About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Tuesday, January 31, 2012

ನಮ್ಮನೆಯ ನಲ್ಲಿ

ಒಂದು ಸಂಶಯದೊಂದಿಗೆ
ನಲ್ಲಿ ತಿರುಪುತ್ತಿದ್ದೇನೆ..
ಮೊನ್ನೆ ಸಂಶಯವಿಲ್ಲದೇ ತಿರುಗಿಸಿದ್ದಕ್ಕೆ
ಮೂಳೆ ಮುರಿಸಿಕೊಂಡು ಮೂಲೆ ಗುಂಪಾಗಿತ್ತು
ಹಳೇ ನಲ್ಲಿ..!

ಈ ನಲ್ಲಿಯ ಬಾಳೇ ವಿಚಿತ್ರ..
ಮಾತಿಲ್ಲ,ಕಥೆಯಿಲ್ಲ,ಕಿವಿಯಿಲ್ಲ,ಕವಿಯಲ್ಲ.
ನಲ್ಲನಿಲ್ಲದ ನಲ್ಲಿಗೆ
ನಲ್ಲೆಯೂ ಇಲ್ಲ..
ತಿರುಪಿದಾಗ ಛಿಲ್ಲನೆ ಚೆಲ್ಲುವುದರಲ್ಲಿ ಕಮ್ಮಿಯಿಲ್ಲ.

ನಲ್ಲಿಯೊಂದು ಹಾದರಗಿತ್ತಿ..
ಗೊತ್ತಿದ್ದವನಿಗೂ ಸೈ,ಅಪರಿಚಿತನಿಗೂ ಸೈ..
ತಡವಿ,ಹಿಂಸಿಸಿ,ತಿರುಚಿ ಉಪಯೋಗಿಸಿದಷ್ಟೂ
ತಣಿಯುವವರು
ಲಿಂಗಬೇಧವಿಲ್ಲದ ಗಿರಾಕಿಗಳು..

ಮನೆಯ ಮುಂಜಿ,ಮದುವೆಯ ಮುಂಜಾವುಗಳಿಗೆ
ಪಕ್ಕದ ಬೀದಿ ಮಲ್ಲಿಯಿಲ್ಲದಿದ್ದರೂ
ಈ ನಲ್ಲಿ ಬೇಕೇ ಬೇಕು..
ಆದರೂ..
"ಬಾ ನಲ್ಲಿ ಮಧುಚಂದ್ರಕೆ.." ಎಂಬ ಹಾಡು
ಇಲ್ಲಿಯತನಕ ಬಂದಿಲ್ಲ..!

ನಲ್ಲಿ ತಿರುಪುವಾಗ ಇಷ್ಟೆಲ್ಲಾ ನೆನಪಾಗಿದ್ದಕ್ಕೆ
ಸಿಕ್ಕಿದ್ದು..
ಖಾಲಿಯಾದ ಟ್ಯಾಂಕು..
ಮತ್ತು ಕಾರ್ಪೊರೇಷನ್ ಕೂಗು ;
ಮುಂದಿನ ಮೂರು ದಿನ ನಗರದಲ್ಲಿ ನೀರಿರುವುದಿಲ್ಲ..!!

3 comments:

  1. ವಿಶ್ವಣ್ಣ ತುಂಬಾ ವಿರಳ ವಿಷಯಗಳನ್ನು ಕವಿತೆಯ ಭಾವಕ್ಕೆ ಒಗ್ಗಿಸಿಕೊಳ್ಳುವ ನಿಮ್ಮಲ್ಲಿನ ತಾಕತ್ತು ಕಂಡು ಬೆರಗಾದೆ.. ಅಬ್ಬಾ ಹೇಳುವ ವಿಷಯವನ್ನು ವಿಭಿನ್ನವಾಗಿ ಹೇಳುವುದಷ್ಟೇ ಅಲ್ಲ, ಅದನ್ನು ನಿಮ್ಮ ನವೀನ ರೀತಿಯ ನಿರೂಪಣೆಗೆ ಒಗ್ಗಿಸಿಕೊಂಡು ಕವಿತೆಯನ್ನು ಗೆಲ್ಲಿಸಿಕೊಳ್ಳುತ್ತೀರಲ್ಲಾ ಅದರಲ್ಲಿ ಕವಿಯ ಸಾರ್ಥಕ್ಯವಿರುವುದು.. ನಿಮ್ಮ ಶೈಲಿಯನ್ನು ಮನಸಾರೆ ಮೆಚ್ಚಿ ಅಭಿನಂಧಿಸುತ್ತೇನೆ.. ನಿಮ್ಮ ಕವಿತೆಯಲ್ಲಿ ಪ್ರಧಾನವಾಗಿ ಇಣುಕುವ ಮತ್ತೊಂದು ಅಂಶ ಸರಳ ಮಾತುಗಳಂತಹ ಅಭಿವ್ಯಕ್ತಿಯಲ್ಲಿ ಅಡಗಿರುವ ಹಾಸ್ಯದ ಜಲಕ್’ಗಳು..:))) ಕವಿತೆ ತುಂಬಾ ಹಿಡಿಸಿತು..

    ReplyDelete
  2. ಇಷ್ಟೇ ನನಗೆ ಸಿಕ್ಕಿದ್ದು. ನಲ್ಲಿಯಲ್ಲಿ ತೊಟ್ಟಿಕ್ಕುವ ನೀರಿಗಾಗಿ ಕಾದಿದ್ದೇನೆ. ನೀರು ಬರದಿದ್ದರೂ ಚಿಂತಿಲ್ಲ ಕಣ್ಣೀರು ಬರುವ " ಬರಗಾಲ" ಬರದಿರಲಿ. ಅಪ್ಪಟ ಭಾವ ಸಮೃದ್ಧತೆಯ ಕವಿತೆ.

    ReplyDelete
  3. all poems are good, very good indeed.

    ReplyDelete