About Me

ಮನುಷ್ಯನಿಗೆ ಈ ಚಡಪಡಿಕೆಗಳು ಎಷ್ಟು ಹಳೆಯದೋ ಅಷ್ಟೇ ಹಳೆಯದಾಗಿದ್ದು ಅದರಿಂದ ಹೊರಬರುವ ಆತನ ಪ್ರಯತ್ನಗಳು. ಮುಗಿದದ್ದು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮನೆ ಹೊಸ್ತಿಲಲ್ಲಿ ಕಾದು ಕೂತು ತಟ್ಟೆ ಬಡಿಯುವ ಭಿಕ್ಷುಕರ ಗುಂಪಿನಂತೆ ಮತ್ತೊಂದಷ್ಟು ಚಡಪಡಿಕೆಗಳು..ಅವುಗಳನ್ನ ಹೊರನೂಕುವ ಆತನ ದಾರಿಗಳು ನೂರು.. ಅನಾಸಿನ್ ಮಾತ್ರೆಯಿಂದ, ಫ್ಯಾನಿಗೆ ನೇತು ಬೀಳುವ ಗತಿಯ ತನಕ. ಈ 'ಆತ'ನಲ್ಲಿ ನಾನೂ ಒಬ್ಬನಾಗಲೇಬೇಕಾಗಿರೋದ್ರಿಂದ ನನ್ನ ಚಡಪಡಿಕೆಗಳ ಮೂಲದ ಕುತ್ತಿಗೆ ಹಿಚುಕುವಲ್ಲಿ ನಂಗೋಸ್ಕರ ನಾನು ಮಾಡಿಕೊಂಡಿರೋ ಒಂದು ಸಫಲ ಪ್ರಯತ್ನ ಈ 'ಬರವಣಿಗೆ' : ಬಹುಷಃ ಹಲವರಂತೆ. ಈ ಪ್ರಯತ್ನಕ್ಕೆ ಬೇರೆ ಬೇರೆ ಹೆಸರೂ ಕೊಡಬಹುದು. "ನಂದೇ ಆದೊಂದು ಐಡೆಂಟಿಟಿ ಬೇಕು" ಅನ್ನೋ ಹುಚ್ಚು ಇರಬಹುದು, ಸ್ನೇಹಿತರ ಸರ್ಕಲ್ಲಿನಲ್ಲಿ "ಭಾವುಕ" ಅನ್ನೋ ಹಣೆ ಪಟ್ಟಿಯಿಂದ ಭಿನ್ನವಾಗಿ ಬೆಳೆಯಬಹುದು ಅನ್ನೋ ವಿಲಕ್ಷಣ ಮನೋಭಾವವಿರಬಹುದು, ಹುಡುಗಿ ಕೈ ಕೊಟ್ಟಾಗ ಬ್ರಾಂದಿ ಬದಲು ಬರಹ ಮೇಲು ಅನ್ನೋ ಮುಂಜಾಗರೂಕತಾ ಖುಷಿ ಇರಬಹುದು..! ಗೊತ್ತಿಲ್ಲ.... ಯಾರೇ ಏನೇ ಹೇಳಿದರೂ ಸಧ್ಯಕ್ಕೆ ಒಂದು ಸುದೀರ್ಘ "About Me" ಬರೆದು ಮುಗಿಸಿದ ಮಜಾ ಇದೆ..!!

Thursday, April 5, 2012

ತಾಂತ್ರಿಕ ಸ್ವಗತ

ಬೆಳ್ಳಂಬಿಳುಪಿನ ಹಿಮಾಲಯದೊಂದು
ಗೊತ್ತಿಲ್ಲದ ಗವಿಯೊಳಗಿದ್ದೇನೆ.
ಕೆಳಗೆ ಚರ್ಮ ತಾಟು
ಮುಂದೆ ತಾಳೀಸೌಟು.......

ಹೆಸರಿನರ್ಧಭಾಗ "ಬಾಬಾ"..!
ತಾಂತ್ರಿಕ ಪಥದ
ವಿಕಾಸವಾದವಾ..?!
ಗೊತ್ತಿಲ್ಲ.

ಜೀವದಾಯಿನಿ ಗಂಗೆ
ಹೆಣಗಳಿಗೆ ಜೀವ ಕೊಟ್ಟೇನೆಂದರೂ
ನಾನು ಬಿಟ್ಟೇನಾ?
ಅವು ನನ್ನ ಪಾಲಿನವು.
ಜಲದೊಳಗಿಂದ ಕಾಲೆಳೆತಂದು
ಭಸ್ಮ ತೀಡಿ ಶಿವನಪ್ಪಣೆಯ
ಶವಭಕ್ಷಣೆ ನಡೆಸಿದ್ದೆ..

ತಂತ್ರಾರಾಧಕರ ಪ್ರಕೃತೀ ಶಕ್ತಿ ಹೆಣ್ಣಿನ
ಭಾವಾರ್ದ್ರತೆಗಳಿಗೆ
ಕುಮ್ಮಕ್ಕು,ಕಿಮ್ಮತ್ತುಗಳಿಲ್ಲ ಇಲ್ಲಿ.
ತಂತ್ರಸಂಭೋಗದ ಹೆಣ್ಣುನಯನಗಳಲ್ಲಿ
ತುಂಬಿ ಒಣಗಿದ
ಉಪ್ಪನ್ನು ಗಮನಿಸಿದ್ದೇನೆ.
ಗಮನಿಸಿದ್ದೇನೆ ಅಷ್ಟೇ..

ಬಲಿಕೊಟ್ಟ ಕಾಡುಕೋಣಗಳ
ಕಿರುಚಿನಲ್ಲಿ ಕಾಳಿಯ ರೌದ್ರತೆಯ ಕಂಡಿದ್ದೇನೆ.
ಚಿತ್ತಾರ ಮಂಡಲದ ಸಮ್ಮೋಹಿನೀ ಬಣ್ಣಗಳು
ಸಮಾಧಿಸ್ಥಿತಿಗೊಯ್ದಿವೆ..
ಶವಗಳ ಜೊತೆಗಿನ ಮೌನ ಸಂವಾದಗಳು
ಅರಿಯದ ಜಗತ್ತುಗಳ ಪರಿಚಯಿಸಿವೆ.

ಇವತ್ತಿಗೆ ನನಗೆ ಇನ್ನೂರು ತುಂಬಿತು..!

ಕಳೆದೆರಡು ಶತಮಾನಗಳ ಸಾಧನೆ
ಮೈ ಕಸುವ ಕಳೆದಿಲ್ಲ,ಸುಕ್ಕು ತಂದಿಲ್ಲ.
ಗಾಳಿಯಲ್ಲೀಗಲೂ ತೇಲಿನಿಲ್ಲಬಲ್ಲೆ,
ಕೆಂಪುಗುಲಾಬಿಯ ಬಣ್ಣ ಬದಲಿಸಬಲ್ಲೆ,
ದೃಷ್ಠಿ ಮಾತ್ರಕ್ಕೆ ಜೀವದ ಬೂದಿ ಬಸಿಯಬಲ್ಲೆ..!

ಆದರೆ..

ಶತಮಾನಗಳ ಸುಭಿಕ್ಷ ಏಕಾಂತ ಸಾಕಾಗಿದೆ.
ಶಿಷ್ಯ ಶಿಷ್ಯರನ್ನಿಟ್ಟುಕೊಳ್ಳಲಾಗದು.
ಬಾಡದ ಬದುಕಿನಲ್ಲಿ ಘಮವೇ ಇಲ್ಲ.
ಭೋಲೇನಾಥನ ಸಂಗದಿಂದ ಕಡೆಯಲಾಗದ
ಕಾರ್ಗಲ್ಲಾಗಿಬಿಟ್ಟಿದ್ದೇನೆ.

ಒಂದಿನವೂ ಕಷ್ಟವೆನಿಸದ ಬದುಕು
ಕೈಗಿತ್ತಿದ್ದು ಸಾವಿರ,
ಕಾಡಿದ್ದು ನೂರು,
ಕಂಡಿದ್ದು ಹತ್ತು,
ದಕ್ಕಿದ್ದು ಒಂದೇ..
"ನೆಮ್ಮದಿರಹಿತ ಪ್ರಾಣ".

ಗೊತ್ತಿಲ್ಲದೀ ಗವಿಯಲ್ಲಿ
ಸಹಸ್ರಾರದ ಬ್ರಹ್ಮರಂಧ್ರ
ಅದೇ ಪ್ರಾಣಕ್ಕೆ ಕಾದು ಕುಳಿತಿದೆ..
ಮೋಕ್ಷದ ಮೋಹಕ ದಾರಿ
'ಇಚ್ಛಾಮರಣ'ಕ್ಕೆ, ಮುಂದಿರುವ
ತಾಳೀಸೌಟಿನ ಇನ್ನೊಂದು ಅರ್ಘ್ಯ ಸಾಕು...
ಇನ್ನೊಂದೇ ಅರ್ಘ್ಯ ಸಾಕು..
ಸಾಕು.

ಓಂ ಬಂ ಕ್ಲೀಂ ಹ್ರೀಂ ಚಾಮುಂಡಾಯೈ ವಿಚ್ಛೈ................

3 comments:

  1. ಶೂನ್ಯ ಸಂಪಾದನೆಯ ದನಿ ನಿಚ್ಚಳ. ಕಾವ್ಯ ತುಂಬಾ ಚೆನ್ನಾಗಿದೆ.

    ReplyDelete
  2. ಇದಕ್ಕೆ ಪ್ರತಿಕ್ರಿಯೆ ನೀಡುವಷ್ಟು ಪ್ರಬುದ್ಧತೆ ಖಂಡಿತ ನನ್ನಲ್ಲಿಲ್ಲ.. ಇದರಾಳವನ್ನು ಕಂಡು ಬೆಚ್ಚಿ, ಲಾಲಿತ್ಯವನ್ನು ಕಂಡು ಮೆಚ್ಚಿ ಮೂಕನಾಗಬಹುದಷ್ಟೇ.. ಅಘೋರಿಯ ಬಗ್ಗೆ ಬರೆಯಬೇಕೆಂಬ ಆಸೆ ಬಹಳ ಹಿಂದಿನಿಂದಲೂ ನನಗಿತ್ತು.. ಎಲ್ಲವನ್ನೂ ಬಿಟ್ಟು ಅಘೋರತ್ವವನ್ನು ಒಪ್ಪಿಕೊಂಡು ಹೊರಡುವ ಒಬ್ಬ ವ್ಯಕ್ತಿಯ ಕುರಿತಾಗಿ ಒಂದು ಪುಟ್ಟ ಕವನವನ್ನೂ ಬರೆದಿದ್ದೆ.. ಆದರೆ ಅದರ ಚರಮ ಸೀಮೆಯನ್ನು ತಲುಪಿ, ನನ್ನ ಕಲ್ಪನೆಯನ್ನು ಮೀರಿ ನೀವು ಬರೆದದ್ದು ನೋಡಿ, ನನಗೇ ಆತ್ಮತೃಪ್ತಿಯಾಗಿಬಿಟ್ಟಿದೆ..!!! ಅಘೋರಿ ಎಂದರೆ ಘೋರವಲ್ಲದ್ದು, ಎಂದರ್ಥ.. ಆದರೆ ಅವರ ಆಚರಣೆಯ ಬಗ್ಗೆ ಹಬ್ಬಿರುವ ಊಹಾಪೋಹಗಳಿಂದ ಅಘೋರಿ ಎಂದಾಕ್ಷಣ ಅತ್ಯಂತ ಘೋರವಾದವರು, ಎಂಬ ಕಲ್ಪನೆಯೇ ಹೆಚ್ಚಾಗಿದೆ..

    ಬಹಳಷ್ಟು ಸಲ ಹೀಗೆಯೇ ಆಗುತ್ತದೆ.. ಯಾವುದನ್ನು ನಾವು ಅದ್ಭುತ ಎಂದು ತಿಳಿದು ಅದರ ಬೆನ್ನು ಬೀಳುತ್ತೇವೆಯೋ, ಯಾವುದಕ್ಕಾಗಿ ಎಲ್ಲವನ್ನೂ ಬಿಟ್ಟು ಸಾಗುತ್ತೇವೆಯೋ, ದಕ್ಕಿಸಿಕೊಳ್ಳಲೇಬೇಕೆಂದು ಅವುಡುಗಚ್ಚಿ ಎಲ್ಲವನ್ನೂ ಸಹಿಸಿಕೊಳ್ಳುತ್ತೇವೆಯೋ, ಅದು ಸಿಕ್ಕಮೇಲೆ ಒಂದು ವಿಷಣ್ಣ ನಿರ್ಲಿಪ್ತತೆ ಆವರಿಸಿಕೊಂಡುಬಿಡುತ್ತದೆ.. (ಯಶಸ್ಸು ಕೀರ್ತಿಯ ಉತ್ತುಂಗವನ್ನೇರಿದ ವ್ಯಕ್ತಿಗೆ ಅದರಾಚೆಗೆ ಏನು ಬಯಸಬೇಕೆಂದು ಯೋಚಿಸಲೂ ಆಗುವುದಿಲ್ಲ.. ಹೆಚ್ಚೆಂದರೆ ಅವನು ಮತ್ತೊಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.. ಆದರೆ ಪಾಪ ಅಘೋರಿಗೆ ಬೇರೆ ಆಯ್ಕೆಯೇ ಇಲ್ಲವಲ್ಲಾ..?) ಆ ಹಂತವನ್ನೇ ಪರಮಗಮ್ಯವೆಂದುಕೊಂಡು ಬಿಟ್ಟಿರುವುದರಿಂದ, ಅದರಾಚೆಗೆ ಏನೂ ಗೋಚರವಾಗುವುದೇ ಇಲ್ಲ.. ಯಾಕಂದರೆ ಪರಮದಾಚೆಗೆ ಏನೂ ಇಲ್ಲ ಕೂಡ..!! ಇದೆ ಎಂದುಕೊಂಡಿದ್ದೆಲ್ಲವೂ ಮಾಯೆಯಂತೆ ಕರಗಿ ಹೋಗಿದೆ. ಎಲ್ಲ ಭೋಗಗಳನ್ನು ಎಲ್ಲೆ ಮೀರಿ ಅನುಭವಿಸುತ್ತಲೇ ಅವುಗಳ ಮೇರೆಯನ್ನೇ ಮೀರಿಬಿಡುವ ಶಕ್ತಿ ಬಹುಷಃ ಅಘೋರಿಗಳಿಗೆ ಮಾತ್ರವೇ ಸಾಧ್ಯವೇನೋ.. ವಿಚಿತ್ರ ಏನೆಂದರೆ.. ಪರಮಾರ್ಥಿಯಾದರೂ ಅಘೋರಿ ಕೂಡ ಸಾಮಾನ್ಯ ಮನುಷ್ಯರಂತೆ ಹಲುಬುತ್ತಾನೆ..!! ಮಾಯೆಯನ್ನು ಮೀರಿದರೂ ಭವವನ್ನು ಮೀರಲಾರದ ನಾವು ನಿಮಿತ್ತದವರು ಎಂಬುದನ್ನು ಇಲ್ಲಿ ಕವಿ ಹೇಳಿದ್ದಾನೆ.. ಇಲ್ಲೂ ಕೂಡ ಅದೇ ಆಗಿದೆ.. ಜಗದ ಜಂಜಡಗಳಿಂದ ಸಕಲ ಬಂಧನಗಳಿಂದ ಮುಕ್ತನಾಗಬಯಸಿದ ಅಘೋರಿಯೊಬ್ಬ ಕಡೆಗೆ ತನ್ನ ದೇಹವೇ ತನಗೆ ಬಂಧನವಾದದ್ದಕ್ಕೆ ಚಿಂತಿಸುತ್ತಾನೆ.!! ಅವನಿಗೂ ನೆಮ್ಮದಿ ಬೇಕಾಗಿದೆ. ಅವನಲ್ಲೂ ಮೋಕ್ಷದ, ಮೋಹವಿದೆ.. ಪರಮಾರ್ಥದ ಕಾಮವಿದೆ.. ತನ್ನ ನೀಗದ ಕಾಯದ ಬಗ್ಗೆ ಕೋಪವಿದೆ.. ತನ್ನ ತಾಂತ್ರಿಕ ಸಿದ್ಧಿಯ ಬಗ್ಗೆ ಮದವಿದೆ.. ಆದರೂ..? ಎಲ್ಲವೂ ಇದ್ದು, ಏನೂ ಇಲ್ಲವಾಗುವುದಕ್ಕೆ,, ಅಥವಾ ಏನೂ ಆಗದೆ ಎಲ್ಲವನ್ನೂ ಹೊಂದುವುದಕ್ಕೆ ಇರುವ ವ್ಯತ್ಯಾಸವನ್ನು ಅವನೂ ಈಗ ಯೋಚಿಸುತ್ತಿದ್ದಾನೆ..!! ಸಾಧಿಸಿದ್ದು ಶೂನ್ಯವೆಂದಾದಾಗ ಬದುಕೂ ಕೂಡ ಶೂನ್ಯವೆನಿಸಿಬಿಡುತ್ತದೆ.. ಅದರಂತೆಯೇ ಅವನು ಈಗ ಶೂನ್ಯ ಸಾಧನೆಯನ್ನೂ ಶೂನ್ಯ ಬದುಕನ್ನೂ ಗಾಳಿಗೆ ತೂರಿ, ಪರಮಶೂನ್ಯದತ್ತ ಪಯಣ ಬೆಳೆಸಲು ಸಜ್ಜುಗೊಂಡಿದ್ದಾನೆ..!! ಅಸಹಜ ಮಾನವರ ಅಂತರಂಗವನ್ನು ಹೊಕ್ಕು ಬಂದಂತಿರುವ ಈ ಕವಿತೆ ಕಟ್ಟಿದ್ದಕ್ಕೆ ನಿಮ್ಮೊಳಗಿರುವ ಅಗಾಧ ಪಾಂಡಿತ್ಯಕ್ಕೆ ನನ್ನ ಸಾವಿರ ಪ್ರಣಾಮಗಳು ಕವಿಗಳೇ... ನಿಮ್ಮ ಅಕ್ಷರ ಪಯಣ ನಿರಂತರವಾಗಿರಲಿ..

    ReplyDelete
  3. ಸ್ವಲ್ಪ ಖಾರ ಮತ್ತೆ ಘೋರವಾಗಿದೆ ಕವನ ! ಇದು ಮೊದಲ ಉದ್ಗಾರ.

    ತಂತ್ರ ಮತ್ತೆ ತಾಂತ್ರಿಕವಾದ ಶಬ್ದಗಳ ಬಳಕೆಗಳು ಪೂರ್ಣ ಕವನದಲ್ಲಿ ತುಂಬಾ ಇದೆ. ಇದು ಗೊಂದಲವನ್ನೂ ಅರ್ಥೈಸುವ ಪರಿಧಿಗಳನ್ನೂ ಅಲ್ಲಲ್ಲಿ ಒಡೆದು ಬಿಡುತ್ತಿದೆ.
    ಮತ್ತೆ ಒಂದು ತಪಸ್ಸು ಅಥವಾ ಒಂದು ಸಾಧನೆಯ ರೀತಿಯ ಸುತ್ತು ಸುತ್ತಿಸಿ ಅದನ್ನ ಪ್ರತಿಮೆ ಮಾಡುವಲ್ಲಿ ಸ್ವಲ್ಪ ಹೆಚ್ಚಿನ ಸಾಧ್ಯತೆಯನ್ನ ಗಮನಿಸಬೇಕಿತ್ತೆನಿಸುತ್ತದೆ.

    ಒಂದು ಕಥೆ ಹೇಳ್ತೇನೆ.. ಸ್ವಾಮಿ ರಾಮದಾಸರು ಹೀಗೇ ಹಿಮಾಲಯದಲ್ಲಿ ಸಂಚಾರ ಮಾಡುತ್ತಿದ್ದಾಗ ಕೆಲವು ಸ್ವಾಮಿಗಳನ್ನ ನೋಡಿದರು. ಒಬ್ಬರಲ್ಲಿ ನೀವು ಎಷ್ಟು ವರ್ಷಗಳಿಂದ ತಪಸ್ಸು ಮಾಡುತ್ತಿದ್ದೀರಿ ಮತ್ತು ಯಾಕಾಗಿ ಎಂದು ಕೇಳಿದಾಗ ಆ ಸ್ವಾಮಿಯು ಸುಮಾರು ವರ್ಷಗಳ ತಪಸ್ಸಿನ ಸಾಧನೆಯಿಂದ ನಾನು ಈ ನದಿಯನ್ನು ದೋಣಿಯಿಲ್ಲದೇ ದಾಟಬಲ್ಲೆ ಎಂದರಂತೆ.
    ರಾಮದಾಸರು, ಈ ಸಾಧನೆಗೆ ನಿಜವಾದ ಅರ್ಥವೇ ಇಲ್ಲ. ಒಂದೆರಡು ಪೈಸೆಗೆ ಅಂಬಿಗ ನಿನ್ನನ್ನು ಹೊಳೆ ದಾಟಿಸಬಲ್ಲ, ಅದು ಬಿಟ್ಟು ತಪಸ್ಸೇನಕ್ಕೆ ಎಂದು ಕೇಳಿದರಂತೆ.

    ಕವನದ ಆಶಯವು ಹೀಗೇ ಇರಬೇಕು ಎಂದುಕೊಂಡಿದ್ದೇನೆ. ಸಹಸ್ರಾರದ ಒಂದು ಮುಚ್ಚಳ ತೆರೆಯುವುದಕ್ಕೆ ಒಂದು ಸಕ್ಕಣದ ಅರ್ಘ್ಯ ಸಾಕು ! ಕವನ ಚೆನ್ನಾಗಿದೆ. ಸ್ವಲ್ಪ ಸರಳದ ಅರ್ಥೈಸುವಿಕೆಗೆ ಅಡಿಟಿಪ್ಪಣಿಯನ್ನೂ ಕೊಡಬೇಕಾಗುತ್ತದೆ ಕವಿಯ ಕರ್ತವ್ಯವಾಗಿ, ..

    ReplyDelete