About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Thursday, August 20, 2020

ಮತ್ತೆ ನೆನಪುಗಳು..

ನಿನ್ನ

ನಿನ್ನೂರಿಗೆ ವೋಲ್ವೋ ಹತ್ತಿಸಿ

ಕೈಬೀಸಿದಾಗ 

ಜಾರಿದ ಕಣ್ಣೀರು

ಪಿಸುಗುಡುತ್ತದೆ..

ನನಗೆ

ಬೆಂಗಳೂರಿನ

ದಾರಿಗಾಗಲಿಯೆಂದೊಂದೆರಡು

ಗುಡ್ಡೇ ಬಿಸ್ಕತ್ತಿನ ಪ್ಯಾಕಿಟ್ಟು

ಸುರಿವ ಮಳೆಯಲ್ಲಿ

ಬೈಕ್ ಹತ್ತಿ

ತನ್ನೂರಿಗೆ ಹೊರಟ

ನನ್ನಪ್ಪನ ಭಾವವ..


ನಿನ್ನದೇ ಕೆಲಸಗಳಲ್ಲಿ

ನೀ ಮಿಂದ ನಿಮಿಷಗಳಲ್ಲಿ

ನನ್ನಿಪ್ಪತ್ತು

ಮಿಸ್ಡ್ ಕಾಲುಗಳಿಗೆ

ಉತ್ತರವಿಲ್ಲದಿದ್ದಾಗ

ಏರಿ ಬರುವ ಸಿಟ್ಟು,ಅಳುಗಳು

ನೆನಪಿಸುತ್ತವೆ..

ನಾ ಬೇಕೆಂದೇ

ಸ್ವಿಚ್ಚಾಫು ಮಾಡಿದ

ಸೆಲ್ಲಿಗೆ ಮತ್ತೆ 

ಜೀವ ತುಂಬಿಸಿದಾಗ

ತೂರಿಬಂದ

ಅಮ್ಮನ 65 ಮಿಸ್ಡ್ ಕಾಲ್ಸ್ ಲಿಸ್ಟಿನಲ್ಲಿದ್ದ

ಕನವರಿಕೆ,ಚಡಪಡಿಕೆಗಳ..


ತುಂಬಿ ಅರಳಿ

ಓಡಾಡುವ ಹುಡುಗಿಯರ

ಮುಂಗುರುಳಿನಿಂದ

ಉಂಗುಷ್ಟದವರೆಗೆ 

ಕದ್ದು ಇಣುಕುವಾಗ

ಕಿವುಚಿದಂತಾಗುತ್ತದೆ :

ನಿನ್ನ

ಅದೇ ರೀತಿ

ಇನ್ನೊಬ್ಬರು ನೋಡಿದಾಗಾಗುವ

ಕರುಳು ಹಿಂಡುವ

ಹಸಿ ಸಂಕಟ..


ನೀ ಏನೇ ಹೇಳು ಹುಡುಗೀ..

ನೀನೊಬ್ಬಳು

ನನ್ನೊಳಗೆ ದಾಂಗುಡಿಯಿಟ್ಟು

ನನ್ನ ಮನಕ್ಕೊಂದು

ಕನ್ನಡಕವಿಟ್ಟು

ನನ್ನೆಲ್ಲಾ

ಪ್ರಾಚೀನ ತಪ್ಪು,ಹುಂಬತನಗಳನೆಲ್ಲ

ದೊಡ್ಡ ದೊಡ್ಡ

ಫಾಂಟ್ ಸೈಜುಗಳಲ್ಲಿ

ಮತ್ತೆ ಪರಿಚಯಿಸುತ್ತಿದ್ದೀಯ..


ನಾ ಏನು ಮಾಡಲಿ..?

ಕಳೆದ ಕ್ಷಣಗಳನ್ನ

ಮತ್ತೆ ಕರೆಸಿ 

ರೀ-ರೂಪ ಕೊಡುವ

ತಾಕತ್ತು ನನಗಿಲ್ಲ..

ಭವಿತದಲ್ಲೆಂದೂ

ಈ ದುಡುಕಿನವುಗಳ ಪೋಷಿಸಲಾರೆ.

ಫೋನೆತ್ತುತ್ತೇನೆ: 

ಮುಂದೆಲ್ಲ ಸಲಗಳಲ್ಲೂ..

ಕದ್ದು ಹಣುಕುವುದಿಲ್ಲ: 

ಹಿಂದೆಲ್ಲ ಸಲಗಳಂತೆ..


......


ಅಲ್ಲಿಗೆ

ಸೆಂಟಿಮೆಂಟಿನ ಮೂಡು ಖಾಲಿಯಾಗೋಯ್ತು ಹುಡುಗೀ..

ಅರಸೀಕೆರೆಯಲ್ಲಿ ರೊಟ್ಟಿ ರುಚಿ ಸಖತ್ತು..!

ಊರಿನ ಹಾದಿಯ ಮಧ್ಯಂತರದಲ್ಲಿ

ಬಸ್ಸಿಳಿದ ತಕ್ಷಣ ಮೊದಲು ಎರಡು ರೊಟ್ಟಿ ಆರ್ಡರು ಮಾಡಿ ಆಮೇಲೆ 'ಒಂದ'ಕ್ಕೆ ಹೋಗು..!! :)

ರೇಖಾಗಣಿತ

ಬೆಳಗ್ಗೆ ಎದ್ದು ಕಣ್ಣುಜ್ಜಿ ಕೈನೋಡಿಕೊಂಡೆ.. 

ಹಿಂದಿನ ರಾತ್ರಿಯ ಮೈಥುನದ ಗುರುತೇನಿರಲಿಲ್ಲ..

ಕೈ ರೇಖೆಗಳೆಲ್ಲ ಸ್ಪಷ್ಟ ಸ್ಪಷ್ಟ..

ಸನ್ನಿಯ full HD ವೀಡಿಯೋದಂತೆ..!


ಇನ್ನೊಮ್ಮೆ ನೋಡಿಕೊಂಡೆ..

ಆಯುಷ್ಯ ರೇಖೆಯಾಕೋ ಮಂಕಾದಂತಿದೆ..

ಒಂದು ವಾರದ ನೆಗಡಿ ಕೆಮ್ಮಿನ ಕಾರಣವಾ?

ಗೊತ್ತಿಲ್ಲ..

ಓಲ್ಡ್ ಮಾಂಕಿನ ಡ್ರಂಕನ್ ಬುದ್ಧ ಕಿಸಕ್ಕನೆ ನಕ್ಕಂತಾಯ್ತು..


ಅರೆರೆ ವಿದ್ಯಾರೇಖೆ ಉದ್ದವಾದಂತಿದೆ..!

ಅಹಾ ಸರಸ್ವತೀ..

ಉದ್ಧಾರ ಮಾಡು ಹೀಗೆಯೇ..

ರೇಖೆಯಂಚನ್ನು ಇಂಚಿಂಚು ಬೆಳೆಸುತ್ತಾ..


ಈ ದುಡ್ಡಿನ ರೇಖೆಯನ್ನ ಯಾವನೋ 

ನಟರಾಜ ರಬ್ಬರ್ ತಂದು ಅಳಿಸಿದಂತಿದೆ..

ಹಾಗಾಗಿ .. ಇರುವ ಎರಡು ಪ್ಯಾಂಟಿನ

ಜೇಬು ತೆಗೆಸುವ ಪ್ಲಾನಿದೆ..

ಕಾಸು ಹೋಗಲಿ ಕರ್ಚೀಪಿಡುವ

ಸದ್ಬುದ್ಧಿಯೂ ಇಲ್ಲ ನನಗೆ... 


ಸಣ್ಣವನಿದ್ದಾಗ ಶ್ರೀನಾಥ್ ಪಿಚ್ಚರ್ ನೋಡಿದ ಮೇಲೆ

ಹಾವು ಹಿಡಿಯುವ ಹೀರೋಯಿಸಮ್ಮಿಗೆ

ಗರುಡರೇಖೆ ಹುಡುಕುತ್ತಿದ್ದೇನೆ ಕೈಯಲ್ಲಿ..

ಊಹೂ.. 

ಅವತ್ತಿನಿಂದ ಇಲ್ಲಿಯವರೆಗೂ ಕಂಡಿಲ್ಲ ಅದು..

ಆದರೆ

ಸ್ನೇಕ್ ಶ್ಯಾಮನ ಕೈಯಲ್ಲಿ ಮಾತ್ರ

ಖಂಡಿತ ಮುಂಗುಸಿರೇಖೆ ಇರುವುದು ಸತ್ಯ..!


ಸಾಯಲಿ..

ಈ ರೇಖಾಗಣಿತ ಬಿಟ್ಟು ಹಲ್ಲುಜ್ಜಿ ಎದ್ದು ಹೊರಟರೆ

ಬೆಕ್ಕು ಎಡದಿಂದ ಬಲಕ್ಕೆ ಹೋಗಲಿಲ್ಲ.. 

ಬಲಗಣ್ಣು ಅದುರಲಿಲ್ಲ.. 

ಹಲ್ಲಿ ಲೊಚಗುಟ್ಟಲಿಲ್ಲ.. 

ದೇವಸ್ಥಾನದ ಗಂಟೆ ಮೊಳಗಲಿಲ್ಲ.. 

ಮತ್ತೆ ಕೈನೋಡಿಕೊಂಡೆ..

ಅದೃಷ್ಟ ರೇಖೆ ಅತ್ತಂತಾಯ್ತು..

ತಕ್ಷಣ ..

ಎದುರು ಸಿಕ್ಕವಳೊಬ್ಬಳು ಸುಮ್ಮನೆ ಸ್ಮೈಲಿದಳು..!


ಅವತ್ತಿನಿಂದಲೇ ರೇಖೆ ಬಿಟ್ಟು

ಮಚ್ಚೆ ನಂಬಲು ಶುರುಮಾಡಿದ್ದು ನಾನು..!! 😜

Monday, May 7, 2018

ಜೀವಂತಿಕೆ..

ಒಪ್ಪವಾಗಿ ಜೋಡಿಸಿಟ್ಟ ಪಾತ್ರೆಗಳು.‌.
ಧೂಳಿಡಿಯದಂತೆ ಒರೆಸಿಕೊಂಡ ಅಜ್ಜನ ಫೋಟೋ..
ಮನೆಮುಂದಿನ ಒಣಗದ ತುಳಸಿ..
ಕೆಳಗಡೆ ಅಡಿಕೆಚೀಲ ಎಳೆದಾಡಿದ
ಲೈನುಗಳು..
ಅಬ್ಬ..!!
ಒಂದು ಜೀವಂತಿಕೆಯ ಅಸ್ತಿತ್ವಕ್ಕೆ
ಎಷ್ಟು ಸಾಕ್ಷಿಗಳು..!

ಒಮ್ಮೊಮ್ಮೆ ಬೆಂಗಳೂರಿನ ರೂಮು
ಸ್ಮಶಾನವಾ ಅನಿಸಿದ್ದುಂಟು..
ಅಲ್ಲಿ ಎಲ್ಲವೂ ಸ್ತಬ್ಧ..
ಯಾವುದೋ ಆಕಾಶ ಕಿತ್ತುಕೊಂಡು
ತಲೆಮೇಲೆಬಿದ್ದು
ವಸ್ತುಗಳಿಗೆಲ್ಲ ನಿಶ್ಶಕ್ತಿಯಾದಂತೆ ,
ಅವೆಲ್ಲ ಮೈಮೇಲೆ ಧೂಳಿನ ಗೋರಿ ಹಾಸಿಕೊಂಡು
ಆಕಳಿಸಿ ಕವುಚಿಕೊಂಡಂತೆ.

ಆ ಅರಳಿಮರ ಹೋದಸಲ ಕಂಡಾಗ
ಬೆನ್ನುಮುರಿದುಹೋದಂತೆ
ಬಡಕಲಾಗಿ ನಿಂತಿತ್ತು.
ಈಗ ಮೈತುಂಬ ಎಲೆತುಂಬಿಕೊಂಡ
ಎಳೆತರುಣಿ..!
ಮೋಡಗಳೆಲ್ಲ ಸಭೆಸೇರಿ , ಪ್ರತಿಜ್ಞೆ ಮಾಡಿ,
ಒಂದೊಂದೇ ಎಲೆಬರೆದು ಮಳೆಹನಿಯ ಅಂಟುಹಚ್ಚಿ
ರೆಂಬೆಕೊಂಬೆಗೆ ಮೆತ್ತಿದ್ದಾವಾ ?!
ಅರಳಿಮರ ಮತ್ತೆ ಉಸಿರಾಡುತ್ತಿದೆ..!
ಅಕ್ಕಪಕ್ಕದ ಮನೆಯವರೂ.
.
ಜೀವಂತಿಕೆಯೊಂದು ನಿರಂತರ ದಾನ.

ಆ ಅಜ್ಜಿ..?
ಮಕ್ಕಮೊಮ್ಮಕ್ಕಳು ಗತಿಯಿಲ್ಲದ ಅನಾಥ ಸಂಜೆಗಳ ಗೆಳತಿಯವಳು‌.
ನಡೆಯುತ್ತಿದ್ದರೆ ಫ್ಯಾಂಟಮ್ ಕ್ಯಾಮರಾ ಫೂಟೇಜು ನೋಡುವ ಫೀಲು..
ಅತಿನಿಧಾನದ ಬದುಕು ಅವಳದು..
ತನ್ನ ಅಡಿಗೆ ತಾನೇ ಮಾಡಿಕೊಂಡು
ಉಂಡು, ಪ್ಲೇಟು ತೊಳೆದು ಹೊರಡುತ್ತಾಳೆ ಮತ್ತೆ ನೀರುತರಲು.
ನಾಚಿಕೆಯಾಗಬೇಕು.. ;
ಬ್ಯಾಚುಲರ್ ಬದುಕಿನ ಸೂಪರ್ ಫಾಸ್ಟ್ ಸೋಂಬೇರಿತನಗಳಿಗೆ.
.
ಜೀವಂತಿಕೆ ಎನ್ನುವುದೊಂದು ಶಿಸ್ತು..

ಹುಡುಗಿ ಹಾರಿಹೋಗಿ ತಿಂಗಳಾಗಿದೆ.
ಇಡೀ ಬೋನಿಗೆ ತಾನೊಬ್ಬನೇ.
ಆಗಾಗ ಕೂಗುತ್ತಾನೆ.
ಹೊರಬಿಟ್ಟುಬಿಡೋಣವೆಂದರೆ
ಪಕ್ಕದ ಆಕಾಶದಲ್ಲೇ
ಹದ್ದಿನ ರೆಕ್ಕೆ ಸದ್ದು....
ಕೊತ್ತಂಬರಿ ಸೊಪ್ಪೋ, ನವಣೆಯೋ
ಒಂದಿಷ್ಟು ಸುರಿಯುತ್ತೇನೆ.
ತಿಂದು ಮೆತ್ತಗಾಗುತ್ತಾನೆ..
ಮತ್ತೆ ಕೂಗು,ಕಿರುಚುಗಳು.
ಬೋನಿನ ಹಕ್ಕಿಯ ಏಕತಾನತೆಯ ಜೀವಂತಿಕೆ
ಅದ್ಯಾವ ರೀತಿಯ ನೆಸೆಸಿಟಿ ಸೃಷ್ಟಿಕರ್ತನಿಗೆ ?
.
ಜೀವಂತಿಕೆಯೂ ಪ್ರಶ್ನೆಯಾಗಬಲ್ಲ ಅಂಶವಾ ?

.....

ಜಗತ್ತು ನಿಧಾನವಾಗಿ ಪೊರೆ ಕಳಚುತ್ತಿದೆ..
ಅಥವಾ ಕಣ್ಣು.

Thursday, May 3, 2018

ದರಿದ್ರ ಕವಿತೆ..

ಖಾಲಿಯಾದ ತಲೆಯೊಳಗೆ
ರಣಹದ್ದಿನ ಬಾಯಿವಾಸನೆ..
ಮನದ ಹೆಣ
ಜಾಸ್ತಿ ಕೊಳೆಯಬಾರದು..

.
ಪರಿಸ್ಥಿತಿಗಳು
ಅಘೋರಿಗಳಾಗಿವೆ.
ದ್ವಂದ್ವದ ಗಂಗೆಯಲ್ಲಿ
ಫಟಫಟನೆ ಉರಿದುಹೋಗಬೇಕಿದ್ದ
ಮನಸಿನ ಕಾಲೆಳೆದು
ದಡಕ್ಕಾನಿಸಿಕೊಂಡಿವೆ..

.
ಬೆರಳೆರಡು ಬೆಸೆದುಕೊಂಡಿದ್ದು
ಟೂ.. ಬಿಡಲೋ,
ನಡುಗುವ ಪ್ರಾರ್ಥನೆಗೋ ಗೊತ್ತಿಲ್ಲ..
ಮೂಕಿ ಕೈಯ ಗೋಳಿಗೆ
ಸತ್ತ ನರಗಳು ಹೇಗೆ ಉತ್ತರಿಸಿಯಾವು ?!

.
'ಜಿಹ್ವೆ'ಯೆಂಬ ಅಚ್ಚಕನ್ನಡದ
ಬುದ್ಧಿಜೀವಿ ಪದ
ಪಿಂಕು ಪಾಪಿನ್ಸಿನ ರುಚಿ
ಮರೆತದ್ದು ವೇದನೆಗಳ ಘೋರತೆಗೊಂದು
ಆಡೆಡ್ ಬೋನಸ್ಸು..

.
ಕಾಣಲು-ಕೇಳಲು ಕೀರಲಿನ
ಕಾಗೆಗಳ ಮದುವೆಯ
ಉಡುಗೊರೆಗಳಲ್ಲಿ
ಮೈಕು - ಕನ್ನಡಿಗಳೇ ತುಂಬಿವೆ..
ಲಹರಿಗಳ ಅಸಹನೀಯತೆಗೆ
ತುಪ್ಪ ಚೆಲ್ಲುವಂತೆ
ತಪ್ಪುಗಳ ಮೇಲೆ ತಪ್ಪುಗಳು..

.
ಖಾಲಿ ತಲೆಯೊಳಗಿನ
ಹದ್ದಿನ ಬಾಯಿವಾಸನೆ
ಈ ಪರಿ
ಕಮಟು ಬೆವರಾಗಿ ಹರಿದಿದ್ದು
ತಡೆಯಲಾರದೇ
ಮೈಸೂರ್ ಸ್ಯಾಂಡಲ್ ಊದುಬತ್ತಿ
ಹಚ್ಚಿದ್ದಾನೆ ಪಕ್ಕದ ಮನೆಯವ..

.
ಪರಿಮಳವೆಂದರೆ ಆಧ್ಯಾತ್ಮ..
ಮಾತು ಹುಟ್ಟಲು ಬಯಸದ ಯೋನಿಯದು.
ಅಲ್ಲಿಗೆ ದರಿದ್ರ ಕವಿತೆಯೊಂದು
ಕೊನೆಯಾದ ಭಾವ....

ನೀನಿರಬೇಕಿತ್ತು..

ಬದುಕಿನ ಒಂದೊಂದು ಮಗ್ಗಲುಗಳು
ತಮ್ಮ ತಾವು ಬದಲಾಯಿಸಿಕೊಳ್ಳುತ್ತಿದ್ದರೆ..
ಒಂದೊಂದು ಮೆಟ್ಟಿಲುಗಳು
ತಮ್ಮ ತಾವು ಹತ್ತಿಸಿಕೊಳ್ಳುತ್ತಿದ್ದರೆ..
ಒಂದೊಂದು ಹಂತಗಳು
ತಮ್ಮ ತಾವು ದಾಟಿಸಿಕೊಳ್ಳುತ್ತಿದ್ದರೆ..
ಬದಲಾಯಿಸುವಾಗ,ಹತ್ತುವಾಗ,ದಾಟುವಾಗ
ನೀನೊಬ್ಬಳಿರಲೇಬೇಕಿತ್ತು ಅನ್ನಿಸುತ್ತದೆ..

ಪ್ರತೀವಸ್ತುವೂ ಫಳಫಳ.
ಜಗವೆಲ್ಲ ಝಗಝಗ..
ಆದರೆ
ತಿರುಗಿಕೂತಿವೆ ಕಣ್ಣುಗಳು
ನಿನ್ನೆಡೆಗೆ.
ರೆಪ್ಪೆಗೀಗ ಉಪ್ಪುನೀರಿನ ಪಥ್ಯ.

ನಿರ್ಧಾರಗಳು ನಮ್ಮದಿರಬೇಕಿತ್ತು
ಅನ್ನಿಸುವುದು
ಅವುಗಳ ನಾಳೆಗಳು ಕ್ರೂರವಾಗಿದ್ದಾಗ..
ಈಗ ?
'ಭೂತ'ವೊಂದು ಅಸಂಖ್ಯಾತ ಬಿಳಲುಗಳ
ಶಾಪಗ್ರಸ್ಥ ಆಲದಮರ..

ನನ್ನೊಳಗಿನ ಸೇತುವೆಯ ಕೆಳಗೆ
ಹೊಸನೀರು ಹರಿಯುವುದು ಯಾವಾಗ ಹುಡುಗೀ ?
ತಪ್ಪು ನಂದೇ ಬಿಡು..
ಕಟ್ಟಿದ್ದೇನೆ ಸೇತುವೆಯನ್ನ
ಕೆರೆಗೆ.

ತುಂಬಿಸಿಕೊಳ್ಳಬಾರದಿತ್ತು ನಿನ್ನ.
ಈಗಿನ ಈ ರೋಗದಂಥ
ಖಾಲಿತನಕ್ಕೆ ಪರಿಚಯವಾಗುತ್ತಿರಲಿಲ್ಲ ನಾನು.
ಕಿರುಚಬೇಕನಿಸುತ್ತದೆ..
ಹಾಳಾದ್ದು ಗಂಟಲೂ ಖಾಲಿ..

ಲಾಂದ್ರದಲ್ಲಿ ಸೀಮೆಣ್ಣೆ ಮುಗಿದುಹೋಗಿದೆ..
ಕೈಯಲ್ಲಿ ನೆಂದ ಬೆಂಕಿಪೊಟ್ಟಣ..
ಮಿಂಚುಹುಳಗಳು ವಲಸೆಹೋಗಿವೆ..
ಸತ್ತ ನಕ್ಷತ್ರ ಅಳಿದುಳಿದ ಬೆಳಕನ್ನೂ ಹೀರಿ ಕೂತಿದೆ..

ಥೂ..

ನೀನಿರಬೇಕಿತ್ತು ಕೂಸೇ..
ನೀನಿರಲೇಬೇಕಿತ್ತು..

:(

Monday, March 3, 2014

ಲೀನ

ಠಣ್ಣನೆ ಗಂಟೆಯೊಂದು
ಬಾರಿಸಿತು..
ಮಲಗಿದಲ್ಲಿಂದ ನಿಧಾನವಾಗಿ ಎದ್ದು
ಹೊರಟ ಅವನು ತೇಲುತ್ತಾ..

ಹತ್ತಡಿ ಪಕ್ಕದ ಗ್ಲಾಸಿನಾಚೆ
ಅಮ್ಮ,ಅಪ್ಪ,ಅಪ್ಪಿ ಮುದ್ದಿಸಿದವಳು.
ಹೊರಟವನಲ್ಲಿ ಮೌನವ್ರತದ ಶುರುವಿತ್ತು.
ಎಲ್ಲರ ಕೆನ್ನೆಯನ್ನೊಮ್ಮೆ
ಸವರಿ ಇನ್ನಷ್ಟು ಜೀಕಿ ತೇಲಿದ.

ಹೊರಬಂದವನನ್ನು
ನೂರಡಿಗಳವರೆಗೆ ಬೀಸಿ ಬಿಸಾಕಿತ್ತು
ತಂಗಾಳಿ.
ತರಗೆಲೆಯೊಮ್ಮೆ ನಕ್ಕಂತಾಯಿತು.
ಇನ್ನೊಂದೇನೋ ಮೈ ಹೊಕ್ಕಂತಾಯಿತು.

ಅದು ಪುಟ್ಟನ ಮೂರು ಚಕ್ರದ ಕೈಗಾಡಿ.
ಕೂಗಲು ಹೊರಟವನ ಗಂಟಲು
ಟನ್ನುಗಳಷ್ಟು ಭಾರವಾದ ಭಾವದ ಭಾಸ.
ತಲೆಕೆಟ್ಟು
ಗಾಳಿಯಲ್ಲೊಂದು ಪಲ್ಟಿಯೊಂದಿಗೆ
ಮುಂದುವರೆದ.
ಮಧ್ಯೆ ಮಧ್ಯೆಯ ತಂಗಾಳಿಯ ಬಿಸಾಕುವಿಕೆಯೊಂದಿಗೆ.

ಅಲ್ಲಿ ಸಿಕ್ಕಿದ್ದು ಸಮುದ್ರ.
ಅರೆ.. ಅಲೆಗಳ ಗಲಾಟೆ
ಒಂಚೂರೂ ಕೇಳಲೊಲ್ಲದು..!?
ಏನಾಗಿದೆ ಕಿವಿಗೆ..?
ಮುಟ್ಟಿಕೊಂಡ.
ಕಿವಿಯಿದ್ದ ಜಾಗ ಖಾಲಿ.
ಮೂಗು?
ಅದೂ ಖಾಲಿ..!
ಕಣ್ಣು?
ಮುಟ್ಟಿಕೊಳ್ಳಲು ಕೈ ತಂದವನಿಗೆ ಕಂಡಿದ್ದು
ಕೈಯಿದ್ದ ಜಾಗದ ಖಾಲಿ.
ಮರುಕ್ಷಣ
ಐವತ್ತಾರು ಗಾಳಿಪಟಗಳ ಉದ್ದ ಸಾಲೊಂದು
ಹೊಟ್ಟೆಯೊಳಗಿಳಿದು
ಬೆನ್ನ ಸೀಳಿ ಹೊರಬಿತ್ತು..

ಮೂಲಾಧಾರದ ಮೂಲದಲ್ಲಿ
ಮೂಡಿದ ಭೀಕರ ಭಯ
ಟನ್ನು ಭಾರದ ಗಂಟಲ ಸೀಳಿ ಹೊರಬಿತ್ತು
ಚೀತ್ಕಾರದ ರೂಪದಲ್ಲಿ.
'ಕೀವ್.........'
ಕೊನೆಯ ಗಾಳಿಪಟ ತಿರುಗಿ ನಕ್ಕಂತಾಯಿತು.

ತೆರೆಗಳ ಮೇಲೆ
ಹಾರಿ ಬೀಳುವ ಮಕ್ಕಳು,
ಮರಳಲ್ಲಿ ನಿಂತು ಕಿರುಚುವ ಅಪ್ಪಂದಿರಿಂದ
ತುಂಬಿಹೋಗಿದ್ದ
ಸಮುದ್ರತಡಿಯ ಅಗಾಧ ಮೌನದಲ್ಲಿ
ಸುಮ್ಮನೇ ಕಣ್ಮುಚ್ಚಿಬಿಟ್ಟ.
ತೇಲಿಸಿ ಕರೆದೊಯ್ದಿತ್ತು ಮತ್ತದೇ ತಂಗಾಳಿ.

ನಂತರದಲ್ಲೊಮ್ಮೆ ಅರ್ಧ ರೆಪ್ಪೆ
ತೆಗೆದಿದ್ದಷ್ಟೇ.
ಅಲ್ಲಿತ್ತು ಅದು.
ಕಪ್ಪು-ಬಿಳುಪು ಪಟ್ಟೆ ಪಟ್ಟೆಯ
ಲೈಟ್ ಹೌಸಿನ ಕೊನೇ ಮಾಳಿಗೆ.

ಮೈಯ್ಯಿಲ್ಲದವನ ಮೈ ನಡುಗಿತ್ತು.
ಹಳೆಯದೆಲ್ಲವೂ ಮಂದಗತಿಯ
ಸಿನಿಮಾ ರೀಲಿನೊಳಗೆ ತಿರುಗತೊಡಗಿತು.
ಜಿಗುಪ್ಸೆ,ಸಮುದ್ರ,ಲೈಟ್ ಹೌಸು,
ಕೊನೆಯ ಮಾಳಿಗೆಯ ಮೆಟ್ಟಿಲು,
ಅಲ್ಲಿದ್ದ 'ಅಪಾಯ' - ಬೋರ್ಡು.
ಲೆಕ್ಕಿಸದೇ ಮುಂದೆ ಬಂದಿದ್ದು,
ಹುಟ್ಟಿಸಿದವರಿಗೆ,ಬೆಳೆಸಿದವರಿಗೆ,
ಕಲಿಸಿದವರಿಗೆ,
ಮುತ್ತಿಟ್ಟವಳಿಗೆ..
ಎಲ್ಲರಿಗೊಮ್ಮೆ ಕ್ಷಮೆ ಕೇಳಿದ್ದು..
ಕೊನೆಯದಾಗೊಮ್ಮೆ ಕಣ್ಮುಚ್ಚಿದ್ದು.
ಹಾರಿದ್ದು......

ರೀಲು ಕಟ್ಟಾಯಿತು.
ಲೈಟ್ ಹೌಸು ಮುರಿದುಬಿತ್ತು.
ಜಾತ್ರೆಯ ತೊಟ್ಟಿಲಿನಂತೆ
ಗರಗರನೆ ತಿರುಗಿದ ಕ್ಷಿತಿಜ
ತಿರುತಿರುಗಿ
ಭೂತಾಕಾರದ ಉದ್ದನೆ ಸುರಂಗವಾಗಿ ಮಾರ್ಪಟ್ಟಿತು.

ಒಳಹೊಕ್ಕಿಬಿಟ್ಟ.
ಹೋದಷ್ಟೂ ಸುರಂಗ ಮುಗಿಯದು.
ವೇಗ ಅಡಿ ಅಡಿಗೂ ದ್ವಿಗುಣ.
ಸುತ್ತಲೂ ಕತ್ತಲೆ...
ಕತ್ತಲೆ..
ಕತ್ತಲೆ.

*

ಅದೇನು..?!
ಬೆಳಕು..!
ಈಗಷ್ಟೇ ಹೊತ್ತಿಕೊಂಡ ಬಿಳಿಯ ಕಿಡಿಯಂತೆ..!
ಸುರಂಗದ ಕೊಟ್ಟ ಕೊನೆಯಂತಿದೆ.
ಓಹ್..
ಸಮೀಪಿಸುತ್ತಿದೆ.
ಅಂತೂ ಇನ್ನೇನು ಕೊನೆಮುಟ್ಟಿಬಿಡುತ್ತೇನೆ..!
ಕಿಡಿ ದೊಡ್ಡದಾಗುತ್ತಿದೆ,ಸುಡುತ್ತಿಲ್ಲ.
ಹೇಳಲಾಗದ ಸೆಳೆತ..

ಅಮ್ಮನ ಮೊಲೆತೊಟ್ಟು ನೆನಪಾಗುತ್ತಿದೆ..

ಅಮ್ಮಾ.....

ನಂತರದ ಘಳಿಗೆಗೂ ಮುನ್ನವೇ
ಬಿಳಿ ಬೆಳಕ ಗೋಲ
ತನ್ನೊಳಗಿನ ಸಂಪೂರ್ಣತೆಯೊಳಗೆ
ಹೀರಿಕೊಂಡಿತ್ತು ಅವನನ್ನು.........

.
.
.
.

ಇತ್ತ ಅವನ ಮನೆಯಲ್ಲಿ
ಅಪ್ಪಿ ಮುದ್ದಿಸಿದವಳ
ಅಳುವನ್ನೂ ಮೀರಿಸಿದ ರೌದ್ರತೆಯೊಂದಿಗೆ
ಗರುಡ ಪುರಾಣದ ಕೊನೆಯ ಶ್ಲೋಕ ಅಬ್ಬರಿಸಿತ್ತು.....

Monday, November 4, 2013

Diwali - ದೀಪಾವಳಿ

ನನ್ನ ಮಡಿಲ ಸೆರೆಯ ಬಿಡಿಸಿ
ತನ್ನ ತಾವರೆಯೂರಿಗೆ ಓಡಿಹೋದಳು
ಲಕ್ಷ್ಮಿ..
ಕಾಕರಾಜನ ಬೆನ್ನೇರಿ ಬೇಟೆಯಾಡುವವನ
ವಾರೆಗಣ್ಣೇಕೋ ಅದೇ ಸಮಯಕ್ಕೆ
ನನ್ನ ಜೇಬಿನ ಬೇಲೆ ಬಿದ್ದಿದ್ಯಾಕೆ..??!

ಅಲ್ಲಿಗೆ ಶುರುವಾಯ್ತು ಕಷ್ಟಗಳ One-sided ತುಲಾಭಾರ....

Paste ಖಾಲಿ..
ಮನೆಯಲ್ಲಿನ ಗ್ಯಾಸ್ ಖಾಲಿ..
ಹಬ್ಬದ ಸಂಭ್ರಮಕ್ಕೆ ಹೋಟೆಲ್ ಮುಂಗಟ್ಟುಗಳು ಬಂದ್..
ಸಾಲಕೊಟ್ಟವನ ಬೈಕು ಮನೆಮುಂದೆ ಹಾಕಿದ ಸೈಡ್ ಸ್ಟ್ಯಾಂಡ್ ಸದ್ದು..
ನೀರಿನ ಕ್ಯಾನಿಗೆ ಫೋನಾಯಿಸಿದರೆ ಬ್ಯಾಲೆನ್ಸ್ ನಿಲ್ ಎಂದುಲಿಯುವ ಕಟುಕಂಠದ ಲಲನೆ,
ರೂಮ್ ಮೇಟು ಊರುಸೇರಿದ್ದ,
ಬಿಸ್ಕೆಟ್ಟಿಗೆ ಕಾಸಿದ್ದರೂ ಮೂಲೆಯಂಗಡಿಯಲ್ಲಿ ದೊರೆತಿದ್ದು ಬೀಗ ಮಾತ್ರ..
ಅಯ್ಯೋ.. ಇದೇನು.. ಕರೆಂಟ್ ಹೋಯ್ತು...!

ದೀಪದ ಹಬ್ಬವಿದು -
-ನೆಂಟರೆನಿಸಿಕೊಂಡವರು ನೂರು.. ಮನೆಗೆ ಊಟಕ್ಕೆ ಕರೆಯದವರೇ ಎಲ್ಲರೂ..

ಒಂಟಿಯಾಗಿಹೋದೆ ಕೊನೆಗೂ..

ಹುಚ್ಚೊಂದು ತಂತಾನೇ ಮೆತ್ತಿಕೊಳ್ಳುವ ಮುನ್ನ ಹಲ್ಲು ಕಚ್ಚಿ ಎದ್ದು ನಿಂತೆ....
ಬರೀ ಬ್ರಶ್ಶಿಂದ ಹಲ್ಲುಜ್ಜಿದೆ..
ಗ್ಯಾಸ್ ಖಾಲಿಯಾದರೇನಂತೆ.. ಮೂರುದಿನದ ಹಿಂದೆ ಕೊಂಡ ಕ್ಯಾರೆಟ್ ತಿಂದೆ..
ಮಧ್ಯಾಹ್ನಕ್ಕೆರಡು ಪ್ಯಾಕ್ Eno..
ಸಾಲಕೊಟ್ಟವನಿಗೆ ನಾನೇ ಟೈಮು ಕೊಟ್ಟೆ..
ನಲ್ಲಿ ನೀರು ಕುಡಿದೆ..
ಕರೆಂಟಿಲ್ಲದಿರೆ ಪುಸ್ತಕಕ್ಕೆ ಬರವೇ..! ಗುಕ್ಕಿನಲ್ಲಿ ಮುಗಿಸಿದೆ ಮೂರ್ಪುಸ್ತಕಗಳ..
ನೆಂಟರ ಹಂಗು,ಹಮ್ಮುಗಳ್ಯಾಕೆ.. ಗಂಡಸಲ್ಲವೇ ನಾನು..!
ಬದುಕಿಬಿಡುತ್ತೇನೆ ಒಬ್ಬನೇ.. -
-ಮಕ್ಳಾ.. ಮುಂದೊಂದಿನ ಗಾಂಧೀಜಯಂತಿಗೂ ಮನೆಗೆ ಕರೀತೀರಿ ನನ್ನ.. ನೋಡ್ತಿರಿ..
ಎಂದುಕೊಂಡು..
ಕಸದ ಮಧ್ಯೆ ಸಿಕ್ಕ ಅರ್ಧ ಸಿಗರೇಟಿಗೆ ಕೆಂಪಂಟಿಸಿ
ಟೆರೇಸಿಗೆ ಬಂದರೆ...

...........................

ಭೂಚಕ್ರ,ಕುಂಡಗಳ ಮುಂಡಗಳಿಗೆ ಕಿಡಿಬತ್ತಿಗಳ ಚುರುಕುಮುಟ್ಟಿಸಿ
ಮನದ ಮೂಲೆಮೂಲೆಗಳಿಗೆ ಖುಷಿಯ ಬಣ್ಣ ಬಳಿದುಕೊಂಡ ಪಾಪುಗಳೂ..,
ಝರಿಸೀರೆಯ ಹೋಮ್ಲಿ ಅಮ್ಮಂದಿರೂ,
ಬರ್ಮುಡಾ ತೊಟ್ಟು ಡಿಜಿಕ್ಯಾಮ್ ಹಿಡಿದುನಿಂತ ಅಪ್ಪಂದಿರೂ,
ಊರ್ತುಂಬ ಅಲ್ಲಲ್ಲಲ್ಲಿ ಘೀಳಿಡುವ ಮಿನಿಬಾಂಬುಗಳು
ಹಾಗೂ..
ಟೆರೇಸಿನಲ್ಲಿ ಕೈಕಟ್ಟಿನಿಂತ ಸ್ನಾನ ಮಾಡದ ನಾನು...

ಹೌದು..

ಬದುಕಿಬಿಡಬೇಕು ನಾನು..
ಶನಿಲಕ್ಷ್ಮಿಯರ ಚುರುಕುಮುಟ್ಟಿಸಿಕೊಂಡಲ್ಲಿ ಮಾತ್ರ
ಕಿರಣಗಳ ಸೂಸಿ ತಿರುಗಲು ಸಾಧ್ಯ..
ಕಿಡಿಗಳ ಚಿಮ್ಮಿಸಿ ಭೋರ್ಗರೆಯಲು ಸಾಧ್ಯ..
ಬೆಳಕಾಗಲು ಸಾಧ್ಯ..
ಬದಲಾಗಲು ಸಾಧ್ಯ..
ಸಾಧ್ಯತೆಗಳ ಎದುರುಗೊಳ್ಳಲು ಸಾಧ್ಯ..
ಉರಿ,ಗುರಿ,ಗರಿ.. ಇದಲ್ಲವೇ ಹೈಯರಾರ್ಕಿ..?!!

ಬೋಧಿಯಿಲ್ಲದ ಟೆರೇಸಿನಲ್ಲಿ ಜ್ನಾನೋದಯವಾಗಿ
ಮೆಟ್ಟಿಲಿಳಿದ್ಹು ರೂಮಿನ ಕದ ತೆರೆದದ್ದಷ್ಟೇ..
ಕರೆಂಟು ಬಂತು......!!!

ನನ್ನ Diwali ದೇಹದೊಳಗೊಂದು
ಸ್ಪಷ್ಟ ದೀಪಾವಳಿ ಶುರುವಾಗಿದ್ದು ಹೀಗೆ....