About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Friday, January 27, 2012

ಜಾತ್ಯಾತೀತ

ಇಲ್ಲೊಬ್ಬ ಮನುಷ್ಯನಿದ್ದಾನೆ..
ಹುಟ್ಟಿದಾಗ ಎಲ್ಲರಂತೆ ಮಗು..
ಜನಿಸಿದ್ದು ನಕ್ಷತ್ರದಲ್ಲೋ,ಉಲ್ಕೆಯಲ್ಲೋ,
ಉಪಗ್ರಹದಲ್ಲೋ.. ಮಗುವಿದ್ದಾಗ
ಗೊತ್ತಿರಲಿಲ್ಲ ಅವನಿಗೆ..

ಹೀಗೇ ದೊಡ್ಡವನಾಗುತ್ತಾ
ಕೈ ಕಾಲು ಕೆಸರು ಮಾಡಿಸಿ..
ಕೊನೆಗೊಂದಿನ ಹೆಣ್ಣು ಬಸಿರಾಗುವ ಬಗ್ಗೆಯೂ ತಿಳಿಸಿ
ಬೆಳೆಸಿಬಿಟ್ಟಿತು ಸಮಾಜ..!

ಆದರೆ

ಹೆತ್ತ ತಾಯಿಯಲ್ಲಿ,
ಮುತ್ತಿಕ್ಕಿದ ಗೆಳತಿಯಲ್ಲಿ
ಒಂದೇ ಪ್ರೀತಿ ತೋರಿಸಿದ ಸಮಾಜ..
ಒಂದೇ ಜಾತಿ ತೋರಿಸಲಿಲ್ಲ.

ತನ್ನಪ್ಪನಾಕೆಯನ್ನು ಒಪ್ಪಿಕೊಂಡ ಜಾತಿ
ತನ್ನಾಕೆಯನ್ನು ಒಪ್ಪಲಿಲ್ಲ..
ಕಿಡಿ ಕಾಡ್ಗಿಚ್ಚಾಗಿದ್ದು ಆಗಲೇ..
ಬೆಳಗ್ಗೆ ಸಂಧ್ಯಾವಂದನೆ ಮಾಡಿ
ಸಂಜೆ ಕುರಿ ಕಾಯಲು ತೊಡಗಿದನಾತ..!

ಪರಶಿವನ ಪತ್ನಿಗೆ ಪರ್ವೀನಾ
ಎಂದು ಹೆಸರಿಟ್ಟ..!
ಕತ್ತಿನ ಶಿಲುಬೆ ಒಂದಿನವೂ ಚುಚ್ಚಲಿಲ್ಲ..
ಒಂದು ರಾಹುಕಾಲದಲ್ಲಿ
ತನ್ನಮ್ಮನಿಗೆ ತನ್ನಾಕೆಯನ್ನು ಪರಿಚಯಿಸಿ,
ಜಾತಿ ಬಿಡದೇ,
ಜನತಾದಳಕ್ಕೂ ಸೇರದೇ..
ಜಾತ್ಯಾತೀತನಾದ..!

ಇಲ್ಲಿ ಅದೇ ಮನುಷ್ಯನಿದ್ದಾನೆ..
ಬಹುಷಃ ಅದು ನಾನೇ ಆಗಿದ್ದೇನೆ..!

2 comments:

  1. ವಿಶ್ವಣ್ಣ ನಿಮ್ಮ ಕವಿತೆಗಳನ್ನು ಓದಲು ಖುಷಿಯಾಗುತ್ತದೆ ಯಾಕೆ ಗೊತ್ತೆ, ಕವಿತೆಗಳು ಸಾದಾ ಸೀದಾ ಇದ್ದು ಕವಿತೆಯ ಭಾವಗಳನ್ನು ಹಾಗೇ ತೆರೆದಿಡುತ್ತದೆ.. ನಿಮ್ಮ ಶೈಲಿಯಲ್ಲಿನ ನೈಜತೆ ಮತ್ತು ಬಿಚ್ಚು ಮಾತು ನಿಜಕ್ಕೂ ಎಲ್ಲಾ ಓದುಗರ ಮನಸ್ಸನ್ನು ಸೆಳೆದು ಬಿಡುತ್ತದೆ.. ವಿಷಯಗಳನ್ನು ಪರಿಪೂರ್ಣವಾಗಿ ಅಭಿವ್ಯಕ್ತಿಸಬಲ್ಲಿರಿ.. ನಿಮ್ಮಲ್ಲಿನ ಸೃಜನಶೀಲನಿಗೆ ನನ್ನದೊಂದು ಸಲಾಂ.. ಚೆಂದದ ಕವಿತೆ, ತುಂಬಾ ಹಿಡಿಸಿತು..:)))
    ಪರಶಿವನ ಪತ್ನಿಗೆ ಪರ್ವೀನಾ
    ಎಂದು ಹೆಸರಿಟ್ಟ..!
    ಕತ್ತಿನ ಶಿಲುಬೆ ಒಂದಿನವೂ ಚುಚ್ಚಲಿಲ್ಲ..
    ಒಂದು ರಾಹುಕಾಲದಲ್ಲಿ
    ತನ್ನಮ್ಮನಿಗೆ ತನ್ನಾಕೆಯನ್ನು ಪರಿಚಯಿಸಿ,
    ಜಾತಿ ಬಿಡದೇ,
    ಜನತಾದಳಕ್ಕೂ ಸೇರದೇ..
    ಜಾತ್ಯಾತೀತನಾದ..!
    ಈ ಸಾಲುಗಳು ತುಂಬಾ ಮಾರ್ಮಿಕವಾಗಿ ಜಾತ್ಯಾತೀತತೆಯ ತತ್ವವನ್ನು ಅವನ ಪ್ರತಿಮೆಯಿಟ್ಟು ಮಾರ್ಮಿಕವಾಗಿ ನಿರೂಪಿಸಿದೆ..

    ReplyDelete
  2. ವಾಹ್...ಪರಶಿವನ ಸತಿಗೆ ಪರ್ವೀನ್ ಎಂದ..
    ಶಿಲುಬೆ ಚುಚ್ಚಲಿಲ್ಲ...ತಟ್ಟುತ್ತವೆ ನಿಮ್ಮ ಸಾಲುಗಳು :)

    ReplyDelete