About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Thursday, February 23, 2012

ಸೆಣಬುಗಂಟಿನ ಮೆಲುಕುಗಳು

ಜಾರಿಹೋದ ವಯಸ್ಸು ಮತ್ತೆ ನೆನಪಾಗಿದೆ..
ಮೆದುಳಿನ ಸೆಣಬುಗಂಟಿನ ಗೋಣೀಚೀಲದಲ್ಲಿ
ಶುರುವಾದವು ಯೌವನದ ಮೆಲುಕುಗಳು..
ನಾ ದೊಡ್ಡವನಾದ ದಿನದೊಂದಿಗೆ..!

ನನ್ನ ದ್ವಂದ್ವಾರ್ಥದ ದಿನಗಳು
ಬಹುಷಃ ಹಲವರಿಗಿಂತ ಭಿನ್ನವೇನೋ..
ಕಾರಣ..
ರಕ್ಷಾಬಂಧನದ ದಿನ ರಜಾ ಹಾಕಿದ್ದೆ..
ಅಣ್ಣನಾಗುವ ಭಯಕ್ಕಲ್ಲ..
ಹುಡುಗಿಯರ ಕೈ ತಾಗುವ ಹೆದರಿಕೆಗೆ..!

ಕಳೆದ ವರ್ಷ ಅಸಹ್ಯವೆನಿಸಿದ್ದ
ತೇಪೆ ರಿಬ್ಬನ್ ಹುಡುಗಿ ಮಾಲಾ..
ಅವತ್ತಿನ ನನ್ನ ಮಟ್ಟಿಗೆ ಶಿಲಾಶ್ರೀಮತಿಯಾಗಿದ್ದು
ಈಗ ನೆನಪಾದ ಅಸಹ್ಯಗಳಲ್ಲೊಂದು..!
ಆಸೆಯೇ ಎದ್ದು ಬುದ್ಧನ ಮೇಯ್ದ ಕ್ಷಣ ಅದು..!

ಸ್ಪರ್ಶದ ಬಿಸಿ ಸುಟ್ಟಿದ್ದು..
ಪೆನ್ನು ಕೊಡುವಾಗ ರಾಧಿಕಾ ಕೈ ಮುಟ್ಟಿದ್ದು..
ಎರಡಕ್ಕೂ ಒಂದೇ ಪ್ರಶ್ನೆಯಿತ್ತು ನನ್ನಲ್ಲಿ.
"ಯಪ್ಪಾ.. ಏನಿದು ಹಿಂಗೆ..?!"
ಪುಳಕಕ್ಕೆ ಪರಿಧಿಯಿಲ್ಲವಂತೆ..!

ಬರುಬರುತ್ತಾ ಎದೆ ನೋಡುತ್ತಿದ್ದೆ..! ತಾಳಿ ಹುಡುಕಲು..!!
ಪಾದ ನೋಡುತ್ತಿದ್ದೆ.. ಕಾಲುಂಗುರದ ಹುಡುಕಾಟದಲ್ಲಿ.
ಹುಡುಕಿದ್ದು ಕಂಡರೆ ನೆನಪಾಗುತ್ತಿದ್ದವಳು ಅಮ್ಮ.
ಇಲ್ಲದಿದ್ದರೆ..
ಒಂದು ನಿಟ್ಟುಸಿರಿನೊಂದಿಗೆ ಮುಂದಿನ ಕ್ರಮ..!

ಹಾಗೊಂದು ಹುಡುಕಾಟದಲ್ಲಿ ಸಿಕ್ಕವಳೀ ಗೌರಿ..
ಆಮೇಲೆ..
ಮದಗಜಕ್ಕೆ ಕಿರುಸರಪಳಿ..
ಮೊಂಡುಹೋರಿಗೆ ಮೂಗುದಾರ..
ಕೊಬ್ಬಿದ ಕುದುರೆಗೆ ಕಣ್ಣುಪಟ್ಟಿ..
ಹಾಗೂ..
ಸ್ನೇಹಿತರ ಮಧ್ಯೆ ಅಂಕಲ್ ಪಟ್ಟ..!

ಈಗ ಮನಸು ಕೈಲಾಸದ ರಾತ್ರಿಗಳಷ್ಟು ಮೌನಿ..
ಪಕ್ಕದ ಪಾರ್ವತಿಗೆ ಗಂಗೆಯ ಭಯವಿಲ್ಲ..
ಮನದ ಮಾನಸಸರೋವರ
ತನ್ನೊಡಲಲ್ಲಿವಳನ್ನಡಗಿಸಿಕೊಂಡು
ಹೆಪ್ಪುಗಟ್ಟಿಬಿಟ್ಟಿದೆ.
ಮತ್ತು..
ಸೆಣಬುಗಂಟಿನ ಮೆಲುಕುಗಳು
ಬಾಕಿ ಇರುವಂತೆಯೇ ಮುಗಿದಿವೆ....

2 comments:

  1. ವಿಶ್ವಣ್ಣ ಕೆಲಸದ ಒತ್ತಡದಿಂದ ಪ್ರತಿಕ್ರಿಯೆ ತಡವಾಗುತ್ತಿದೆ.. ಈ ಕವಿತೆಯ ಕೆಲವು ಕಡೆ ನನ್ನನ್ನೇ ನಾನು ಕಂಡುಕೊಂಡಿದ್ದೇನೆ..;) ಕವಿತೆ ಎಂದಿನಂತೆ ಸರಾಗವಾಗಿ ಓದಿಸಿಕೊಳ್ಳುತ್ತದೆ, ನಿಮ್ಮ ಶೈಲಿಗೆ ಫುಲ್ ಮಾರ್ಕ್ಸ್.. ಯೌವ್ವನದ ಆಸುಪಾಸಿನಲ್ಲಿ ಸ್ವಲ್ಪ ಸಂಕೋಚ ಸ್ವಭಾವದ ಹುಡುಗರು ಅನುಭವಿಸುವ ಸಂದರ್ಭಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೀರಿ.. ಮನಮೆಚ್ಚಿದ ಕವಿತೆ, ಹಾಸ್ಯದ ಲೇಪ ಮನಸ್ಸಿಗೆ ಖುಷಿಯೊಂದಿಗೆ ಮುದ ನೀಡುತ್ತದೆ..:)))

    ReplyDelete