About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Saturday, January 21, 2012

ನೀಲಿ ನಿರೀಕ್ಷೆ

ನಾ ಕೊಟ್ಟ ನೀಲಿ ಸೀರೆಗೆ
ಸೆಂಟು ತಾಗಿಸಬೇಡ..
ನಿನ್ನ ಮೈಗಂಧವೇ ಚಂದ..
ಆ ಘಮಕ್ಕೆ ಪಲ್ಲು ಜಾರೀತು ಜೋಕೆ..!

ಅದೆಷ್ಟು ಒಪ್ಪವಾಗಿ ನೇಯುತ್ತೀಯ ನೆರಿಗೆಯನ್ನ..
ನಾಜೂಕು ರಾಣಿ..
ನನ್ನ ಇಸ್ತ್ರಿ ಮಾಡಿದ ಪ್ಯಾಂಟೂ ಅದರ ಮುಂದೆ
ಮಾಸಲು ಗೋಣಿ..!

ನಾನೇ ಹೊಲಿಸಿದ ಬ್ಲೌಸು
ನಿಂಗೆ ಸರಿಯಾಗುತ್ತೋ ಇಲ್ಲವೋ
ಎಂಬ ಅನುಮಾನ..
ಕನಸಲ್ಲೂ ಕದ್ದು ನೋಡಲಿಲ್ಲವಲ್ಲ
ನಿನ್ನೆದೆಯನ್ನ..!
ಕಾಮವಿಲ್ಲದ ಪ್ರೀತಿ
ಕಾವಿ ತೊಟ್ಟ ಯೋಗಿಯಷ್ಟೇ ಪವಿತ್ರ ಹುಡುಗೀ..!!

ಆದರೆ..

ಯೋಗಿಗೂ ಹಸಿವೆಯಾದಾಗ
ಹಣ್ಣು ತಿನ್ನುವ ಹಂಬಲವಿರುತ್ತದೆ..
ಸಂಬಂಧವೇ ಇಲ್ಲದ ಈ ನೆಪದಲ್ಲಾದರೂ
ಒಮ್ಮೆ ಸೀರೆಯುಡಿಸುವುದ ಕಲಿಸೇ ಹುಡುಗೀ..
ದೇವರಾಣೆ ಕಣ್ಮುಚ್ಚಿಕೊಳ್ಳುತ್ತೇನೆ..!

ನಿರೀಕ್ಷೆಯಲ್ಲಿ...

2 comments:

  1. ವಿಶ್ವಣ್ಣ ನಿಮ್ಮ ಶೈಲಿ ನಿಜಕ್ಕೂ ವಿಶಿಷ್ಠವಾದುದು.. ಹಸಿ ಹಸಿಯಾದ ಭಾವಗಳಿಗೆ ಬಣ್ಣದುಡುಗೆ ತೊಡಿಸಿ ಸುಂದರವಾಗಿ ಅಲಂಕರಿಸುತ್ತೀರಿ, ನಲ್ಲೆಗೆ ಸೀರೆ ಉಡಿಸುವಂತೆಯೇ..;) ಎಂತಹ ನಾಜೂಕಿನ ಭಾವಗಳನ್ನು ಹೆಕ್ಕಿದ್ದೀರಿ ನಿಜಕ್ಕೂ ಸಾಹಿತ್ಯ ಎಷ್ಟು ಸೃಜನಶೀಲವಾಗಬಹುದೆಂದು ನಿಮ್ಮ ಬರಹಗಳನ್ನು ನೋಡಿಯೇ ಖುಷಿಯಾಗುತ್ತದೆ..
    ಸಂಬಂಧವೇ ಇಲ್ಲದ ಈ ನೆಪದಲ್ಲಾದರೂ
    ಒಮ್ಮೆ ಸೀರೆಯುಡಿಸುವುದ ಕಲಿಸೇ ಹುಡುಗೀ..
    ದೇವರಾಣೆ ಕಣ್ಮುಚ್ಚಿಕೊಳ್ಳುತ್ತೇನೆ..!
    ಈ ಸಾಲುಗಳಲ್ಲಿನ ಪಂಚ್ ನಿಜಕ್ಕೂ ಅದ್ಭುತ.. ತುಂಬಾ ಹಿಡಿಸಿತು..:)))

    ReplyDelete