About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Tuesday, January 24, 2012

ಇದರೆದುರ್ಯಾವ ಮಾತು..!?

ಇಪ್ಪತ್ತೆರಡು ವರ್ಷಕ್ಕೇ
ನೆನಪುಗಳ ಮೆಲುಕು ಮೆಲ್ಲುವ
ಮನಸಿನ ಚಟಕ್ಕೆ..
ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?

ಅಷ್ಟಕ್ಕೂ ಇಷ್ಟು ಪರ್ವಗಳಲ್ಲಿ ಆಗಿದ್ದಾದರೂ ಏನು?
ಮೈ ನೆಂದಿದ್ದು,ಬೆವರಿದ್ದು,
ಶಾಲೆಗೆ ಹೋಗದಿರಲು ಭಗೀರಥ ಪ್ರಯತ್ನ ಮಾಡಿದ್ದು..
ಕಂತ್ರಿ ನಾಯಿ ಸಾಕಿದ್ದು..
ಮತ್ತು ಮೀಸೆ ಮೂಡುವ ಮುನ್ನವೇ ಪೆನ್ನಿನಲ್ಲಿ ಚಿಗುರಿಸಿಕೊಂಡಿದ್ದು..!

ಕಣ್ಣ ಮುಂದೆ ಠುಸ್ಸೆಂದ ಪಟಾಕಿ
ಕಾಲ ಬಳಿ ಢಂ ಎಂದಿತ್ತು..!
ಅವತ್ತು ಅಪ್ಪ ಕೊಟ್ಟ ಹೊಡೆತ ಕೊನೆಯದೆಂದು
ಮೊದಲೇ ತಿಳಿದಿದ್ದರೆ..
ಮನೆಯಲ್ಲಿ ಹಟ ಮಾಡಿ ಪಾಯಸ ಮಾಡಿಸುತ್ತಿದ್ದೆ..!!

ಒಡೆದ ಕಾಲಿಗೆ ಮುಲಾಮು ಮೆತ್ತಿದ್ದೆ,
ಗಡ್ಡ ಬಂದಾಗೆ ಕೇಕೆ ಹಾಕಿದ್ದೆ..!
ಮರುದಿನದ ಬಿಸಿಲಿಗೆ ತಲೆಯಲ್ಲೊಂದು
ಬೆಳ್ಳಿಕೇಶ ಕೋರೈಸಿದಾಗ ಕಣ್ಣಲ್ಲಿ ರಕ್ತ ಸುರಿಸಿದ್ದೆ..!
ವಂಶಪಾರಂಪರ್ಯವೋ,ಸೋಪಿನ ಕೆಮಿಕಲ್ಲೋ..ಏನಾದರೂ
ಆಗ ನಂಗಿನ್ನೂ ಹದಿನೈದು..
ಮೇಲಾಗಿ
ಎದುರುಮನೆ ಜೀಜಿಂಬೆ, ಹುಡುಗಿಯಾಗಿ ಎದುರು ಕಾಣೋ ವಯಸ್ಸು..!!

ಅಲ್ಲಿಂದಿಲ್ಲಿಗೆ ಬದುಕು
ಸೂರ್ಯನ ಏಳು ಕುದುರೆಗಳ ಓಟ..
ಏಳು ವಸಂತಗಳ ಆಟ,ತಾಕಲಾಟ,ಪೀಕಲಾಟ,ದೊಂಬರಾಟ..
ಗೊಬ್ಬರ ಒಂದು ಬಿಟ್ಟು
ಸುಖ,ನೋವು,ಮಳೆ,ಉಲ್ಲಾಸ,
ಹುಡುಗಿ ಬಿಟ್ಟು ಹೋದ ಗಾಯ..
ಅಷ್ಟನ್ನೂ ಹಸಿ ಹಸಿಯಾಗಿ ತಿಂದು ಕೂತಿದೆ ಮನಸು..

ಮತ್ತದೇ ಪ್ರಶ್ನೆ..

ಸಂಭ್ರಮಿಸಲೋ? ತಲೆ ಕೆಟ್ಟು ಕೂರಲೋ?

6 comments:

  1. ಚೆನ್ನಾಗಿದೆ ವಿಶ್ವ. ನಿನ್ನ ಕವನ ಓದುವುದನ್ನು ಕಲಿಸಿಬಿಡುತ್ತದೆ. ಒಳ್ಳೆಯ ಕೆಲಸ ಅದು.

    ReplyDelete
  2. ವಿಶ್ವಣ್ಣ ನಾನು ನಿಮ್ಮ ಅಭಿಮಾನಿಯಾಗಿಬಿಟ್ಟಿದ್ದೇನೆ ಮಾರಾಯ್ರೆ.. ತುಂಬಾ ನೈಜವೆನಿಸುವಂತೆ ಬರೆಯುತ್ತೀರಿ.. ನಿಮ್ಮ ಶೈಲಿಯೇ ನಿಮಗೆ ದೊಡ್ಡ ಗುಣಾತ್ಮಕ ಅಂಶ..:))) ಬಾಲ್ಯದಿಂದಿಡಿದು ಯೌವ್ವನದವರೆಗೂ ಕಂಡ ಪರಿಪಾಟಲುಗಳು ಮತ್ತು ಅನುಭವಿಸಿದ ಖುಷಿಯ ಕ್ಷಣಗಳು, ಹುಡುಗಾಟದ ಆಟಗಳು ಮತ್ತು ಅನುಭವಿಸಿದ ನೋವುಗಳು ಎಲ್ಲವನ್ನು ಮನಮುಟ್ಟುವಂತೆ ಕವಿತೆಯಲ್ಲಿ ಬಿಂಬಿಸಿದ್ದೀರಿ.. ತುಂಬಾ ಹಿಡಿಸಿತು..:)))

    ReplyDelete
  3. ಇಷ್ಟು ವರ್ಷಗಳಲ್ಲಿ ಆದದ್ದಾದರೂ ಏನು ಎಂದು ನೆನೆದರೆ....ಬದುಕು ಪೂರ್ತಿ ಇಪ್ಪತ್ತೆರಡು ವಸಂತಗಳ ಆಟ,ತಾಕಲಾಟ,ಪೀಕಲಾಟ,ದೊಂಬರಾಟಗಳ ನೆನಪೇ ಹೆಚ್ಚು ಕಾಡುತ್ತದಲ್ವಾ..??
    ಕಾಡುವ ಬರಹಗಳೆಂದರೆ ಹೀಗೇ ಓದಿ ಮುಗಿದ ಮೇಲೂ ಮನಸ್ಸು ಓದುತ್ತಲೇ ಇರುತ್ತದೆ...

    ಇಷ್ಟವಾಯಿತು ಬರಹ.

    ReplyDelete
  4. yen anna full feelings.........mast iddu..:-)

    ReplyDelete