುದು, ಕೊನೆಗೊಂದು ಸುಂದರ ಶನಿವಾರ ಶಕ್ತಿ ಮೀರಿ ಬಾಯಿಗೆ ಬಂದಂತೆ,ಬಂದಿದ್ದೆಲ್ಲಾ ಬೈದಿದ್ದು ಬೇಜಾರಾಗಿ , ಮನಸಿಗೆ ಖೇದವೆನಿಸಿದರೂ ಕೆಳಗಿದ್ದ ಪ್ಯಾರಗಾನಿಗೂ ನಿನ್ನ ಕೈ ಹೋಗಿದ್ದು, ಹೋಗಿದ್ದು ನೋಡಿ ನಾ ಓಡದೇ ಜನಿವಾರ ಹಿಡಿದು ನಿಂತಲ್ಲೇ ಅವುಡುಗಚ್ಚಿ ನಿಂತು ನಂಗೆ ನಿಶ್ಶಕ್ತಿಯಾಗಿದ್ದು ಅತಿಶಯೋಕ್ತಿಯಲ್ಲದ ಆಶ್ಚರ್ಯಕರ ಸಂಗತಿಯಾದರೂ ಈ ನಡುವೆ,ಒಮ್ಮೆ,ಒಂದೇ ಒಂದು ಸಲ ನನ್ನ ಉವಾಚಕ್ಕೆ ಅವಕಾಶವಿತ್ತಿದ್ದರೆ ನಿನ್ನಲ್ಲಿ ನಾ ಕೇಳಬಯಸಿದ ಹೇಳಬಯಸಿದ ಪ್ರಶ್ನೋತ್ತರದ ಅವಧಿ ನಿನ್ನ ಕಾಲೇಜಿಗೆ ಲೇಟಾಗುವಷ್ಟೇನಿರಲಿಲ್ಲವಾದ್ದರಿಂದ,ಈಗಲೂ ಸಮಯ ಮೀರಿಲ್ಲವಾದ್ದರಿಂದ, ಅನಿಸಿದ್ದನ್ನು ನೇರವಾಗಿ ಹೇಳುವ ನೇರವಂತಿಕೆಯ ಹುಡುಗ ನಾನಾದ್ದರಿಂದ, ಅಂಥ ಮಡಿವಂತಿಕೆಯ ಹುಡುಗಿಯೂ ನೀನಲ್ಲವೆಂದು ನಂಗೆ ಈಗೀಗ ಗೊತ್ತಾದ್ದರಿಂದ ಕೇಳಿಹೇಳೇಬಿಡುತ್ತೇನೆ ಕೇಳು.. "ಥತ್ತೇರಿಕೆ.. ನಿನ್ ಹತ್ರ ದೊಡ್ ಪಿನ್ ಚಾರ್ಜರ್ ಇದ್ಯಾ..? ನಂದು ಹಳೇ ನೋಕಿಯಾ ಸೆಟ್ಟು.. ಎರಡು ಪಿನ್ ಹಾಕಿದ ಸೆರಗು ಮತ್ತು ಚೂರ್ರಲ್ಲಿ ಹೊಡೆಸಿಕೊಳ್ಳುತ್ತಿದ್ದ ಪ್ಯಾರಗಾನು ನೋಡಿ ನಿಂದೂ ಹಳೇ ಸೆಟ್ಟೇ ಅನ್ಕಂಡೆ..!!".

ಚಿತ್ರಗೀತೆಯ ಶೈಲಿಯಲ್ಲೊಂದು ಪ್ರಯತ್ನ..

ಕಿರುಬೆರಳು ಸೋಕಿದ ಇಬ್ಬನಿಯೇ..
ಸೋರಿಹೋಗದಿರು ನೀನೆಂದೂ..
ಮುಂಗುರುಳ ಅಂಚಿನ ಮಳೆಹನಿಯೇ..
ನಿನಗಿಂತ ಸುಂದರ ಅವಳೆಂದೂ..
   ಇಬ್ಬನಿಯ ಮೌನದಲ್ಲೇ..
   ಮಳೆಹನಿಯ ತಂಪಿನಲ್ಲೇ..
   ಹಿತವಾಗಿ.. ಮಲಗು ನೀನು..
   ಹೃದಯದ ಪರಿಧಿಯೊಳಗೆ..
   ಹೃದಯದ ಪರಿಧಿಯೊಳಗೆ..   ||ಕಿರುಬೆರಳು..||

ಮನಸಿನ ಮಂಚದಿ ಒಮ್ಮೆ..
ಮಂಜಿನ ಹಾಳೆಯ ಮೇಲೆ..
ಒಲವಲೀ ನಿನ್ನನು ಗೀಚಿ..
ಭ್ರಮಿಸಿದೆ ನನ್ನ ಭ್ರಮರವೆಂದು..
ಮೂಡಿದಾ ಹೂವು ನೀನೆಂದು..
  ಪಿಸುಮಾತಿನ ನನ್ನ ಭಾಷಣ..
  ನೀನಲ್ಲಿನಾ ವಿಶೇಷಣ..
  ಹೊಸದಾಗಿ.. ಜನಿಸು ನೀನು..
  ಕವನದ ಗರ್ಭದೊಳಗೆ..
  ಕವನದ ಗರ್ಭದೊಳಗೆ..  ||ಕಿರುಬೆರಳು||

Thursday, February 23, 2012

ಸೆಣಬುಗಂಟಿನ ಮೆಲುಕುಗಳು

ಜಾರಿಹೋದ ವಯಸ್ಸು ಮತ್ತೆ ನೆನಪಾಗಿದೆ..
ಮೆದುಳಿನ ಸೆಣಬುಗಂಟಿನ ಗೋಣೀಚೀಲದಲ್ಲಿ
ಶುರುವಾದವು ಯೌವನದ ಮೆಲುಕುಗಳು..
ನಾ ದೊಡ್ಡವನಾದ ದಿನದೊಂದಿಗೆ..!

ನನ್ನ ದ್ವಂದ್ವಾರ್ಥದ ದಿನಗಳು
ಬಹುಷಃ ಹಲವರಿಗಿಂತ ಭಿನ್ನವೇನೋ..
ಕಾರಣ..
ರಕ್ಷಾಬಂಧನದ ದಿನ ರಜಾ ಹಾಕಿದ್ದೆ..
ಅಣ್ಣನಾಗುವ ಭಯಕ್ಕಲ್ಲ..
ಹುಡುಗಿಯರ ಕೈ ತಾಗುವ ಹೆದರಿಕೆಗೆ..!

ಕಳೆದ ವರ್ಷ ಅಸಹ್ಯವೆನಿಸಿದ್ದ
ತೇಪೆ ರಿಬ್ಬನ್ ಹುಡುಗಿ ಮಾಲಾ..
ಅವತ್ತಿನ ನನ್ನ ಮಟ್ಟಿಗೆ ಶಿಲಾಶ್ರೀಮತಿಯಾಗಿದ್ದು
ಈಗ ನೆನಪಾದ ಅಸಹ್ಯಗಳಲ್ಲೊಂದು..!
ಆಸೆಯೇ ಎದ್ದು ಬುದ್ಧನ ಮೇಯ್ದ ಕ್ಷಣ ಅದು..!

ಸ್ಪರ್ಶದ ಬಿಸಿ ಸುಟ್ಟಿದ್ದು..
ಪೆನ್ನು ಕೊಡುವಾಗ ರಾಧಿಕಾ ಕೈ ಮುಟ್ಟಿದ್ದು..
ಎರಡಕ್ಕೂ ಒಂದೇ ಪ್ರಶ್ನೆಯಿತ್ತು ನನ್ನಲ್ಲಿ.
"ಯಪ್ಪಾ.. ಏನಿದು ಹಿಂಗೆ..?!"
ಪುಳಕಕ್ಕೆ ಪರಿಧಿಯಿಲ್ಲವಂತೆ..!

ಬರುಬರುತ್ತಾ ಎದೆ ನೋಡುತ್ತಿದ್ದೆ..! ತಾಳಿ ಹುಡುಕಲು..!!
ಪಾದ ನೋಡುತ್ತಿದ್ದೆ.. ಕಾಲುಂಗುರದ ಹುಡುಕಾಟದಲ್ಲಿ.
ಹುಡುಕಿದ್ದು ಕಂಡರೆ ನೆನಪಾಗುತ್ತಿದ್ದವಳು ಅಮ್ಮ.
ಇಲ್ಲದಿದ್ದರೆ..
ಒಂದು ನಿಟ್ಟುಸಿರಿನೊಂದಿಗೆ ಮುಂದಿನ ಕ್ರಮ..!

ಹಾಗೊಂದು ಹುಡುಕಾಟದಲ್ಲಿ ಸಿಕ್ಕವಳೀ ಗೌರಿ..
ಆಮೇಲೆ..
ಮದಗಜಕ್ಕೆ ಕಿರುಸರಪಳಿ..
ಮೊಂಡುಹೋರಿಗೆ ಮೂಗುದಾರ..
ಕೊಬ್ಬಿದ ಕುದುರೆಗೆ ಕಣ್ಣುಪಟ್ಟಿ..
ಹಾಗೂ..
ಸ್ನೇಹಿತರ ಮಧ್ಯೆ ಅಂಕಲ್ ಪಟ್ಟ..!

ಈಗ ಮನಸು ಕೈಲಾಸದ ರಾತ್ರಿಗಳಷ್ಟು ಮೌನಿ..
ಪಕ್ಕದ ಪಾರ್ವತಿಗೆ ಗಂಗೆಯ ಭಯವಿಲ್ಲ..
ಮನದ ಮಾನಸಸರೋವರ
ತನ್ನೊಡಲಲ್ಲಿವಳನ್ನಡಗಿಸಿಕೊಂಡು
ಹೆಪ್ಪುಗಟ್ಟಿಬಿಟ್ಟಿದೆ.
ಮತ್ತು..
ಸೆಣಬುಗಂಟಿನ ಮೆಲುಕುಗಳು
ಬಾಕಿ ಇರುವಂತೆಯೇ ಮುಗಿದಿವೆ....

Monday, February 13, 2012

ಮಾ

ಯಾತ್ರೆಯ ಮೋಹದೊಳಗೆ
ಕಂಡುಬಿಟ್ಟ ಊರುಗಳು ಅದೆಷ್ಟೋ..
ಸಾವಿರ ಬಣ್ಣಗಳು,
ನೂರಾರು ವೇಷಗಳ ಮಂದಿ
ಒಂದಾದ ಜುಗಲ್ ಬಂದಿ..
ಕೋಟಿ ಕೋಟಿ ಕಂಠ ಕಲ ಕಲ ನಿನಾದ ಕರಾಲೇ..

ಒಂದೆಡೆ ಹಸಿರು,ಇನ್ನೊಂದೆಡೆ
ಬಿಸಿಲ ಉಸಿರ ಬಸಿರು..
ಟೆರೇಸು,ಹೆಂಚು,ಗರಿಮನೆಗಳು
ಎಲ್ಲವೂ ಕೊಡುವುದು ಒಂದೇ ನೆರಳು..
ಸುಜಲಾಂ ಸುಫಲಾಂ ಮಲಯಜಶೀತಲಾಂ..

ಬೇರೆಲ್ಲಾ ಮಣ್ಣಿನ ಕಡು ಹಳದಿ ಸೂರ್ಯ
ದೈವ ದಿನಕರನಾಗಿದ್ದಾನೆ ಇಲ್ಲಿ.
ಪಶ್ಚಿಮದವರು ಕಂಡಕಡೆ ಕೊಲ್ಲುವ
ಬಲಿ 'ಪಶು'.. ಕಾಮಧೇನುವಾಗಿದ್ದು ಇಲ್ಲೇ..
ಹೃದಯೇ  ತುಮಿ ಮಾ ಭಕ್ತಿ..

ಚಾಚಿದ ಕಾಲ್ಗಳ ಮೇಲೆ
ಮಕಾಡೆ ಕಂದಮ್ಮಗಳ ದುಂಡು ಸ್ನಾನ..
ಬಾಚುವ ಕೈಗಳ ತುಂಬ
ಗೊಂಚಲು ಕೂದಲ ಎಣ್ಣೆಗಂಪು..
ಅವಳು ಸೀರೆಯುಟ್ಟ ಭಾರತ ಮಾತೆ..
ಸುಹಾಸಿನೀಂ.. ಸುಮಧುರಭಾಷಿಣೀಂ..

ಹಾಗೊಮ್ಮೆ ನೋಡಿದರೆ ಮುಗಿಯದ ನನ್ನ ನಾಡು..
ರಾತ್ರಿಯಾದಂತೆ ಹೆದರಿ
ಮನೆಗೋಡಿಬಂದಾಗ ಬರಸೆಳೆದು
ಮುತ್ತಿಕ್ಕುವ ತಾಯಿಯಂಥ ಗೂಡು..

ಭಾರತ..

ನನ್ನ ದೇಶ,ನನ್ನವಳು,ನನ್ನವನು.. ನನ್ನದು.
ಅಬಲಾ ಕೇನ ಮಾ ಏತ್ ಬಲೇ..

Sunday, February 5, 2012

ಮತ್ತಷ್ಟು ಹಾಯ್ಕುಗಳು..

* ಬಿಟ್ಟು ಹೋದ ಅವಳ ನೆನಪನ್ನ ತರದೇ
  ಬರೀ ಚಪ್ಪಲಿ ನೆನೆಸುವ ಮಳೆ..
  ಮನಸಿಗೆ ತುಂಬ ಹಿತ..!

* ಕವನ ಬರೆಯಲು ಬರದ ಕೈಗಳಿಗೆ
  ಇಂಕು ಖಾಲಿಯಾದ ಪೆನ್ನೇ ಬೆಸ್ಟ್ ಫ್ರೆಂಡ್..!

* ಹಿಂದೆಂದೋ ಮಾಡಿದ ಪುಣ್ಯ ನಮ್ಮನ್ನು ಕಾಯುವುದೆಂದು
  ರುಜುವಾತಾಯಿತು..
  ಬೆಳಗ್ಗೆಯಿಂದ ಬಸಿರು ಬೇನೆ ತರುತ್ತಿದ್ದ ಬೇಧಿ
  ಈಗಷ್ಟೇ ನಿಂತಿತು..!

* ಬೆವರು,ಸಮುದ್ರ,ಕಣ್ಣೀರು ಮತ್ತು ಮೂತ್ರ..
  ಎಲ್ಲೆಲ್ಲೂ ಉಪ್ಪೇ..
  ವ್ಯತ್ಯಾಸವನ್ನೇ ಮುಚ್ಚಿಹಾಕಬಲ್ಲ ಈ ಉಪ್ಪನ್ನು
  ನಾನಿನ್ನು ತಿನ್ನುವುದಿಲ್ಲ..!

* ದಿನಾ ಬೆಳಗ್ಗೆ ಯೋಗ ಮಾಡುವ ಅವನಿಗೆ
  ಪತಂಜಲಿಯ ಬಗ್ಗೆ ಕೇಳಿದರೆ
  ಪಕ್ಕದಮನೆ ಅಂಜಲಿ ನೆನಪಾಗ್ತಾಳೆ..
  ಆತ ಬೆಂಗಳೂರಿನ ಯುವಕ..!

Thursday, February 2, 2012

ಹಾಯ್ಕುಗಳು:

* ನೀನು ನನ್ನ ಬಾಳಿಗೆ ಬೆಳಕಾಗಿ ಬಂದಿದ್ದಕ್ಕಿಂತ
  ಈ ಟಾರ್ಚಿಗೆ ಶೆಲ್ಲಾಗಿ ಬಂದಿದ್ದರೆ ಚೆನ್ನಾಗಿರ್ತಿತ್ತು..
  ಕರೆಂಟ್ ಇಲ್ಲ ಇಲ್ಲಿ.. ಅರ್ಜೆಂಟ್ ಟಾಯ್ಲೆಟ್ಟಿಗೆ ಹೋಗಬೇಕು ನಾನು..!

* ಮನುಷ್ಯ ಬುದ್ಧಿಜೀವಿಯಾಗುವುದನ್ನು ಬಯಸದ ಜನರೆಂದರೆ
  hair dye ಕಂಪೆನಿಯ ಮಾಲೀಕರು..!

* ಇಂಕಿನ ಹನಿಯೊಂದು ಆಗಷ್ಟೇ ಜಾರಿಬಿದ್ದ ಘಳಿಗೆ.
  ಅಂತಿಂಥ ಸಂದರ್ಭವಲ್ಲ ಅದು..
  ವ್ಯಾಸ ಮಹಾಭಾರತಕ್ಕಿಟ್ಟ ಕೊನೆಯ Full stop ಹನಿ ಅದು..!!

* ಸತ್ಯ ಹೇಳದಿದ್ದರೆ ತಲೆ ಸಾವಿರ ಹೋಳಾಗುವುದು ಎಂದು
  ಆ ಬೇತಾಳ ಹೇಳಿದ ಒಂದೇ ಒಂದು ಸುಳ್ಳು..
 "ವಿಕ್ರಮಾದಿತ್ಯ-ಬೇತಾಳ" ಪುರಾಣವನ್ನೇ ಸೃಷ್ಟಿಸಿದ್ದು ಸೋಜಿಗ..!

* ನ್ಯಾಯಾಂಗಕ್ಕೂ ಮರ್ಮಾಂಗಕ್ಕೂ ಇರುವ ಹೋಲಿಕೆ..
  ಎರಡೂ ಕಡೆ V.I.P ಗಳದ್ದೇ ಕಾರುಬಾರು..!

* ಯಾಕೆ? ಏನು? ಎಲ್ಲಿ? ಹೇಗೆ?
  ಎನ್ನುವ ಪದಗಳು..
  ಮನುಷ್ಯಕುಲ ನಶಿಸಿದರೂ ಉತ್ತರವಾಗದೇ
  ಬರಿಯ ಪ್ರಶ್ನೆಗಳಾಗೇ ಉಳಿದು ಹೋಗುವುದು ಅತ್ಯಂತ ಘೋರ ಸಂಗತಿ..!