About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Monday, February 13, 2012

ಮಾ

ಯಾತ್ರೆಯ ಮೋಹದೊಳಗೆ
ಕಂಡುಬಿಟ್ಟ ಊರುಗಳು ಅದೆಷ್ಟೋ..
ಸಾವಿರ ಬಣ್ಣಗಳು,
ನೂರಾರು ವೇಷಗಳ ಮಂದಿ
ಒಂದಾದ ಜುಗಲ್ ಬಂದಿ..
ಕೋಟಿ ಕೋಟಿ ಕಂಠ ಕಲ ಕಲ ನಿನಾದ ಕರಾಲೇ..

ಒಂದೆಡೆ ಹಸಿರು,ಇನ್ನೊಂದೆಡೆ
ಬಿಸಿಲ ಉಸಿರ ಬಸಿರು..
ಟೆರೇಸು,ಹೆಂಚು,ಗರಿಮನೆಗಳು
ಎಲ್ಲವೂ ಕೊಡುವುದು ಒಂದೇ ನೆರಳು..
ಸುಜಲಾಂ ಸುಫಲಾಂ ಮಲಯಜಶೀತಲಾಂ..

ಬೇರೆಲ್ಲಾ ಮಣ್ಣಿನ ಕಡು ಹಳದಿ ಸೂರ್ಯ
ದೈವ ದಿನಕರನಾಗಿದ್ದಾನೆ ಇಲ್ಲಿ.
ಪಶ್ಚಿಮದವರು ಕಂಡಕಡೆ ಕೊಲ್ಲುವ
ಬಲಿ 'ಪಶು'.. ಕಾಮಧೇನುವಾಗಿದ್ದು ಇಲ್ಲೇ..
ಹೃದಯೇ  ತುಮಿ ಮಾ ಭಕ್ತಿ..

ಚಾಚಿದ ಕಾಲ್ಗಳ ಮೇಲೆ
ಮಕಾಡೆ ಕಂದಮ್ಮಗಳ ದುಂಡು ಸ್ನಾನ..
ಬಾಚುವ ಕೈಗಳ ತುಂಬ
ಗೊಂಚಲು ಕೂದಲ ಎಣ್ಣೆಗಂಪು..
ಅವಳು ಸೀರೆಯುಟ್ಟ ಭಾರತ ಮಾತೆ..
ಸುಹಾಸಿನೀಂ.. ಸುಮಧುರಭಾಷಿಣೀಂ..

ಹಾಗೊಮ್ಮೆ ನೋಡಿದರೆ ಮುಗಿಯದ ನನ್ನ ನಾಡು..
ರಾತ್ರಿಯಾದಂತೆ ಹೆದರಿ
ಮನೆಗೋಡಿಬಂದಾಗ ಬರಸೆಳೆದು
ಮುತ್ತಿಕ್ಕುವ ತಾಯಿಯಂಥ ಗೂಡು..

ಭಾರತ..

ನನ್ನ ದೇಶ,ನನ್ನವಳು,ನನ್ನವನು.. ನನ್ನದು.
ಅಬಲಾ ಕೇನ ಮಾ ಏತ್ ಬಲೇ..

1 comment:

  1. ಚೆನ್ನಾಗಿ ಬರೆದಿದ್ದಿ ಕಣೋ. ಭಾರತ್ ಮಾತಾ ಕಿ ಜೈ :)

    ReplyDelete