About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Thursday, March 22, 2012

ಕಾಮಾತುರಾಣಾಂ..

ನನ್ನ ಮುದ್ದು ಮಗಳಿಗೊಂದು ಪತ್ರ :

ನೀನಂದು ನನ್ನ ಕೈಯ್ಯಲ್ಲಿದ್ದಾಗ ಕೆನ್ನೆ ತೋಯ್ದ ಬಿಸಿಹನಿಯೊಂದು
ಖುಷಿ ತಾಳಲಾರದೇ ಜಾರಿಬಿದ್ದಿತ್ತು ನಿನ್ನ ಪುಟ್ಟುಪಿಂಕು ಅಂಗೈಗೆ.
ಜೋಯಿಸರ ಮಾತ ಊರಿಂದಾಚೆ ಬಿಸಾಕಿ
ನಿನ್ನ ಕಿವಿಯ ಕವಲಲ್ಲಿ ಹೆಸರೊಂದ ತೂಗಿಬಿಟ್ಟಿದ್ದೆ.. "ಸೃಷ್ಠೀ"....

ನಿನ್ನಮ್ಮನ ಥರ ಜಡೆಬಿಡಬೇಡ..
ಅವಳಂತೆ ಸೌಂದರ್ಯ ಸುಕ್ಕಾದೀತು ಎಂದಾಗ
ಬಂದ ಸಿಟ್ಟಿಗೆ ಬಚ್ಚಲ ಕೊಳೆ ಹಾಗೇ ಇತ್ತು.
ಸಾರಿಗೆ "ರುಚಿಗೆ ತಕ್ಕಷ್ಟು ಉಪ್ಪು" ಜಾಸ್ತಿ ಬಿದ್ದಿತ್ತು..!

ಬಂಪರಿಲ್ಲದ ಸೈಕಲ್ಲು,ಮುಂದೊಂದು ಹೂಬೊಕ್ಕೆ
ನಿನ್ನದೊಂದು ಸಿಹಿಮುತ್ತು,ನನ್ನಾಕೆಯ ಕಣ್ಣಲ್ಲಿನ
"ಹುಷಾರು ರೀ" ಎಲ್ಲಾ ಸೇರಿ ಅವತ್ತೊಂದಿನ
ಪೂರ್ಣಚಂದ್ರ ಮೂಡಿದ ಯುಗಾದಿಯಾಗಿತ್ತು ನನಗೆ..!

ನಿನ್ನ ಹಠ ನನ್ನದೂ ಆಗಿತ್ತೇನೋ ಗೊತ್ತಿಲ್ಲ.
"ಅಪ್ಪನ್ ಪಕ್ಕನೇ ಮಲಗ್ತೀನಿ ನಾನು.."
ಸೊಂಟದಾಚೆ ಕಾಲುಹಾಕಿದ ನಿನ್ನ,
ನೀ ನಿದ್ದೆಹೋದ ಮೇಲೆ ಅದೆಷ್ಟು ಮುದ್ದಿಸಿದ್ದೆ ಗೊತ್ತಾ?!
ಅಮೇಲಾಮೇಲೆ ನಿನ್ನ ಹಠ ನನ್ನದೇ ಆಯಿತು..

ಆದರೆ ಅಂದು..

ಮೊದಲೆಲ್ಲೂ ಹಾಗೆ ಗೊತ್ತಿರಲಿಲ್ಲ ನೀನು..
ರಕ್ತವರ್ಣದ ರೇಷಿಮೆ ಸೀರೆ,ಕೆಂಪು ತುಟಿ,
ಅಮಾಯಕತೆಯಲ್ಲಿ ನಂಗೆ ಮಾತ್ರ ಕಂಡ ಮಾದಕತೆ..
ಎಲ್ಲಕ್ಕೂ ಮಿಗಿಲಾದ ತುಂಬು ಕುಪ್ಪುಸ..!

ಕೆಲಸದಲ್ಲಾಸಕ್ತಿಹೀನನಾದೆ..
ನೇವರಿಸಿಕೊಳ್ಳುವ ನಿನ್ನ ಬೆನ್ನೆಲ್ಲಿಂದರಿತಾತು ಪಾಪ.
ತಪ್ಪೆಂದರಿವಿದ್ದರೂ ತಪ್ಪೇ ಮಾಡುತ್ತಿದ್ದೆ.
ನಿನ್ನಪ್ಪನಲ್ಲೊಬ್ಬ ಪಿಪಾಸು ಹುಟ್ಟಿಕೊಂಡುಬಿಟ್ಟ ಮಗಳೇ..

ಛೀ.. ನಾಚಿಕೆಯಿಲ್ಲದ ನಾಯಿ..
ಮನುನಿಯಮವ ಚರಂಡಿಗೆ ತೂರಿದ ಮುಖೇಡಿ..
ಕಾಮವಾಂಛೆಯ ಹಂದೀ..
ಅಯ್ಯೋ..
ಏನು ಮಾಡಲಿ..ನಿನ್ನಾ ಲಾವಣ್ಯದ ಮತ್ತಿಗೆ
ಈ ಸ್ವನಿಂದನೆಗಳೇನೂ ಮಾಡದಾದಾಗಲೇ ನಿರ್ಧರಿಸಿಬಿಟ್ಟೆ..

ಇಂಥ ನನ್ನಂಥವರಿಗೀಜಗವಲ್ಲಮ್ಮಾ..ತಿಪ್ಪೆಯಲ್ಲಿನ
ಹಡಬೆನಾಯಿಗೂ ಈ ಮನಸ್ಥಿತಿಯಿರದಿರಲಿ..
ಅಪ್ಪನಡಿಯುಸುರಿಗೆ ಕೊಳೆತ ಜೀವಚ್ಛವವಾಗದೇ
ತಂದೆಯಿಲ್ಲದ ಮಗಳಾಗಿಯೇ ಜೀವಿಸಿಬಿಡು ತಾಯೀ..
ನಿನ್ನೊಂದು ಹೇಸಿಗೆಯ ನೆನಪಾಗಿಯೂ ಉಳಿಸಬೇಡ ನನ್ನ.

ನಿನಗೆ ಹೇಳಲೇಬೇಕೆನಿಸಿದ್ದಿಷ್ಟು..

ನರಕ ನನಗಾಗಿ ಕಾದಿದೆ..ಹೋಗುತ್ತಿದ್ದೇನೆ.

- ಅಪ್ಪ.

****************************************************
ಇದು "ಈಡಿಪಸ್ ಕಾಂಪ್ಲೆಕ್ಸ್" ಹಾಗೂ "ಎಲೆಕ್ಟ್ರಾ ಕಾಂಪ್ಲೆಕ್ಸ್" ಗಳಂಥ ಮಾನಸಿಕ ವ್ಯಾಧಿಯ ಮೇಲೆ ಬರೆಯಲೆತ್ನಿಸಿದ ಕವನ.ತಂದೆಯೇ ಮಗಳೆಡೆಗೆ ಅನುರಕ್ತನಾಗುವ ಇಲ್ಲಿನ ವಿಷಯಕ್ಕೆ ವೈಜ್ನಾನಿಕ ಭಾಷೆಯಲ್ಲಿ ಯಾವ ಕಾಂಪ್ಲೆಕ್ಸೆನ್ನುತ್ತಾರೋ ಗೊತ್ತಿಲ್ಲ. ಆದರೆ ಪ್ರತಿದಿನ ಒಂದಿಲ್ಲೊಂದು ಪೇಪರಿನಲ್ಲಿ "ಮಗಳ ಮೇಲೆ ತಂದೆಯ ಅತ್ಯಾಚಾರ"ದಂಥ ಸುದ್ದಿಗಳನ್ನು ಓದುತ್ತಿರುವುದು ದುರಂತ.

Monday, March 19, 2012

ಒಂದು ತೂಕದ ಕನಸು..

ಕವನ,ಕವಿತೆ ಬರೀಬೇಕಂತ ಅನ್ಕೊಂಡಿದೀಯ..ಆಯ್ತು.ಆದ್ರೆ ಒಂದ್ ವಿಷ್ಯ ತಿಳ್ಕೋ ಈ ಬರಹಗಳ ಜಗತ್ತಿಗೆ ಮೊದಲು ಕಾಲಿಡ್ತಾ ಇಡ್ತಾ ಏಕ್ ದಂ ಒಂದೇ ಉಸುರಿಗೆ ನಿನ್ನ ಕಲ್ಪನೆಗಳನ್ನೆಲ್ಲ ಕೆತ್ತಿ ನಿಲ್ಲಿಸ್ತೀಯ ಅಂದ್ರೆ ಅದು ಆಗದ ಮಾತು.ಮೊದಲು ಕಲ್ಪನೆಗಳು ಶುದ್ಧವಾಗಿರಬೇಕು,ಚಪ್ಲಿ ಇಲ್ದೇ ದೇವಸ್ಥಾನಕ್ಕೆ ಹೋಗ್ಬೇಕು ಅಂತಾರಲ್ಲ ಹಾಗೆ.ಆಮೇಲೆ ವರ್ಣನೆಗಳಿಗೆ ನೀಟಾದ ರೂಪ ಕೊಡೋದನ್ನ ಕಲೀಬೇಕು,ಕಲೀಬೇಕಂದ್ರೆ ಲೈಬ್ರರಿಯ ಒಂದು ಸಾಲನ್ನಾದ್ರೂ ನುಂಗಿ ಜೀರ್ಣಿಸಿರಬೇಕು.

ನಿನ್ನ ಕವಿದಿಕ್ಕಿನ ರಸ್ತೆ ಬೇರೆ ಬೇರೆ ಆಯಾಮಗಳಲ್ಲಿ ಹಾದು ಹೋಗುತ್ತೆ,ಹೋಗಲೇಬೇಕು.ಮೊದಲ ಹಂತದಲ್ಲಿ ನಿನ್ನ ಪ್ರತಿಯೊಂದು ಮೊದಮೊದಲ ಕಿರುಗವಿತೆಗಳು ಪ್ರಾಸದ ಪಂಜರದಲ್ಲಿ ಸಿಕ್ಕಿಹಾಕ್ಕೊಳ್ತಾ ಇರ್ತವೆ.ಮುಂಚೆ ಏನು ಬರೆದರೂ ಕೊನೆಯಲ್ಲಿ ಮತ್ತದೇ ಪ್ರಾಸದಲ್ಲಿ ಕೊನೆ.ಅರ್ಥವಿಲ್ಲದ್ದನ್ನ ಸುಮ್ಸುಮ್ನೇ ಬರೆದು ಪ್ರಾಸ ಮಾತ್ರ ಸರಿಯಾಗಿರುವಂತೆ ನೋಡಿಕೊಳ್ತೀಯ ನೀನು..! ಹೀಗೇ ಒಂದಿಪ್ಪತ್ತೈದು ಕವನಗಳನ್ನ ಗೀಚಿದ ಮೇಲೆ ನಿಧಾನವಾಗಿ ಪ್ರಾಸದ ಅನಗತ್ಯತೆ ನಿನ್ನ ಗಮನಕ್ಕೆ ಬಂದು ಮುಂದಿನವುಗಳಲ್ಲಿ ಅದು ನಿಂಗೆ ಗೊತ್ತಿಲ್ದೇನೇ ಕಣ್ಮರೆಯಾಗಿರುತ್ತೆ.

ನಂತರದ ಆಯಾಮ ಬಹಳ ದಿನ ಇರುವಂಥದ್ದು:ಪ್ರೀತಿ,ಪ್ರೇಮಗಳ ಮೇಲಿನ ನಿನ್ನ ಪೆನ್ನಿನಾಟ. ಅವಳು,ಅವನು,ಮಲ್ಲಿಗೆ,ನೋಟ,ಜಡೆ,ಅದು ಇದು ಅಂತ ಎಂತೆಂಥಾ ಅದ್ಭುತಗಳನ್ನೇ ನೀನು ಹುಟ್ಟಿಸಿರ್ತೀಯ ಗೊತ್ತಾ..ನೀನು ಹಾಗೇ ಬರೀತಿದ್ರೆ ಪಾಟಿನಲ್ಲಿನ ಗುಲಾಬಿಗೆ ಬಾಡೋದೂ ಮರೆತುಹೋಗಿರುತ್ತೆ..! ಚಂದಮಾಮ,ಬಾಲಮಂಗಳದ ಬದಲು ಬೆಳಗೆರೆ ಬಂದಿರ್ತಾನೆ ನಿಮ್ಮನೆಗೆ.ಬೇರೆಯವರ ಕಮೆಂಟಿಗೆ,ಒಂದಿಷ್ಟು 'ಭೇಷ್'ಗೆ,ಹಾರೈಕೆಗೆ ಕಾಯೋಕೆ ಶುರುಹಚ್ಚಿಕೊಳ್ತೀಯ ನೀನು. ನಿನ್ನನ್ನ ನೀನು ಎಷ್ಟು ಬೇಗ ಈ ಆಯಾಮದಿಂದ ಹೊರದಬ್ಬುತ್ತೀಯೋ ಅಷ್ಟು ಬೇಗ ನೀನು ಅರ್ಧ ಮಾಗಿಬಿಟ್ಟೆ ಅಂತಲೇ ಅರ್ಥ.ಅದಕ್ಕಿರೋ ಒಂದೇ ದಾರಿ ಅಂದ್ರೆ ಮುಂದಿನ ಹಂತದ ಕಡೆಗಿನ ನಿನ್ನ ನೋಟ,ಓಟ.

ಮುಂದಿನದ್ದು ನೆನಪುಗಳ ಮಂಚ.ಹಿಂದೆಲ್ಲೋ ನಿನ್ನ ಬದುಕಲ್ಲಿ ಬಂದು ಹೋದ,ಕಂಡು ಬಿಟ್ಟ,ಛಕ್ಕನೆ ಅಲ್ಲೆಲ್ಲೋ ಮೂಡಿದ,ಆಡಿದ,ಒಡನಾಡಿದ ಸಂದರ್ಭಗಳನ್ನ ಕಟ್ಟಿಕೊಡೋಕೆ ಪ್ರಯತ್ನಿಸ್ತೀಯ.ಕಟ್ಟಿಕೊಡೋದರ ಯಶಸ್ಸಿಗೆ ಬೇಕಾದ ಪದ,ಪಾಂಡಿತ್ಯ,ಪಾತ್ರಗಳು ನಿನ್ನಲ್ಲಷ್ಟುಹೊತ್ತಿಗೆ ಕಾಲ್ಕೆಳಗಿರುತ್ತೆ.ಪ್ರಯತ್ನ ಒಳ್ಳೆಯದ್ದೇ.ಆದರೆ ಈ ಮಧ್ಯೆ ಬೇಡದ,ನೆನಪಿಸಿಕೊಳ್ಳಬಾರದೆನಿಸಿದ ಅದೆಷ್ಟೋ ನೆನಪುಗಳು ಉಮ್ಮಳಿಸಿಬರುವ ವಾಂತಿಯಂತೆ ಬಿಳಿಹಾಳೆಯ ಮೇಲೆ ಹರಡಿಕೊಂಡುಬಿಡುವ ಅಪಾಯ ಇರಬಹುದು.ಭಗ್ನಕವಿತೆಗಳ ಮುಷ್ಟಿಗೆ ಸಿಕ್ಕಿಬಿಡ್ತೀಯ ಆಮೇಲೆ. ಅರ್ಧದಲ್ಲೇ ಎದ್ದುಹೋದ ಹುಡುಗಿ ದಿಕ್ಕಿಗೆ ಮತ್ತೆ ತಿರುಗದೇ ಮುಂದಿನ ಹಂತ ನೋಡು,ಮುಕ್ಕಾಲು ಉದ್ಧಾರ ಆಗ್ತೀಯ.

ಹೀಗೆ ನಿಂಗೆ ಸಿಕ್ಕಿದ್ದು ಈ ಹಂತ:ನಾಲ್ಕನೇ ಆಯಾಮ.ಇದು ನಿನ್ನ ಕವಿತ್ವದ ಪಾಲಿನ ಬಹುಮುಖ್ಯ ಹಾಗೂ ಅಷ್ಟೇ ಸೂಕ್ಷ್ಮದ ಹಂತ.ಇಲ್ಲಿ ನೀನು ಓದೋಕೆ,ಬರೆಯೋಕೆ,ಜೀವಿಸೋಕೆ ಇಷ್ಟಪಡೋದು ನಿನ್ನ ಸುತ್ತಲಿನ ಸಮಾಜದ ಆಗುಹೋಗು,ಬೇಕುಬೇಡ,ಹುಳುಕುಬಳುಕು,ಕೀಟಲೆಕಾಮಗಳ ಮಧ್ಯೆ. ಇಲ್ಲಿ ಏನು ಬೇಕಾದರೂ ಬರೆಯೋ ಅವಕಾಶವಿದೆ ನಿಂಗೆ,ಹಕ್ಕಿಲ್ಲ..! ಸಮಾಜಮುಖಿ ವಿಷಯಗಳನ್ನ ಎಷ್ಟು ಸೂಕ್ಷ್ಮವಾಗಿ ಓದುಗನಿಗೆ ತಲುಪಿಸ್ತೀಯ ಅನ್ನೋದೊಂದು ಸವಾಲಾಗಿ ನಿಲ್ಲುತ್ತೆ ಇಲ್ಲಿ.ಒಂದು ವಿಷಯದ ಬಗ್ಗೆ ಒಂಚೂರು ತಾಳಮೇಳ ಮುಗ್ಗರಿಸಿಬಿಟ್ಟಿತೆಂದರೆ ಸಿಕ್ಕಿದವರು ಹರಿದು ಮುಗಿಸಿಬಿಡ್ತಾರೆ ನಿನ್ನ,ಬರಹಗಳನ್ನ.ಹಾಗಾಗಿ ಧರ್ಮ,ಜಾತಿ,ವ್ಯಕ್ತಿ,ಹೆಣ್ಣು ಇವುಗಳ ಬಗ್ಗೆ ನಿನ್ನ ನಡೆಗೆ ಸ್ವಲ್ಪ ಜಾಗ್ರತೆ ಕೊಡು.ಸಮಯ,ಸ್ವಾತಂತ್ರ್ಯ,ಹಕ್ಕು ದಕ್ಕಿದಾಗ ನೋವಾಗದಂತೆ ಮಗ್ಗಲು ಮುರಿ..! ಈ ಆಯಾಮದಲ್ಲಿ ನಿನಗೆ ಕಥೆ,ಕಾದಂಬರಿ ಬರೆಯುವುದೂ ಕರಗತವಾಗಿರುತ್ತೆ.ನಿನ್ನ ಹಲವು ಬರಹಗಳು ಪತ್ರಿಕೆಗಳಲ್ಲೂ ಬಂದು ನಿನ್ನದೇ ಆದ ಓದುಗ ಬಳಗವನ್ನ ಹುಟ್ಟಿಸಿಕೊಂಡಿದ್ದರೂ ಆಶ್ಚರ್ಯವಿಲ್ಲ.. ಈ ಹಂತದ ಜಂಭ,ಮೀಸೆಯೇರಿಸುವಿಕೆ,ಹುಂಬತನಗಳು ಬಹುತೇಕ ಕವಿಗಳಲ್ಲಿ ಮದುವೆ ಸೀಸನ್ ಬೇಧಿಯಷ್ಟೇ ಕಾಮನ್..! ಅದು ತಂತಾನೇ ನಿಲ್ಲೋಕೆ ಬಿಟ್ಬಿಡು.ಮುಂದಿನ ಆಯಾಮ ತಂತಾನೇ ಮುಂದೆ ನಿಂತಿರುತ್ತೆ..!

ಐದನೇಯದ್ದು:ಇಲ್ಲಿ ನೀನು ಬರೆಯೋ ಕಥೆ,ಕವಿತೆಗಳ ಅರ್ಥ ಅಷ್ಟು ಸುಲಭವಾಗಿ ಓದುಗನಿಗೆ ಗೊತ್ತಾಗೋದಿಲ್ಲ.ಒಂಥರಾ ಪಾರಮಾರ್ಥಿಕ ಚೌಕಟ್ಟು,ಮೈಕಟ್ಟು ಮೂಡಿರುತ್ತವೆ ಅವುಗಳಿಗೆ.ಕಣ್ಣಿಗೆ ಕಾಣದ ಒಂದು ಸಣ್ಣ ಧೂಳು,ನಿನ್ನಿಂದ,ಓದುತ್ತಿರುವವನಿಗೆ ಹತ್ತು ಸಾಲುಗಳ,ಭಾರದ ನಿರೂಪಣೆಯಾಗಿ ಗೋಚರವಾಗಿರುತ್ತದೆ..! ಅಥವಾ ಧೂಳಿನ ವಿಷಯ ಬಿಟ್ಟು ಅಲ್ಲಿ ಬೇರೆ ಇನ್ನೇನೋ ಕಂಡು ಚಪ್ಪಾಳೆ ತಟ್ಟಿರ್ತಾನೆ ಅವ..! ಆದರೆ ಇಲ್ಲಿ ನೀನು ಬರೆಯೋ ಕವನಗಳು ಅತ್ಯಂತ ಉಚ್ಛ ಮಟ್ಟದ್ದಾಗಿರುತ್ತವೆ ಅನ್ನೋದು ಸತ್ಯ.ನಿನ್ನೊಂದಷ್ಟು ಕವಿತೆಗಳು,ಜನ ಮಲ್ಕೊಳೋವಾಗ ಕೇಳಿ ಕಣ್ಮುಚ್ಚೋ ಸಿನಿಮಾ ಹಾಡುಗಳಾಗಿಯೂ ಬದಲಾಗಿರಬಹುದು..! ಈ ಹಂತ ದಾಟಿದೆಯೋ ಮುಂದಿನ ಹೆರಿಗೆ ಸಲೀಸು..!

ಕೊನೆಯ,ಆರನೆಯ ಆಯಾಮ: ಇದು ನೀರಿನ ಗುಳ್ಳೆ ಒಡೆದಷ್ಟು ಸುಲಭವಿರುತ್ತದೆ ನಿನಗೆ.ಇಲ್ಲಿ ನೀನು ಪ್ರಾಸ ಬಳಸುತ್ತೀಯೋ,'ಪ್ರೀತಿ' ತೋರಿಸ್ತೀಯೋ,ನೆನಪು ಹೆಕ್ಕಿ ಗೀಚ್ತೀಯೋ,'ಜಾತಿ'ಗೆ ಸೇರ್ತೀಯೋ,ಅದ್ವೈತವೋ,ವಿಶಿಷ್ಠಾದೈತವೋ ಎಲ್ಲಕ್ಕೂ ಅಶ್ವಿನಿ ಅಸ್ತು ಅಂತಾಳೆ.ಬರ್ದಿದ್ದೆಲ್ಲಾ ಹಾಡು,ಶಾಲೆಪದ್ಯ,ಸಾಹಿತ್ಯ ವೇದಿಕೆ-ಸಮ್ಮೇಳನಗಳ ಬ್ಯಾನರಿನಲ್ಲಿ ನಿನ್ನ ಕಾವ್ಯನಾಮ,ಅಷ್ಟಿಷ್ಟು ಬಿಳಿಕೂದಲು,ನಿನ್ನ ಬರಹಗಳ TRP ಹೆಚ್ಚಿಸೋ ಒಂದಷ್ಟು ಸಂವಾದ,ಟೀಕೆಗಳು.. ಅಬ್ಬಬ್ಬಾ.. ಇಲ್ಲಿ ಗ್ಯಾರಂಟಿ ನಿನ್ನ ಆತ್ಮಕಥೆ ಬರೆಯೋಕೆ ಶುರುಮಾಡಿರ್ತೀಯ ನೀನು..!

ಹೇಳೋಕೆ ಹೋದ್ರೆ ಇನ್ನೂ ಸಾಕಷ್ಟಿದೆ,ತಾಕತ್ತಿದೆ.ಆದರೆ ನೀನಿನ್ನೂ ಸಾಹಿತ್ಯದ ಅ ಆ ಇ ಈ ಕಲಿಯುತ್ತಿರೋ ಅಂಬೆಗಾಲ ಕೂಸು.. ನಾನಿಷ್ಟು ಹೇಳಿದರೂ,ಗೊತ್ತಾಯಿತೆಂದು ಒಂದೇ ಸಲ ನಾಲ್ಕು-ಐದನೇ ಆಯಾಮಗಳಿಗೆ ಹೋಗಿಬಿಡುತ್ತೇನೆ ಅಂದುಕೊಂಡರೆ ಅದು ಅಪ್ಪನ ಬೂಟು ಹಾಕಿದಂತೆಯೇ. ಪುಟ್ಟ ಪಾದಕ್ಕೆ ಪುಟ್ಟ ಚಪ್ಪಲಿಯೇ ಚಂದ ತಿಳ್ಕಾ.

ಹಿಂಗಂದು ಠಣ್ಣನೆ ಮಾಯವಾಗಿಹೋದರು ಕಡಲತೀರದ ಭಾರ್ಗವ..! ಕಣ್ಣುಜ್ಜಿ ಎದ್ದು ಹಾಳೆ,ಪೆನ್ನು ಕೈಗೆತ್ತಿಕೊಂಡೆ,ಬರೆದೆ..

"ಪಕ್ಕದ್ಮನೆ ಅಂಕಲ್ ಬಾಲು
ಮಮ್ಮಿ ಕೊಟ್ರು ಹಾಲು.."

ಓಹ್.. ನಂದಿನ್ನೂ ಮೊದಲ ಹಂತ..!!!
ನಿರಾಶನಾಗದೇ ನಂತರದ ಹತ್ತು ಸಾಲುಗಳ ಕೊನೆಯಲ್ಲೂ 'ಲು' ಬರೆದೆ..!

Saturday, March 17, 2012

ಇನ್ನಷ್ಟು ಹಾಯ್ಕುಗಳು:

* ಹುಟ್ಟು ಕುರುಡನ ನಗ್ನ ಸತ್ಯ:
  "ಅವನು ತನ್ನ ಒಳಗಣ್ಣಿನಿಂದ 'ಭಗವಂತ'ನನ್ನು ನೋಡಬಲ್ಲ..
  'ಬೆತ್ತಲೆ ಚಿತ್ರ' ನೋಡಲಾರ..!!"

* ಮಗು ಹೊಡೆದ ಪಟಾಕಿಗೆ ಬೆಚ್ಚಿದ ಅಂಗಡಿಯವನು
  "ಹಬ್ಬ ಆದ್ಮೇಲೇನೋ ನಿಂದು ಬೋಳಿಮಗನೇ" ಅಂದಾಗ
   ಮಗು ಸ್ಪಷ್ಟವಾಗಿ ಕಲಿತಿದ್ದು ಆತ ಹೇಳಿದ ಕೊನೇ ಪದ ಮಾತ್ರ,
   ಮತ್ತದೊಂದು ದುರಂತ.

* ಇಡೀ ದಿನ ಬಾಯ್ತುಂಬ ಹೊಗಳಿಸಿಕೊಳ್ಳಬೇಕಾದವನು
   ಅಸ್ಪಷ್ಟ ಮುಂಜಾವಿನಲ್ಲೇ ಹಾಳಾಗಿ ಹೋದ.
   ಉಳಿದಿದ್ದು ದಿನಪೂರ್ತಿಯ ಮೌನ.

* ಕರಡಿ ಕಾಡಿಗೆ ಹೋಯಿತು.."
   ಕರಡಿಯ ಬಣ್ಣ ಕಪ್ಪು..
   ಆದರೆ ನಂತರದ ಪದಕ್ಕೂ ಅದೇ ಅರ್ಥ ಸಿಕ್ಕಿದ್ದು ತಮಾಷೆ..!
   (ಕಾಡಿಗೆ - ಕಣ್ಣು ಕಪ್ಪು)

* "ರೇತಸ್ಸು" ಪದದ ಅರ್ಥ ಗೊತ್ತಿಲ್ಲದವನು..
  "ತೇಜಸ್ಸು" ಪದದ ಲೆವೆಲ್ಲಿಗೆ ಅದನ್ನು
   ಕೇಳಿ ಅನುಭವಿಸೋದು ದುರಂತ..!

* ಹೆಣ್ಣು,ಉಪ್ಪಿನಕಾಯಿ ಎರಡೂ ಒಂದೇ..
   ಜೊಲ್ಲಿನ ವಿಷಯಕ್ಕೆ ಬಂದಾಗ..!

* ಕೆಟ್ಟದ್ದನ್ನು ಮಾಡಬೇಡ ಎಂದವನು ಗಾಂಧಿ..
   ಅಡಿಕೆ ಬೆಳೆಗಾರರಲ್ಲ..
   ಅವರು ಗುಟ್ಕಾ ವಿರೋಧಿಗಳಲ್ಲ...!!

Friday, March 16, 2012

ಅವನಲ್ಲ "ಅವನಿ"ಗೆ...

ಗೆಲುವಿನ ಕಾಮಗಾರಿ ನಡೆದಿದೆ ಇಲ್ಲಿ..
ಕಾದ ಕಬ್ಬಿಣಕ್ಕೆ ಬೀಳುವ ಪೆಟ್ಟು ನಾಜೂಕಿನದ್ದಾಗಿರಬಾರದು..
ಶ್ರಮದ ಕೂಸಿಗೆ ಮುತ್ತಿಡಬೇಕಾದರೆ
ಶ್ರಮದ ಮೊದಲ ರಾತ್ರಿಯಲ್ಲಿ ಶ್ರಮಪಡಲೇಬೇಕು.

ಕಾಲಿಗೆ ತೊಡರುವ ಬಳ್ಳಿಯಂಥದ್ದು
ಹಣೆಬರಹದ ಗೆಲುವಷ್ಟೇ.
ಪ್ರಯತ್ನದ ಮುಂದಿನ ರೂಪವಲ್ಲ ಅದು.
ಗೆಲುವೆಂಬುದು ಹುಡುಕಿ ಹೋಗುವ ಬಳ್ಳಿಯಾಗಬೇಕು.

ಗೆಲುವಿಗೆ ನೂರು ಅಪ್ಪಂದಿರಂತೆ,
ಸೋಲು ಅನಾಥನಂತೆ.
ಸೋತವನು ಅನಾಥನಲ್ಲ,
ಗೆದ್ದವನಿಗಿದ್ದವನು ಒಬ್ಬನೇ ಅಪ್ಪ.
ಹೆಚ್ಚೆಂದರೆ ಸೋತವನು ಸೋತಿರಬಹುದು,
ಸತ್ತಿಲ್ಲವಲ್ಲ..?!

ಜಾತಕದವನು ಸಾವಿರ ಹೇಳಿದನಂತೆ:
ಗಂಡವಿದೆ,ಗೆಲುವಿಲ್ಲ,ಬರಿಸೋಲೇ..
ಅವನಾಡಿದ್ದು ನಿಜವೆಂದಾಗ
ಮುಕ್ಕೋಟಿ ದೇವರಾಟಗಳು ಲೆಖ್ಖಕಿಲ್ಲದವೇ..!

ಕೊನೆಯದಾಗಿ,

ಕಾಯಕ,ಕೈಲಾಸಗಳ ಕಷ್ಟ ಬೇಡವೆನ್ನುವವನು
ಕಾಡು ಕುರಿಯ ಕಾವಲಿಗೂ ಹೇಳಿಮಾಡಿಸಿದವನಲ್ಲ.
ಅವನಿಗಲ್ಲ ಗೆಲುವು,
ಅವನಲ್ಲ "ಅವನಿ"ಗೆ...

Wednesday, March 14, 2012

ಶಕ್ತಿಪಾತಮಾತಾ ತಾಂತ್ರಿಕಾಭಿವ್ಯಕ್ತಿಸ್ವರೂಪಿಣೀ..

ನಾಸಿಕದ ಗತ್ತಿನಂಥ ನತ್ತು,
ಬೆಂಡೋಲೆಯಂಡಲ್ಲಿಲ್ಲದ ಚುಚ್ಚುಗಾಯ,
ಕಿರುಬೆರಳಿನ ಕತ್ತಿನುಂಗುರ,
ಹಾರ,ಸಿಂಗಾರ,ರೇಷ್ಮೆನೂಲು..

ಪಂಚಾಕ್ಷರಿಯಭಿನಂದನೆ,
ಮಲ್ಲಿಗೆಹಾರ ಡೊಂಕಾಗಿನಿಂತ ಚೂಪೆದೆ,
ಎದೆಸೀಳಿಗಿಳಿಯದ ಪಚ್ಚೆಮಣಿಮಾಲೆ,
ಖಣಖಣಿಸಿಯೂ ಒಡೆಯದ ಕುಸುರಿಬಳೆ..

ಪೂರ್ಣಕುಂಭಕ್ಕೊರಗಿದ ಜುಟ್ಟುಗಾಯಿ,
ಪ್ರಭಾವಳಿಯೊಡತಿ.. ಅರಿಶಿನಪ್ರಭಾವತೀ,
ಕಿರೀಟದಂಚಿನ ಸರಮುತ್ತಿನ ಕೊನೆಯಗಂಟು,
ಹನ್ನೆರಡಾರತಿ ಸಾಕೆನ್ನದ ದೀಪಮೋಹಿತೆ..

ಸಾವಿರ ಸೂಜಿಮೊನೆಕಾಡುಗಳ ಶಾಂತವನ:ವದನ,
ಬಂದಿ ಬಂಧಿಸಿದ ತುಂಬುತೋಳು,
ಅಲೆಯಾದಿಯೆನಿಸುವ,ತರಿಯಿಲ್ಲದ ತಲೆಗೂದಲು,
ಜೇನು,ಹಾಲು,ತುಪ್ಪದ ತಪ್ಪದ ದಿನಸ್ನಾನ..

ಧೂಪ,ಘಮ,ಪ್ರಣಾಮ..ಸ್ತ್ರೀರಾಮ,
ಸುಷುಮ್ನಾತೀರದ ಸಹಸ್ರಾರಶ್ರೀಮಂತೆ,
ಬಿಸಿಪತಿಯ ಒಳಗಿಳಿಸಿ ತಣಿಸಿದ ಭಗ,
ಕಾಮಿನಿ,ಜನನಿ,ಭಗಿನಿ,ಕುಂಡಲಿನಿ,
ಶಕ್ತಿಪಾತಮಾತಾ ತಾಂತ್ರಿಕಾಭಿವ್ಯಕ್ತಿಸ್ವರೂಪಿಣೀ..

LSD(Drugs) ಸೇವಿಸಿ ವೇಶ್ಯಾಗೃಹಕ್ಕೆ ಹೋದಾಗ ಮಂಚದ ಮೇಲೆ ಕೂತವಳನ್ನ ಹೀಗೆ ಕಂಡು ವಾಪಾಸ್ ಓಡಿ ಬಂದವನೊಬ್ಬನ ಉವಾಚ..!!

ಸಂಸಾರ - ಸನ್ಯಾಸ

ಯೋಗಿ ಹೇಳುತ್ತಾನೆ..
ಬಾರೋ ಮನೆಯಿಂದಾಚೆ..ಹಳಸಿದ ಹೊಲಸಿದೆ ಅಲ್ಲಿ,
ಶಯನದ ಶೋಭನ ಶುಭವಲ್ಲ ನಿನಗೆ,
ಶುಚಿಯಿದ್ದಲ್ಲಿ ಶಿವನಿರುತ್ತಾನೆ..!

ಸಂಸಾರಿ ಹೇಳುತ್ತಾನೆ..
ಧ್ಯಾನ ಮಾಡಲು ನೆಲವಾದರಾಯಿತು,ಗುಹೆಯೇ ಯಾಕೆ?
ಕೈಲಾಸ ಗಬ್ಬೆದ್ದ ಗುಹೆಯಲ್ಲ.. ಶಿವನ "ಮನೆ"...!

ಯೋಗಿ ಇನ್ನೊಮ್ಮೆ..
ಯಮನ ಪಾಶದ ಒಂದು ಎಳೆಗೆ
ಒಂದಿನದ ವೀರ್ಯನಾಶ ಸಮ..
ಕೈ ಕೆಸರಾದರೆ ಕೊನೆಯುಸಿರು ಅಷ್ಟೇ..!!

ಇತ್ತ ಸಂಸಾರಿ..
ಎಲವೋ ಯೋಗಿ..ನೀನು ಹುಟ್ಟಿದ್ದು
ನಿನ್ನಮ್ಮನ ಬಸಿರಿನಿಂದ,
ನಿನ್ನಪ್ಪನ ಬಿಸಿಯುಸಿರಿನಿಂದ..ಕೆಸರಲ್ಲ ಅದು..
ದೇವರು ದೂರವಾಗುವುದು ತಪ್ಪುಗಳಿಂದ..
ಕೊನೆಯ ತಪ್ಪು ಕೊನೆಯದಾಗಿದ್ದರೆ
ಭೋಗಿ ಯೋಗಿಯಷ್ಟೇ ಪವಿತ್ರ..

ನಾಳೆ ಸುಮ್ನೆ ಮನೆಗೆ ಬಾ..

ಸಂಸಾರಿ -- ಅಪ್ಪ
ಯೋಗಿ -- ಮಗ...!

Tuesday, March 13, 2012

ಅಯ್ಯೋ ಕಷ್ಟ..

ನನ್ನದೇ ಕಷ್ಟಗಳಿಗೆ ಕಾವಲಾಗುವ ಆಸೆ..!
ಈ ಕಷ್ಟಗಳ ಗಾಂಚಾಲಿ ಸಾಮಾನ್ಯದ್ದಲ್ಲ..
ಎದೆಯೊಡ್ಡಿದಷ್ಟೂ ತಡೆಯೊಡ್ಡುವ
ಬೇವಾರಸಿ ಜಾತಿಯವು,ಅವು.

ಕಾವಲಾಗಿ,ಕಣ್ಣಲ್ಲಿ ಕಣ್ಣಿಟ್ಟು ಸಾಕಿ,ಕಾಪಾಡಿ,
ಮೇವು ಹಾಕಿ ಕೊನೆಗೊಮ್ಮೆ ಹೊಂಚು ಹಾಕಿ
ಕೊಂದುಬಿಡಬೇಕು ಅವುಗಳನ್ನ..!

ಬೆನ್ನ ಚೂರಿಯೆಂದಾದರೂ ಅಂದುಕೊಳ್ಳಲಿ,
ಹತ್ಯೆ ಮುಖ್ಯ ನನಗೆ.
ಬೆನ್ನಟ್ಟಿ ಮಗ್ಗಲು ಮುರಿಯಬೇಕು,
"ಕಷ್ಟ"ದ ಕೂಗು ಗಂಟಲಲ್ಲೇ ಅಂಟಿಹೋಗಬೇಕು,
ಆದಷ್ಟೂ ಭೀಕರವಾಗಿರಬೇಕು ಆ ಸಾವುಗಳು.

ಮುಹೂರ್ತ ನೋಡಿ ಅವುಗಳ ಪಿಂಡವಿಡಬೇಕು.
ತಿನ್ನಲು ಕಾಗೆ ಬಂದರೆ ಅದನ್ನೂ
ಕೊಕ್ಕು ಮುರಿದು ಸಾಯಿಸಬೇಕು..!
"ಕಷ್ಟ ಪಿಂಡ"ವ ತಿಂದು ಕಾ..ಕಾ ಎನ್ನುವ ಬದಲು
ಕ..ಕ.. ಎನ್ನುವಂತಾಗಬಾರದು ಅದು..!, ಪಾಪ.

ಮುಂದೊಬ್ಬ ಬುದ್ಧ,
ಕಷ್ಟವಿಲ್ಲದವನ ಬಳಿಯಿಂದ ಕಾಫಿಪುಡಿ ತಾ..ಎಂದಾಗ
ಹತ್ತೂರಿನ ಜನ ನಮ್ಮನೆಮುಂದೆ ಸಾಲುಗಟ್ಟಬೇಕು..!
ಕಾಫಿಪುಡೀ..ಕಾಫಿಪುಡೀ.. ಎಂದು ಕೂಗಬೇಕು..!!

ಆದರೆ ಈ ಇಮ್ಮಡಿ ಬುದ್ಧನಿಗೆ ಬುದ್ಧಿಯಿಲ್ಲ.
ಕಷ್ಟವಿಲ್ಲದವನು ಶ್ರೀಮಂತನಾಗಿರಬೇಕೆಂದಿಲ್ಲ..
ಸಾವಿರ ಟನ್ನುಗಳ ಕಾಫಿಪುಡಿ ಸರಬರಾಜಿನ
"ಕಷ್ಟ"ಕ್ಕೆ ಹೆದರಿ ಕೊನೆಗೂ
ನನ್ನ ಕಷ್ಟಗಳಿಗೆ ಕಾವಲಾಗುವ ಆಸೆ ಬಿಟ್ಟೆ..!

(ಆಸೆಯೇ ಕಷ್ಟಕ್ಕೆ ಕಾರಣ..! - ಬುದ್ಧ-2)

Sunday, March 4, 2012

ಇಳಿಸಂಜೆಯ ಕಣ್ಣೀರು

ದೂರದ ಮಯೂರನ ಮುದಕ್ಕೆ ಕಾದ
ಕಪ್ಪು ಸಂಜೆಯೊಂದು
ಹೆಪ್ಪುಗಟ್ಟಿದ ತಂಪ ಸಡಿಲಿಸಿ
ಕಣ್ಣೀರಾಯಿತು..:
ಆಗ ತಾನೇ ಜನಿಸಿದ ಆ ಮುಪ್ಪು ವಿಧವೆಯ ಕಂಡು..

ಜಾವದ ರಂಗೋಲಿ ಚುಕ್ಕಿ ತಪ್ಪಿದ ದಿನ,
ರಂಗಪ್ರವೇಶದ ಕಾಲ್ಗಳು ಫಕ್ಕನೆ ನಿಂತ ದಿನ,
ಕೊಟ್ಟ ಸಂಪಿಗೆಯನ್ನ ಶಕುಂತಲೆಯಾಗಿ ಮುಡಿದ ದಿನ,
ಏಳ್ಪದಿಗಳು ಸರಸರ ಮುಗಿಯಬಾರದೇ ಎನ್ನಿಸಿದ ದಿನ..
ಎಲ್ಲ ಕಡೆ ಇದ್ದ ಅವನಿವತ್ತು ಮಡಿದ ದಿನ..

ಕನ್ನೆತನದ ಕದಲಿಕೆಯಲ್ಲಿನ ಜೋಡಿಯುಸಿರುಗಳಲ್ಲೊಂದನ್ನು
ಕಾಲದ ಕೋಡಿ ಬಾಚಿ ತಿಂದಿದ್ದನ್ನು
ಕೆನ್ನೆಯಲ್ಲಿಳಿದ ಕಣ್ಣೀರು
ಮತ್ತೆ ಹೊತ್ತು ತರದು..
ಬೇಡುವ ಕಪಾಲ ಪರಶಿವನದ್ದಾದರೂ ಸರಿಯೇ..
ಭಿಕ್ಷೆಯಿಲ್ಲವೆಂದಮೇಲೆ ಭಿಕ್ಷೆಯಿಲ್ಲ.. ಅಷ್ಟೇ..

ತಲೆ ತಿರುಗಿದ ಆ ಗುಳಿಗೆ ಬೇಡದ ಘಳಿಗೆಯನ್ನ
ಹಿಂದೊಮ್ಮೆ ಕಚ್ಚಿ ಎಳೆದ ಗಡಸು ಕಿವಿಯಲ್ಲಿ
ಬೆನ್ನಿನಂಬಾರಿಯಾಸೆಗೆ ಬೇಗ ಹೇಳಿದ್ದು..
ಬಂಜೆಯಲ್ಲದವಳಾಗಿ ಬೆನ್ನಿನಿಂದ ಇಳಿದಿದ್ದು
ಸುಕ್ಕಾದ ಭಾವಗಳಲ್ಲಿ ಬೆರೆತುಹೋಗಿದೆ,ಮರೆತಿಲ್ಲ..!

ಹೆತ್ತಮ್ಮನದು ಮುತ್ತೈದೆ ಸಾವಂತೆ..
ಹೆತ್ತ ಮಗಳಿನ್ನೂ ಇಳಿಯದೆದೆಗಳ ಸಂಸಾರಗಿತ್ತಿ..
ತನ್ನ ಕೇಳುವರ್ಯಾರಿಲ್ಲಿ..??
ಕುಂಕುಮದ ಕೆಂಪಿನಾಸೆ ಮುದುಕಿಗಿರಬಾರದೇ?
ಭಾಗ್ಯದ ಬಳೆಗಾರ ಕೋಪಿಸಿಕೊಂಡನೇ?
ಮನೆಯೆದುರಿನ ಹೂಬಿಟ್ಟ ಗಿಡ ಅಣಕಿಸುತ್ತಿದೆ..

ಏನಾದರಾಗಲಿ..
ಒಂಟಿತನದ ಬಾಲ್ಯಸ್ನೇಹಿತೆ ತಾನಂತೂ ಅಲ್ಲ..
ಬಾರದವನು ಬೇರೆಯೆಂದಲ್ಲ..
ಗೂನು ಸ್ವಲ್ಪ ಕಾಡಬಹುದು..
ಹಲ್ಲಿಲ್ಲದ ಮೆಲ್ಲುವಿಕೆಗೆ ಆತ ಬಿಟ್ಟುಹೋದ
ನೆನಪ ತಾಂಬೂಲವಿದೆ..
ಗಿಡದ ಹೂವಿಗೆ ಬುದ್ಧಿ ಕಲಿಸಲು
ಮುಂದೆ ಅಳಿಯ ಮಾಡಿಸುವ ತನ್ನವನ ಭಾವಚಿತ್ರವಿದೆ..!

ಹಾಗೆ ಜಗುಲಿಯ ಈ ಮೂಕಜ್ಜಿಯಲ್ಲಿ
ಕನಸುಗಳು ಮತ್ತೆ ಆಕಳಿಸಿ ಕಣ್ಬಿಡುತ್ತಿವೆ..
ದೂರದಲ್ಲಿನ ಮಯೂರನ ಮುದವಿಲ್ಲದೆಯೂ
ಸಂಜೆಯ ಕಣ್ಣೀರಿನ ಮೌನ ಸಾಂತ್ವನಕ್ಕೆ
ಕೊನೆಗೂ ಫಲ ಸಿಕ್ಕಿದೆ..!!