About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Wednesday, February 29, 2012

ಇದು ಕಣೇ ವಿಷ್ಯ..


ತೊಡೆಗೆ ನಾಯಿಕಚ್ಚಿದ ಗುರುತೂ ಕಾಣುವಂಥ ಮಿಣಿಲಂಗದ ಮಹಿಳಾ ಅಮ್ಮಣ್ಣಿಗಳ ಮಧ್ಯೆ ಚೌರಾಸಿಯಾ ಭಾನ್ಸುರಿ ನಾದದ ಗಾಂಭೀರ್ಯತೆಯಂತೆ ಭಾಗ್ಯಲಕ್ಷ್ಮಿಯ ಹಾಗೆ ಸೆರಗನ್ನ ಸರಿಯಾಗಿ ಹೊದ್ದ ನಿನ್ನ ನೋಡಿ, ಮರಿಕುನ್ನಿ ಥರ ನಿನ್ನ ಹಿಂದೆ ಓಡಿ, ನೀ ಬೇಡವೆಂದರೂ ನಡಿಗೆ ಸೈಕಲ್ಲಾದಿಯಾಗಿ ಬಸ್ಸಿನಲ್ಲೂ ಬೆಂಬಿಡದೇ ಸುತ್ತುವ, ಬೈಸಿಕೊಳ್ಳುವ ಮೊಂಡು ಹಠಕ್ಕೆ ಬಿದ್ದು, ನೀ ಬೇಜಾರಾದರೂ ಸರಿಯೇ ಎಂದು ಶಪಥಗೈದ ಬಬ್ರುವಾಹನನಂತೆ, ಛಲ ಬಿಡದ ವಿಕ್ರಮಾದಿತ್ಯನಂತೆ ಹಠಬಿಡದೇ ಪ್ರತಿದಿನದ ಮುಂಜಾವು,ಮಧ್ಯಾಹ್ನ,ಮುಸ್ಸಂಜೆಗಳ ಸಮಯಗಳಿಗೆ ಸರಿಯಾಗಿ ನಿನ್ಮುಂದೆ ವಿಧೇಯ ವಿದ್ಯಾರ್ಥಿಯಂತೆ ಹಾಜರಾಗುತ್ತಿದ್ದುದು, ಕೊನೆಗೊಂದು ಸುಂದರ ಶನಿವಾರ ಶಕ್ತಿ ಮೀರಿ ಬಾಯಿಗೆ ಬಂದಂತೆ,ಬಂದಿದ್ದೆಲ್ಲಾ ಬೈದಿದ್ದು ಬೇಜಾರಾಗಿ , ಮನಸಿಗೆ ಖೇದವೆನಿಸಿದರೂ ಕೆಳಗಿದ್ದ ಪ್ಯಾರಗಾನಿಗೂ ನಿನ್ನ ಕೈ ಹೋಗಿದ್ದು, ಹೋಗಿದ್ದು ನೋಡಿ ನಾ ಓಡದೇ ಜನಿವಾರ ಹಿಡಿದು ನಿಂತಲ್ಲೇ ಅವುಡುಗಚ್ಚಿ ನಿಂತು ನಂಗೆ ನಿಶ್ಶಕ್ತಿಯಾಗಿದ್ದು ಅತಿಶಯೋಕ್ತಿಯಲ್ಲದ ಆಶ್ಚರ್ಯಕರ ಸಂಗತಿಯಾದರೂ ಈ ನಡುವೆ,ಒಮ್ಮೆ,ಒಂದೇ ಒಂದು ಸಲ ನನ್ನ ಉವಾಚಕ್ಕೆ ಅವಕಾಶವಿತ್ತಿದ್ದರೆ ನಿನ್ನಲ್ಲಿ ನಾ ಕೇಳಬಯಸಿದ ಹೇಳಬಯಸಿದ ಪ್ರಶ್ನೋತ್ತರದ ಅವಧಿ ನಿನ್ನ ಕಾಲೇಜಿಗೆ ಲೇಟಾಗುವಷ್ಟೇನಿರಲಿಲ್ಲವಾದ್ದರಿಂದ,ಈಗಲೂ ಸಮಯ ಮೀರಿಲ್ಲವಾದ್ದರಿಂದ, ಅನಿಸಿದ್ದನ್ನು ನೇರವಾಗಿ ಹೇಳುವ ನೇರವಂತಿಕೆಯ ಹುಡುಗ ನಾನಾದ್ದರಿಂದ, ಅಂಥ ಮಡಿವಂತಿಕೆಯ ಹುಡುಗಿಯೂ ನೀನಲ್ಲವೆಂದು ನಂಗೆ ಈಗೀಗ ಗೊತ್ತಾದ್ದರಿಂದ ಕೇಳಿಹೇಳೇಬಿಡುತ್ತೇನೆ ಕೇಳು.. "ಥತ್ತೇರಿಕೆ.. ನಿನ್ ಹತ್ರ ದೊಡ್ ಪಿನ್ ಚಾರ್ಜರ್ ಇದ್ಯಾ..? ನಂದು ಹಳೇ ನೋಕಿಯಾ ಸೆಟ್ಟು.. ಎರಡು ಪಿನ್ ಹಾಕಿದ ಸೆರಗು ಮತ್ತು ಚೂರ್ರಲ್ಲಿ ಹೊಡೆಸಿಕೊಳ್ಳುತ್ತಿದ್ದ ಪ್ಯಾರಗಾನು ನೋಡಿ ನಿಂದೂ ಹಳೇ ಸೆಟ್ಟೇ ಅನ್ಕಂಡೆ..!!".

No comments:

Post a Comment